ಬೀದರ್‌ನ ಚುಳಕಿ ನಾಲಾ ಜಲಾಶಯ ಅಭಿವೃದ್ಧಿಗೆ 175 ಕೋಟಿ ರೂ. ಡಿಪಿಆರ್ ಸಿದ್ಧ : ಸಚಿವ ಈಶ್ವರ್ ಖಂಡ್ರೆ

ಬೀದರ್ : ಚುಳಕಿ ನಾಲಾ ಜಲಾಶಯ ಅಭಿವೃದ್ಧಿಗೆ 175 ಕೋಟಿ ರೂ. ಮೌಲ್ಯದ ಡಿಪಿಆರ್ ವರದಿ ಸಿದ್ಧಗೊಂಡಿದೆ ಎಂದು ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಸೋಮವಾರ ಹುಲಸೂರ್ ತಾಲೂಕಿನ ಚುಳಕಿ ನಾಲಾ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಮಾತನಾಡಿದರು.
ಚುಳಕಿ ನಾಲಾ ಜಲಾಶಯವು ಸ್ಥಳೀಯ ರೈತರ ಆಶಾಕಿರಣವಾಗಿದ್ದು, ಸಮರ್ಪಕವಾಗಿ ನೀರು ಸಂಗ್ರಹವಾದರೆ ಶೇ.70 ಕ್ಕೂ ಹೆಚ್ಚು ಕೃಷಿಭೂಮಿಗೆ ನೀರಾವರಿ ಒದಗಿಸಲು ಸಾಧ್ಯ. ಆದರೆ ಹೂಳು ತುಂಬಿಕೆ ಹಾಗೂ ಕಾಲುವೆಗಳ ನವೀಕರಣದ ಕೊರತೆಯಿಂದಾಗಿ ಈಗ ಜಲಾಶಯವು ಬಸವಕಲ್ಯಾಣ ನಗರಕ್ಕೆ ಕುಡಿಯುವ ನೀರು ಪೂರೈಕೆಗೆ ಮಾತ್ರ ಸೀಮಿತವಾಗಿದೆ. ಇದನ್ನು ಪುನಶ್ಚೇತನ ಮಾಡಿದರೆ ರೈತರಿಗೆ ದೊಡ್ಡ ನೆರವಾಗಲಿದೆ ಎಂದು ಹೇಳಿದರು.
ಜಲಾಶಯದ ಸುತ್ತಮುತ್ತ ಹಾನಿಗೊಳಗಾದ ಬೆಳೆಗಳ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ಒದಗಿಸುವಂತೆ ಕಂದಾಯ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ ಸಚಿವರು, ಜಲಾಶಯಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಅಗತ್ಯ. ಸೈರನ್ ವ್ಯವಸ್ಥೆ ಹಾಗೂ ಗೇಟ್‌ಗಳ ಪುನಶ್ಚೇತನ ಕೂಡ ತಕ್ಷಣ ಕೈಗೊಳ್ಳಲಾಗುವುದು ಎಂದರು.
ಚುಳಕಿ ನಾಲಾ ಜಲಾಶಯ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡರೆ ಸುತ್ತಮುತ್ತಲಿನ 10 ಸಾವಿರ ಎಕರೆ ಕೃಷಿ ಜಮೀನಿಗೆ ನೀರಾವರಿ ಸಾದ್ಯವಾಗಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಸವಕಲ್ಯಾಣ ಸಹಾಯಕ ಆಯುಕ್ತ ಮುಕುಲ್ ಜೈನ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ದೇವಿಕಾ, ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಸಂತೋಷ್ ಮಾಕಾ, ತಹಶೀಲ್ದಾರ್ ಶಿವಾನಂದ ಮೇತ್ರೆ ಸೇರಿದಂತೆ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು.







