ಸೌದಿ ಅಪಘಾತ ಪ್ರಕರಣ : ಬೀದರ್ ಮೂಲದ ಮೃತ ಮಹಿಳೆಯ ನಿವಾಸಕ್ಕೆ ನಗರಸಭೆ ಅಧ್ಯಕ್ಷ ಮುಹಮ್ಮದ್ ಗೌಸ್ ಭೇಟಿ, ಸಾಂತ್ವನ

ಬೀದರ್ : ಸೌದಿಯಲ್ಲಿ ಉಮ್ರಾ ಯಾತ್ರಿಕರಿದ್ದ ಬಸ್ ಅಪಘಾತದಲ್ಲಿ ಮೃತಪಟ್ಟ ಬೀದರ್ ನ ಮೈಲೂರು ಸಿಎಂಸಿ ಕಾಲೋನಿ ನಿವಾಸಿ ರೆಹಮತ್ ಬಿ ಅವರ ನಿವಾಸಕ್ಕೆ ನಗರಸಭೆ ಅಧ್ಯಕ್ಷ ಮುಹಮ್ಮದ್ ಗೌಸ್ ಅವರು ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.
ಇಂದು ಬೆಳಿಗ್ಗೆ ಮುಹಮ್ಮದ್ ಗೌಸ್ ಮೃತ ಮಹಿಳೆಯ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಹಮ್ಮದ್ ಗೌಸ್, ಈ ಘಟನೆ ತುಂಬಾ ದುಃಖಕರವಾಗಿದೆ. ಸಚಿವ ರಹೀಮ್ ಖಾನ್ ಅವರು ಈ ಬಗ್ಗೆ ಸದಾ ನನ್ನ ಜೊತೆಗೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಮೃತ ಮಹಿಳೆಯ ಮೊಮ್ಮಗ ಎಂ ಡಿ ಸೋಹೆಲ್ ಮಾತನಾಡಿ, ನಮ್ಮ ಅಜ್ಜಿಯ ಮೃತದೇಹ ಅಲ್ಲಿಂದ ಇಲ್ಲಿಗೆ ಕಳುಹಿಸಲು ಅಲ್ಲಿನ ಸರಕಾರ ಒಪ್ಪುತ್ತಿಲ್ಲ, ಹಾಗಾಗಿ ನಮ್ಮ ಸಹೋದರ ಮತ್ತು ಚಿಕ್ಕಪ್ಪ ಹೈದಾರಾಬಾದ್‌ಗೆ ಹೋಗಿದ್ದಾರೆ. ಅಲ್ಲಿಂದ ಸೌದಿಗೆ ಹೋಗುವುದಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಲಾಗುತ್ತಿದೆ. ಆದರೆ ಇನ್ನು ಅದು ಖಚಿತವಾಗಿಲ್ಲ. ಈ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದರು.
ಇನ್ನೊರ್ವ ಮೊಮ್ಮಗ ಮಹಮ್ಮದ್ ಗೌಸ್ ಮಾತನಾಡಿ, ನಮ್ಮ ಅಜ್ಜಿ ಇಲ್ಲಿಂದ ಹೈದರಾಬಾದ್‌ಗೆ ಹೋಗಿ ಅಲ್ಲಿಂದ ನ.9ಕ್ಕೆ ಉಮ್ರಾಕ್ಕಾಗಿ ಹೋಗಿದ್ದರು. ಈ ದುರಂತ ರವಿವಾರ ರಾತ್ರಿ ನಡೆದಿದೆ. ಸಚಿವ ರಹೀಮ್ ಖಾನ್ ಅವರು ನಗರಸಭೆ ಅಧ್ಯಕ್ಷರನ್ನು ನಮ್ಮ ಮನೆಗೆ ಕಳುಹಿಸಿದ್ದಾರೆ. ಅವರು ಬಂದು ನಮಗೆ ಧೈರ್ಯ ತುಂಬಿದ್ದಕ್ಕಾಗಿ ಧನ್ಯವಾದಗಳು ಎಂದು ಹೇಳಿದರು.







