ವಿಧಾನ ಪರಿಷತ್ ಚುನಾವಣೆಯಲ್ಲಿ ಶಶೀಲ್ ನಮೋಶಿ ಗೆಲುವು ಖಚಿತ : ಶಾಸಕ ಪ್ರಭು ಚವ್ಹಾಣ ವಿಶ್ವಾಸ

ಔರಾದ್ : ಶಿಕ್ಷಕರ ಬಗ್ಗೆ ಅಪಾರ ಕಾಳಜಿ ಹೊಂದಿರುವ ನಾಯಕ ಶಶೀಲ್ ಜಿ.ನಮೋಶಿ ಅವರು ಈಶಾನ್ಯ ಶಿಕ್ಷಕರ ಮತಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಪ್ರಚಂಡ ಬಹುಮತದೊಂದಿಗೆ ಗೆಲ್ಲಲಿದ್ದಾರೆ ಎಂದು ಶಾಸಕ ಪ್ರಭು ಬಿ. ಚವ್ಹಾಣ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ಶಾಸಕರ ಕಚೇರಿ ಆವರಣದಲ್ಲಿ ಶನಿವಾರ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ನಡೆದ ಪಕ್ಷದ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ಶಶೀಲ್ ಜಿ.ನಮೋಶಿ ಅವರು ವಿಧಾನ ಪರಿಷತ್ ಸದಸ್ಯರಾಗಿ ಶಿಕ್ಷಕರ ಸಮಸ್ಯೆಗಳು, ಸರ್ಕಾರಿ ಶಾಲೆಗಳ ಅಭಿವೃದ್ಧಿ, ಶೈಕ್ಷಣಿಕ ಗುಣಮಟ್ಟ ವೃದ್ಧಿ, ಸೇವಾ ಭದ್ರತೆ, ವೇತನ, ಬಡ್ತಿ, ನಿವೃತ್ತಿ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಶಿಕ್ಷಕರ ಹಕ್ಕುಗಳು, ಸೇವಾ ಸಮಸ್ಯೆಗಳು ಹಾಗೂ ಸರ್ಕಾರಿ ನೌಕರರ ಬೇಡಿಕೆಗಳ ಕುರಿತು ಯಶಸ್ವಿಯಾಗಿ ಧ್ವನಿ ಎತ್ತುತ್ತಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಕರು ಮತ್ತು ಸರ್ಕಾರಿ ನೌಕರರ ಸಮಸ್ಯೆಗಳಿಗೆ ಸ್ಪಂದಿಸುವ ನಾಯಕತ್ವದ ಅಗತ್ಯವಿದೆ ಎಂದರು.
ನಮ್ಮ ಶಿಕ್ಷಕರು ಬಹಳಷ್ಟು ಬುದ್ದಿವಂತರಿದ್ದಾರೆ. ನಮ್ಮ ಅಭ್ಯರ್ಥಿ ಎಲ್ಲರಿಗೂ ನೆಚ್ಚಿನ ವ್ಯಕ್ತಿಯಾಗಿದ್ದು, ಎಲ್ಲ ಕಡೆಗಳಲ್ಲಿ ಎನ್‌ಡಿಎ ಅಭ್ಯರ್ಥಿ ಶಶೀಲ್ ಜಿ.ನಮೋಶಿ ಅವರ ಅಲೆ ಎದ್ದು ಕಾಣುತ್ತಿದೆ. ಇವರ ಅನುಭವ ಮತ್ತು ಸೇವೆಯೇ ವರದಾನವಾಗಿ ಪರಿಣಮಿಸಲಿದೆ. ನಮ್ಮ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಈ ದಿಶೆಯಲ್ಲಿ ಚುರುಕಿನಿಂದ ಕೆಲಸ ಮಾಡುತ್ತಿದ್ದಾರೆ. ಈ ಪ್ರಯತ್ನಗಳು ಮತ್ತಷ್ಟು ಜೋರಾಗಿ ನಡೆಸುವ ಮೂಲಕ ದೊಡ್ಡ ಅಂತರದ ಗೆಲುವು ತಂದುಕೊಡಲು ಶ್ರಮಿಸಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ಮಾತನಾಡಿ, ಚುನಾವಣೆಯಲ್ಲಿ ಪಕ್ಷದ ಸಂಘಟನೆಯೇ ಪ್ರಮುಖ ಶಕ್ತಿಯಾಗಿದೆ. ಪ್ರತಿಯೊಬ್ಬ ಕಾರ್ಯಕರ್ತರು ತಮ್ಮ ಜವಾಬ್ದಾರಿಯನ್ನು ಅರಿತು, ಒಗ್ಗಟ್ಟಿನಿಂದ ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಮತದಾರರನ್ನು ಸಂಪರ್ಕಿಸಿ ಪಕ್ಷದ ಬೆಂಬಲಿತ ಅಭ್ಯರ್ಥಿಯ ಸಾಧನೆಗಳು ಮತ್ತು ಶಿಕ್ಷಕರ ಪರವಾಗಿ ಮಾಡಿರುವ ಕೆಲಸಗಳ ಬಗ್ಗೆ ಪರಿಣಾಮಕಾರಿಯಾಗಿ ತಿಳಿಸಬೇಕು. ಎನ್‌ಡಿಎ ಅಭ್ಯರ್ಥಿಯ ಗೆಲುವಿಗಾಗಿ ಎಲ್ಲರೂ ಸಂಘಟಿತವಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ಪ್ರಾಶಸ್ತದ ಮತದಾನ ಇರುವುದರಿಂದ ಮತಪತ್ರದಲ್ಲಿ ಸಣ್ಣ ತಪ್ಪು ಗುರುತು ಹಾಕಿದರೂ ಮತ ಅಸಿಂಧುವಾಗುವ ಸಾಧ್ಯತೆಗಳಿರುತ್ತವೆ. ಕಳೆದ ಚುನಾವಣೆಯಲ್ಲಿ ಸಾಕಷ್ಟು ಮತಗಳು ಅಸಿಂಧುವಾಗಿದ್ದವು. ಹಾಗಾಗಿ ಮತದಾನದ ಬಗ್ಗೆ ಮುಂಚಿತವಾಗಿ ಶಿಕ್ಷಕರಿಗೆ ಅರಿವು ಮೂಡಿಸಬೇಕು ಎಂದು ಅವರು ತಿಳಿಸಿದರು.
ಈ ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್, ಪೀರಪ್ಪ ಔರಾದೆ, ಮುಖಂಡರಾದ ಕಿರಣ್ ಪಾಟೀಲ್, ಅರಹಂತ್ ಸಾವಳೆ, ರಾಜಶೇಖರ್ ನಾಗಮೂರ್ತಿ, ಚಂದು ಪಾಟೀಲ್, ರಾಮಶೆಟ್ಟಿ ಪನ್ನಾಳೆ, ಖಂಡೋಬಾ ಕಂಗಟೆ, ಶಿವಾಜಿರಾವ್ ಪಾಟೀಲ್ ಮುಂಗನಾಳ್, ಬಸವರಾಜ್ ಪಾಟೀಲ್, ಶಿವು ವಡ್ಡೆ, ಶ್ರೀಮಂತ್ ಪಾಟೀಲ್, ಸುಜಿತ್ ರಾಠೋಡ್, ಪ್ರಕಾಶ್ ಜೀರ್ಗೆ, ಉದಯ್ ಸೋಲಾಪೂರೆ, ಸಂಜು ಮುರ್ಕೆ, ರವೀಂದ್ರ ರೆಡ್ಡಿ, ಸಚಿನ್ ಬಿರಾದಾರ್, ದಯಾನಂದ್ ಘೂಳೆ, ಬಸವರಾಜ್ ಹಳ್ಳೆ, ಧನಾಜಿ ರಾಠೋಡ್ ಹಾಗೂ ಅಶೋಕ್ ಅಲ್ಮಾಜೆ ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.






