ʼದ್ವೇಷ ಭಾಷಣ ತಡೆ ಕಾಯ್ದೆʼ ಕಾಂಗ್ರೆಸ್ ವಿರುದ್ಧ ಮಾತಾಡುವವರ ಬಾಯಿ ಮುಚ್ಚಿಸುವ ಷಡ್ಯಂತ್ರ : ಶೋಭಾ ಕರಂದ್ಲಾಜೆ

ಬೀದರ್ : ಕಾಂಗ್ರೆಸ್ ಸರಕಾರ ವಿಷಯಾಂತರ ಮಾಡಲು ಹಲವಾರು ಅಸ್ತ್ರಗಳನ್ನು ಬಳಸುತ್ತಿದೆ. ಅದರಲ್ಲಿ ದ್ವೇಷ ಭಾಷಣ ತಡೆ ಕಾಯ್ದೆ ಕೂಡಾ ಒಂದಾಗಿದೆ. ಕಾಂಗ್ರೆಸ್ ವಿರುದ್ಧ ಮಾತಾಡುವವರ ಬಾಯಿ ಮುಚ್ಚಿಸುವ ಷಡ್ಯಂತ್ರ ಇದಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಭಿವೃದ್ಧಿ ನಡೆಯುತ್ತಿಲ್ಲ. ಕುರ್ಚಿ ಕಿತ್ತಾಟ ನಡೆಯುತ್ತಿದೆ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಬೇಕಾ? ಸಿದ್ದರಾಮಯ್ಯ ಮುಂದುವರೆಯಬೇಕಾ? ಅನ್ನೋದೇ ಚರ್ಚೆ ನಡೆಯುತ್ತಿದೆ. ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಯುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು.
ದ್ವೇಷ ಭಾಷಣ ತಡೆ ಕಾಯ್ದೆ ಎನ್ನುವುದು ಕಾಂಗ್ರೆಸ್ ವಿರುದ್ಧ ಮಾತಾಡುವವರ ಬಾಯಿ ಮುಚ್ಚಿಸುವ ಷಡ್ಯಂತ್ರವಾಗಿದೆ. ನಮ್ಮೆಲ್ಲರ ಬಾಯಿ ಮುಚ್ಚಿಸಲು ಕಾಂಗ್ರೆಸ್ ವ್ಯವಸ್ಥಿತ ಷಡ್ಯಂತ್ರ ಮಾಡುತ್ತಿದೆ. ಕಾಂಗ್ರೆಸ್ ಸರಕಾರ ಸಂಪೂರ್ಣವಾಗಿ ವಿಫಲವಾಗಿದ್ದು, ಅದನ್ನು ಅವರು ಎತ್ತಿ ತೋರಿಸುತ್ತಿದ್ದಾರೆ ಎಂದರು.
ಗೃಹ ಸಚಿವ ಪರಮೇಶ್ವರ್ ಅವರು ಖರ್ಗೆ ಭೇಟಿ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಎಲ್ಲರೂ ಸಿಎಂ ಹಾಗೂ ಕೆಪಿಸಿಸಿ ಪಟ್ಟಕ್ಕಾಗಿ ಹಾತೊರೆಯುತ್ತಿದ್ದಾರೆ. ಯಾರನ್ನು ಇಳಿಸಬೇಕು, ಯಾರನ್ನು ಉರುಳಿಸಬೇಕು ಎನ್ನುವ ಚರ್ಚೆ ಮಾತ್ರ ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ. ಒಂದು ಕಡೆ ಪರಮೇಶ್ವರ್ ಇನ್ನೊಂದು ಕಡೆ ಖರ್ಗೆ ಮತ್ತೊಂದು ಕಡೆ ಡಿಕೆಶಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿದ್ದಾರೆ ಎಂದರು.
ಬೆಳಗಾವಿಯಲ್ಲಿ ಅಧಿವೇಶನ ಯಾವ ಪುರುಷಾರ್ಥಕ್ಕೆ ಮಾಡಿದರು ಎಂದು ಪ್ರಶ್ನೆ ಮಾಡಿದ ಅವರು, ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಮಾಡ್ತೀವಿ ಅಂತ ಹೇಳಿ ದ್ವೇಷ ಭಾಷಣ ತಡೆಯ ಕಾಯ್ದೆ ಬಿಟ್ಟು ಅಧಿವೇಶನದಲ್ಲಿ ಅವರು ಏನು ಮಾಡಲಿಲ್ಲ. ಉತ್ತರ ಕರ್ನಾಟಕಕ್ಕೂ ನ್ಯಾಯಕೊಡಲ್ಲ, ಕರ್ನಾಟಕಕ್ಕೂ ನ್ಯಾಯಕೊಡಲ್ಲ. ಯಾರಿಗೂ ಇವರು ನ್ಯಾಯ ಕೊಡುವುದಿಲ್ಲ. ಬರೀ ಕುರ್ಚಿಗಾಗಿ ಕಿತ್ತಾಟ ನಡೆಸುತ್ತಿದ್ದಾರೆ ಎಂದು ಅವರು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.







