ಬೆಂಗಳೂರಿನಲ್ಲಿ ಜ.24 ರಂದು ಸನ್ನತಿ ಪಂಚಶೀಲ ಪಾದಯಾತ್ರೆ ಸಮಾರೋಪ ಸಮಾರಂಭ

ಬೀದರ್: ಜ. 24 ರಂದು ಬೆಂಗಳೂರಿನಲ್ಲಿ ಸನ್ನತಿ ಪಂಚಶೀಲ ಪಾದಯಾತ್ರೆಯ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಲಿದೆ ಎಂದು ಪೂಜ್ಯ ಭಂತೆ ಜ್ಞಾನಸಾಗರ್ ಥೇರೋ ಅವರು ತಿಳಿಸಿದ್ದಾರೆ.
ಸನ್ನತಿ ಬೌದ್ಧ ಐತಿಹಾಸಿಕ ಕ್ಷೇತ್ರವು ಆಂಧ್ರಪ್ರದೇಶದ ಬುದ್ಧವನ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವ ಮತ್ತು ಬೌದ್ಧ ಸಮುದಾಯದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಸನ್ನತಿಯಿಂದ ದಿ.15 ರಂದು ಪಾದಯಾತ್ರೆ ಪ್ರಾರಂಭವಾಗಿತ್ತು ಎಂದು ಅವರು ಹೇಳಿದ್ದಾರೆ.
ಪಾದಯಾತ್ರೆಯು ಕರ್ನಾಟಕ ರಾಜ್ಯದ ಪ್ರಮುಖ ನಗರಗಳಾದ ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯನಗರ, ಬಳ್ಳಾರಿ, ಚಿತ್ರದುರ್ಗ, ತುಮಕೂರು ಹಾಗೂ ಬೆಂಗಳೂರು ಗ್ರಾಮಾಂತರ ಮುಂತಾದ ಜಿಲ್ಲೆಗಳ ಮೂಲಕ 800 ಕಿ.ಮಿ ಕ್ಕೂ ಅಧಿಕ ದೂರ ಸಂಚರಿಸಿ, ನೂರಾರು ಗ್ರಾಮಗಳಲ್ಲಿ ಧಮ್ಮ ಸಂದೇಶವನ್ನು ಹಂಚಿ, ಜನಜಾಗೃತಿಯನ್ನು ಮೂಡಿಸಿತು ಎಂದಿದ್ದಾರೆ.
ಈ ಪಾದಯಾತ್ರೆಯ ಉದ್ದೇಶ ಬೌದ್ಧರ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರುವುದಾಗಿದೆ. ಸಮಾರೋಪ ಸಮಾರಂಭದಲ್ಲಿ ಸುಮಾರು 10,000 ಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ರಾಜ್ಯದ ಬೌದ್ಧ ಅನುಯಾಯಿಗಳು, ಸಂಘಟನೆಗಳು, ಪ್ರಗತಿಪರ ಚಿಂತಕರು, ವಿದ್ಯಾರ್ಥಿಗಳು ಹಾಗೂ ಕಾರ್ಮಿಕರು ಭಾಗವಹಿಸಲಿದ್ದಾರೆ. ಎಂದು ಮಾಹಿತಿ ನೀಡಿದ್ದಾರೆ.
ಕಾರ್ಯಕ್ರಮಕ್ಕೆ ಬೌದ್ಧ ಉಪಾಸಕರು, ಉಪಾಸಕಿಯರು, ಬೌದ್ಧ ಧರ್ಮದ ಅನುಯಾಯಿಗಳು, ಚಿಂತಕರು, ಪ್ರಗತಿಪರ ಸಂಘಟನೆಗಳ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ಕಪಿಲ್ ಗೊಡಬೋಲೇ, ಉಪಾಧ್ಯಕ್ಷ ಡಾ. ಸಚಿನ್ ಗಿರಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಶಕ್ತಿಕಾಂತ್ ಭಾವಿದೊಡ್ಡಿ, ಔರಾದ ತಾಲ್ಲೂಕಿನ ಅಧ್ಯಕ್ಷ ಮಲ್ಲಿಕಾರ್ಜುನ್ ಕಪಲಾಪೂರೆ ಹಾಗೂ ಇತರರು ಭಾಗವಹಿಸಿದ್ದರು.







