ಸಿದ್ಧರಾಮಯ್ಯನವರೇ ಕಾಂಗ್ರೆಸ್ ಪಕ್ಷದ ಕೊನೆಯ ಮುಖ್ಯಮಂತ್ರಿ : ಸಂಸದ ಗೋವಿಂದ್ ಕಾರಜೋಳ

ಬೀದರ್ : ಕಾಂಗ್ರೆಸ್ ಪಕ್ಷದಿಂದ ರಾಜ್ಯದಲ್ಲಿ ಸಿದ್ದರಾಮಯ್ಯನವರೇ ಕೊನೆ ಮುಖ್ಯಮಂತ್ರಿ ಎಂದು ಚಿತ್ರದುರ್ಗದ ಸಂಸದ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.
ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ವಿಜಯನಗರ ಸಾಮ್ರಾಜ್ಯದ ಕೊನೆಯ ಅರಸ ಅಳಿಯ ರಾಮರಾಯ ಆಗಿದ್ದರು. ಅದೇ ತರಹ ಸಿದ್ದರಾಮಯ್ಯನವರು ಕೂಡ ಕಾಂಗ್ರೆಸ್ಸಿನ ಕೊನೆಯ ಸಿಎಂ ಆಗಿದ್ದಾರೆ ಎಂದು ಲೇವಡಿ ಮಾಡಿದ್ದರು.
ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ಮುಖ್ಯಮಂತ್ರಿ ಕುರ್ಚಿಗಾಗಿ ನಡೆಸುತ್ತಿರುವ ಕಾದಾಟದಲ್ಲಿ ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ. ಮುಖ್ಯಮಂತ್ರಿಯಾಗಲು ಡಿ.ಕೆ.ಶಿವಕುಮಾರ್ ಅವರು ಎರಡು ವರ್ಷಗಳಿಂದ ಪ್ರಯತ್ನಿಸುತ್ತಿದ್ದಾರೆ. ಅವರು ಸಿಎಂ ಆಗಬಾರದು ಎಂದು ಸಿದ್ದರಾಮಯ್ಯನವರ ಬೆಂಬಲಿಗರು ನಿರಂತರ ಹೋರಾಟ ಮಾಡುತ್ತಿದ್ದಾರೆ. ಇವರಿಬ್ಬರ ಜಗಳದಲ್ಲಿ ರಾಜ್ಯದಲ್ಲಿ ಆಡಳಿತ ಕುಸಿದು ಹೋಗಿದೆ ಎಂದು ಆರೋಪಿಸಿದರು.
ಡಿಕೆಶಿ ಅವರಿಗೆ ಜ್ಯೋತಿಷ್ಯ ಕೇಳುವುದು ಹವ್ಯಾಸವಾಗಿದೆ. ಅದನ್ನು ನಂಬಿ ಅವರು ಮುಖ್ಯಮಂತ್ರಿಯಾಗುತ್ತೇನೆ ಎಂದು ಭಾವಿಸಿದ್ದಾರೆ. ಆದರೆ, ಅವರು ತಿಪ್ಪರಲಾಗ ಹಾಕಿದರೂ ಕೂಡ ಕಾಂಗ್ರೆಸ್ಸಿನವರು ಡಿಕೆಶಿ ಅವರನ್ನು ಮುಖ್ಯಮಂತ್ರಿ ಮಾಡುವುದಿಲ್ಲ ಎಂದು ಅವರು ಭವಿಷ್ಯ ನುಡಿದರು.
ರಾಜ್ಯ ಬಿಜೆಪಿಯಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿವೆ. ಕೆಲ ದಿನಗಳಲ್ಲಿ ಪಕ್ಷದಲ್ಲಿನ ಎಲ್ಲ ಸಮಸ್ಯೆ ಬಗೆಹರಿಯಲಿವೆ. ಮೂರು ರಾಜ್ಯಗಳಲ್ಲಿ ಚುನಾವಣೆ ಇದ್ದುದ್ದರಿಂದ ರಾಷ್ಟ್ರೀಯ ನಾಯಕರಿಗೆ ಕರ್ನಾಟಕದಲ್ಲಿನ ಗೊಂದಲ ನಿವಾರಿಸಲು ಕಾಲಾವಕಾಶ ಸಿಕ್ಕಿರಲಿಲ್ಲ. ಈಗ ಚುನಾವಣೆಗಳು ಮುಗಿದಿವೆ. ಹಾಗಾಗಿ ಇಲ್ಲಿನ ಎಲ್ಲ ರೀತಿಯ ಗೊಂದಲ ನಿವಾರಣೆ ಮಾಡುತ್ತಾರೆ. ಪುನಃ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದರು.
ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಅಶ್ವತ್ಥ್ ನಾರಾಯಣ ಮಾತನಾಡಿ, ರಾಜ್ಯ ಸರ್ಕಾರ ಮತ್ತೆ ಈ ವರ್ಷದ ಬಜೆಟಿನಲ್ಲೂ ಸಹ ಪರಿಶಿಷ್ಟರ ಪಾಲಿನ ಎಸ್ ಸಿ ಎಸ್ ಪಿ, ಟಿ ಎಸ್ ಪಿ ಹಣ ಬಳಕೆ ಮಾಡಿದೆ. ಇದು ದುರದೃಷ್ಟಕರವಾಗಿದ್ದು, ಇದರ ವಿರುದ್ಧ ಬಿಜೆಪಿ ಪಕ್ಷ ವಿಧಾನ ಸೌಧದ ಒಳಗೂ ಹಾಗೂ ಹೊರಗೂ ಹೋರಾಟ ನಡೆಸುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸೋಮನಾಥ್ ಪಾಟೀಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೀರಪ್ಪ ಔರಾದೆ, ಪಕ್ಷದ ಮುಖಂಡರಾದ ಗುರುನಾಥ್ ಜ್ಯಾಂತಿಕರ್, ಗುಂಡಪ್ಪ ವಕೀಲ್, ಬಸವರಾಜ್ ಆರ್ಯ, ಈಶ್ವರಸಿಂಗ್ ಠಾಕೂರ್, ಫರ್ನಾಂಡಿಸ್ ಹಿಪ್ಪಳಗಾಂವ್ ಹಾಗೂ ಸುಧೀರ್ ಸೇರಿದಂತೆ ಇತರರು ಇದ್ದರು.







