ಶಾಹೀನ್ ಸಂಸ್ಥೆಯಿಂದ ಶಿಕ್ಷಣದ ಜೊತೆಗೆ ಮಾನವೀಯ ಕಾರ್ಯ: ಸುರೇಶ್ ಚೆನಶೆಟ್ಟಿ

ಬೀದರ್ : ಶಾಹೀನ್ ಸಂಸ್ಥೆಯು ಶಿಕ್ಷಣದ ಜೊತೆಗೆ ಸಮಾಜಕ್ಕೆ ಉಪಯುಕ್ತವಾದ ಮಾನವೀಯ ಕೆಲಸಗಳನ್ನು ಮಾಡುತ್ತಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಸುರೇಶ್ ಚೆನಶೆಟ್ಟಿ ಹೇಳಿದರು.
ನಗರದ ಶಾಹಿನ್ ಕಾಲೇಜಿನ ಮುಖ್ಯ ಆವರಣದಲ್ಲಿ ಬುಧವಾರ ಮೊಬೈಲ್ ಬಳಕೆ, ಮಹಿಳಾ ಸುರಕ್ಷತೆ, ಸ್ವಚ್ಛತೆ ಕುರಿತ ಸಮೀಕ್ಷೆಗೆ ಚಾಲನೆ ನೀಡಿ ಮಾತನಾಡಿದ ಸುರೇಶ್ ಚೆನಶೆಟ್ಟಿ, ಶಾಹೀನ್ ಸಂಸ್ಥೆಯು ಬೀದರ್ ನಗರವನ್ನು ದುಶ್ಚಟಗಳಿಂದ, ಭಿಕ್ಷಾಟನೆಯಿಂದ ಮುಕ್ತಗೊಳಿಸಲು ಶ್ರಮಿಸುತ್ತಿದೆ. ಸರಳ ವಿವಾಹ ಕುರಿತು ಜಾಗೃತಿ ಮೂಡಿಸುತ್ತಿದೆ. ಇದೀಗ ಅತಿಯಾದ ಮೊಬೈಲ್ ವೀಕ್ಷಣೆಯಿಂದ ಮಕ್ಕಳ ಮೇಲಾಗುತ್ತಿರುವ ಪರಿಣಾಮಗಳ ಬಗ್ಗೆ ಸಮೀಕ್ಷೆ ನಡೆಸಲು ಮುಂದಾಗಿದೆ. ಇದೊಂದು ಮಹತ್ವದ ಮತ್ತು ಮಾದರಿಯಾದ ಕಾರ್ಯವಾಗಿದೆ ಎಂದು ಹೇಳಿದರು.
ಮಕ್ಕಳನ್ನು ಮೊಬೈಲ್ ಮೋಹದಿಂದ ಬಿಡುಗಡೆ ಮಾಡಲೇಬೇಕಾಗಿದೆ. ಇದಕ್ಕಾಗಿ ಸಾಮೂಹಿಕ ಪ್ರಯತ್ನ ನಡೆಯಬೇಕು. ಪಾಲಕರೂ ಇದರಲ್ಲಿ ಭಾಗಿಯಾಗಬೇಕು. ಮಹಿಳೆಯರ ಸುರಕ್ಷತೆ ಮತ್ತು ಸ್ವಚ್ಛತೆ ಕುರಿತೂ ಸರ್ವೆ ನಡೆಸುತ್ತಿರುವುದು ಅನುಕರಣೀಯ ಎಂದು ತಿಳಿಸಿದರು.
ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅದ್ಯಕ್ಷ ಡಾ.ಅಬ್ದುಲ್ ಖದೀರ್ ಅವರು ಮಾತನಾಡಿ, ಮನೆ ಮನೆಗೆ ಭೇಟಿ ಮತ್ತು ಆನ್‌ಲೈನ್ ಮೂಲಕ ನಡೆಸಲಾಗುವ ಈ ಸಮೀಕ್ಷೆಯಲ್ಲಿ ಮಹಿಳೆಯರ ಸುರಕ್ಷತೆಗಾಗಿ ಇರುವ ಕಾನೂನು, ಸರಕಾರದ ವ್ಯವಸ್ಥೆಗಳ ಬಗ್ಗೆಯೂ ಮಾಹಿತಿ ನೀಡಲಾಗುತ್ತದೆ. ಜೊತೆಗೆ ಸ್ವಚ್ಛ ಬೀದರ್ ನಿರ್ಮಾಣಕ್ಕಾಗಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವ ಕಾರ್ಯವೂ ನಡೆಯಲಿದೆ ಎಂದರು.
ಮೂರು ಮುಖ್ಯ ಸಂಗತಿಗಳ ಬಗಿಗೆನ ಈ ಸಮೀಕ್ಷೆಯು 15 ದಿನಗಳ ಕಾಲ ನಡೆಯಲಿದ್ದು, ಶಾಹೀನ್ ಕಾಲೇಜಿನಲ್ಲಿ ಬಿಎ, ಬಿಎಸ್‌ಸಿ, ಬಿಕಾಂ ಮತ್ತು ಬಿಸಿಎ ಓದುತ್ತಿರುವ 200 ವಿದ್ಯಾರ್ಥಿಗಳು ಈ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವರು. ಆನ್‌ಲೈನ್ ಸಮೀಕ್ಷೆಗಾಗಿ ಶಾಹೀನ್ ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಲಿಂಕ್ ಕೊಡಲಾಗಿದೆ. ಇದನ್ನು ಕ್ಲಿಕ್ ಮಾಡುವ ಮೂಲಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬಹುದು. ಇದು ಶೈಕ್ಷಣಿಕ ಉದ್ದೇಶಕ್ಕಾಗಿ ನಡೆಯುವ ಸಮೀಕ್ಷೆಯಾಗಿದ್ದು, ಯಾರದೇ ವೈಯುಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವುದಿಲ್ಲ ಎಂದು ಭರವಸೆ ನೀಡಿದರು.
ಶಾಹೀನ್ ಕಾಲೇಜಿನ ಪ್ರಾಚಾರ್ಯ ಅಫ್ರಾ ನಾಜ್ ಅವರು ಮಾತನಾಡಿ, ಮೊಬೈಲ್ ವೀಕ್ಷಣೆಯಿಂದ ಮಕ್ಕಳಲ್ಲಿ ಏಕಾಗ್ರತೆ ಕಡಿಮೆಯಾಗುತ್ತಿದೆ. ವಿಶೇಷವಾಗಿ ರೀಲ್ಸ್ ವೀಕ್ಷಣೆಯು ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತಿದೆ. ಶಾಲೆಯಲ್ಲಿ ಮಕ್ಕಳು ಏಕಾಗ್ರತೆಯಿಂದ ಪಾಠ ಕೇಳುವುದು ಕಡಿಮೆಯಾಗುತ್ತಿದೆ. ಸಮಾಜದೊಂದಿಗೆ ಬೆರೆಯುವುದು ಕಡಿಮೆಯಾಗುತ್ತಿದೆ. ಅಕ್ಕಪಕ್ಕ ಇದ್ದರೂ ಮಾತನಾಡದಂತಹ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ನಾಗರಿಕ ಸನ್ಮಾರ್ಗ ಸಮಿತಿಯ ಪ್ರಮುಖ ಡಾ.ರಾಜಶೇಖರ್ ಸೇಡಂಕರ್ ಅವರು ಮಾತನಾಡಿ, ಸಮಿತಿಯು ಸರಳ ವಿವಾಹ ಕುರಿತು ಜಾಗೃತಿ ಮೂಡಿಸುತ್ತಿದೆ. ವ್ಯಸನ ಮುಕ್ತ ಬೀದರ್ ನಿರ್ಮಾಣಕ್ಕೆ ಸಂಕಲ್ಪ ತೊಟ್ಟಿದೆ. ಅತಿಯಾದ ಮೊಬೈಲ್ ವೀಕ್ಷಣೆಯಿಂದ ದೇಹದಲ್ಲಿ ಕೊಬ್ಬು ಸಂಗ್ರಹ ಹೆಚ್ಚಿ, ಆರೋಗ್ಯ ಸಮಸ್ಯೆ ಎದುರಾಗುತ್ತಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಪ್ರಮುಖರಾದ ಅಶೋಕ್ ವಡಗಾವೆ, ಬಸವರಾಜ್ ಮಾಳಗೆ ಹಾಗೂ ಶಂಭುಲಿಂಗ್ ವಾಲ್ದೊಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.







