ಬ್ಯಾಂಕ್ ಎಟಿಎಂಗಳಲ್ಲಿ ಕಡ್ಡಾಯವಾಗಿ ಸೆಕ್ಯೂರಿಟಿ ನೇಮಿಸಬೇಕು : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ

ಬೀದರ್ : ಬ್ಯಾಂಕ್ ಎಟಿಎಂ ಗಳಲ್ಲಿ 24X7 ರಂತೆ ಕಡ್ಡಾಯವಾಗಿ ಸೆಕ್ಯೂರಿಟಿ ನೇಮಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ಬ್ಯಾಂಕ್ ಮ್ಯಾನೇಜರ್ ಗಳನ್ನು ಸೂಚಿಸಿದರು.
ಇಂದು ಪೊಲೀಸ್ ಅಧೀಕ್ಷಕರ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಬರುವ ಎಲ್ಲಾ ಬ್ಯಾಂಕ್ ಮ್ಯಾನೇಜರ್ ಗಳ ಜೊತೆಗೆ ಬ್ಯಾಂಕ್ ಹಾಗೂ ಎಟಿಎಂ ಸೆಕ್ಯೂರಿಟಿ ಸಂಬಂಧ ಸುದೀರ್ಘವಾಗಿ ಚರ್ಚೆ ನಡೆಸಿ ಅವರು ಮಾತನಾಡಿದರು.
ತಮ್ಮ ತಮ್ಮ ಬ್ಯಾಂಕ್ ಗಳಲ್ಲಿ ಸಕ್ರಿಯ ಹಾಗೂ ಆರೋಗ್ಯವಂತರಾಗಿರುವ ಸಿಬ್ಬಂದಿಯನ್ನು ಸೆಕ್ಯೂರಿಟಿ ಗಾರ್ಡ್ ಆಗಿ ಕರ್ತವ್ಯಕ್ಕೆ ನೇಮಿಸಿಕೊಳ್ಳಬೇಕು. ಎಲ್ಲಾ ಬ್ಯಾಂಕ್ ಗಳ ಒಳಗೆ ಹಾಗೂ ಸುತ್ತಲೂ ಮತ್ತು ಎಟಿಎಂ ಗಳ ಒಳಗಡೆ ಹಾಗೂ ಸುತ್ತಲೂ ಕಡ್ಡಾಯವಾಗಿ ಸಿಸಿ ಕ್ಯಾಮೆರಾಗಳು ಆಳವಡಿಸಬೇಕು ಎಂದು ಸೂಚನೆ ನೀಡಿದರು.
ಬ್ಯಾಂಕ್ ಮ್ಯಾನೇಜರ್ ಗಳ ಕೋರಿಕೆ ಮೇರೆಗೆ ಸಂಬಂಧ ಪಟ್ಟ ಬ್ಯಾಂಕಿನ ರಿಜಿನಲ್ ಆಫೀಸ್ ಗಳಿಗೆ ಪೊಲೀಸ್ ಇಲಾಖೆ ವತಿಯಿಂದ ಕೂಡ ಗೌರ್ಡ್ ಗಳನ್ನು ನೇಮಕ ಮಾಡಿಕೊಳ್ಳುವ ಕುರಿತು ಪತ್ರ ವ್ಯವಹಾರ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ್ ಪೂಜಾರ್ ಹಾಗೂ ಜಿಲ್ಲೆಯ ಎಲ್ಲ ಬ್ಯಾಂಕ್ ಮ್ಯಾನೇಜರ್ ಸೇರಿದಂತೆ ಇತರರು ಭಾಗವಹಿಸಿದ್ದರು.





