ಬೋಧಗಯಾಕ್ಕೆ ಸಾವಿರಾರು ಕೋಟಿ ರೂ. ಹಣ ಬರುತ್ತಿರುವುದರಿಂದ ಮನುವಾದಿಗಳು ಅದನ್ನು ಬೌದ್ಧರಿಗೆ ಬಿಡುತ್ತಿಲ್ಲ : ಭಂತೆ ಸಂಘರಖ್ಖೀತ್

ಬೀದರ್ : ಸುಮಾರು ವರ್ಷಗಳಿಂದ ಬೌದ್ಧರ ಬೋಧಗಯಾ ಆಂದೋಲನ ಇಡೀ ದೇಶ್ಯಾದ್ಯಂತ ನಡೆಯುತ್ತಿದೆ. ಆದರೆ ಬೋಧಗಯಾಕ್ಕೆ ಸಾವಿರಾರು ಕೋಟಿ ರೂ. ಹಣ ಬರುತ್ತಿದ್ದು, ಸಹಜವಾಗಿ ಮನುವಾದಿಗಳು ಅಲ್ಲಿ ಬರುವ ಹಣಕ್ಕೆ ಆಸೆಪಟ್ಟು ಇದನ್ನು ಬೌದ್ಧರಿಗೆ ಬಿಟ್ಟುಕೊಡುತ್ತಿಲ್ಲ ಎಂದು ಆಣದೂರಿನ ಭಂತೆ ಸಂಘರಖ್ಖೀತ್ ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೋಧಗಯಾ ಕುರಿತ ಮನುವಾದಿಗಳ ಷಡ್ಯಂತ್ರದಲ್ಲಿ ಸ್ಥಳೀಯ ಸರ್ಕಾರ ಹಾಗೂ ಆಡಳಿತವೂ ಭಾಗಿಯಾಗಿವೆ ಎಂದು ದೂರಿದರು. ಪ್ರತಿಭಟನೆ ನಡೆಸಿ ಹಕ್ಕು ಕೇಳುವುದು ಅಪರಾಧವಲ್ಲ, ಆದರೆ ವಿನಯಚಾರ್ಯ ಭಂತೆಜಿಯವರ ಮೇಲೆ ಸುಳ್ಳು ಆರೋಪ ಮಾಡಿ ಅವರನ್ನು ಜೈಲಿಗೆ ಕಳುಹಿಸುವ ಮೂಲಕ ಬೌದ್ಧ ಪರಂಪರೆಗೆ ಅವಮಾನ ಮಾಡಲಾಗಿದೆ ಎಂದು ಅವರು ಆರೋಪಿಸಿದರು.
ಕೋರ್ಟ್ ನಲ್ಲಿಯೂ ಕೂಡ ವಿಚಾರಣೆ ನಡೆಯುತ್ತಿದೆ. ರಾಮ ಮಂದಿರದ ತೀರ್ಪು ನ್ಯಾಯಾಲಯವೇ ನೀಡಿದೆ. ಆದರೆ ಬೋಧಗಯಾದಲ್ಲಿ ಬುದ್ಧರಿರುವುದು ಖಚಿತವಿದೆ. ಅದನ್ನು ಬೌದ್ಧರಿಗೆ ನೀಡುವುದಕ್ಕೆ ವಿಚಾರಣೆಯ ದಿನಾಂಕ ಪದೇ ಪದೇ ಮುಂದುಡುತ್ತಿದ್ದಾರೆ. ಇದರಿಂದಾಗಿ ನ್ಯಾಯಾಲಯದಲ್ಲಿಯೂ ಕೂಡ ಮನುವಾದವಿದೆ ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ ಎಂದು ನ್ಯಾಯಾಂಗ ವ್ಯವಸ್ಥೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಬೌದ್ಧರ ಓಟಿನ ಸಂಖ್ಯೆ ಕಡಿಮೆ ಇರುವ ಕಾರಣಕ್ಕೆ ಕರ್ನಾಟಕದ ನಮ್ಮ ಸಮಾಜದ ಜನ ಪ್ರತಿನಿಧಿಗಳು ಈ ಹೋರಾಟಕ್ಕೆ ಬೆಂಬಲ ಕೂಡ ನೀಡುವುದಿಲ್ಲ. ಇವರಿಗೆ ನಮ್ಮ ಸಮಾಜದ ಜನರು ತಕ್ಕ ಪಾಠ ಕಲಿಸಬೇಕು. ಇಲ್ಲದಿದ್ದರೆ ಅವರು ಜನರನ್ನು ತಮಗೆ ಬೇಕಾದ ಹಾಗೆ ಉಪಯೋಗ ಮಾಡಿಕೊಳ್ಳುತ್ತಾರೆ. ಯಾರು ಹೋರಾಟ ಮಾಡುತಿದ್ದಾರೋ ಅವರಿಗೆ ನಮ್ಮ ಸಮಾಜ ಸಹಾಯ ಮಾಡಬೇಕು ಎಂದು ಸ್ವಂತ ಸಮಾಜದ ಜನಪ್ರತಿನಿಧಿಗಳ ವಿರುದ್ಧ ಹರಿಹಾಯ್ದರು.
ಬೋಧಗಾಯ ಮುಕ್ತಿ ಆಂದೋಲನದ ಪ್ರತಿಭಟನೆಗೆ ಅಲ್ಲಿನ ರಾಜ್ಯ ಹಾಗೂ ಕೇಂದ್ರ ಸರ್ಕಾರ ಬೆಲೆ ನೀಡದೆ ಅನ್ಯಾಯ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ಹಾಗಾಗಿ ಫೆ.12ರ, 2026 ರಂದು ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ. ಆದರ ಪೂರ್ವಭಾವಿ ಸಭೆಯಂತೆ ಅ.24ರ, 2025 ರಂದು ಬೀದರ್ ನಲ್ಲಿ ಬೃಹತ್ ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ವಿನಯಚಾರ್ಯ ಭಂತೆಜಿ ಅವರು ಭಾಗವಹಿಸುತ್ತಿದ್ದಾರೆ. ಹಾಗಾಗಿ ಜಿಲ್ಲೆಯ ಬಹುತೇಕ ಸಂಖ್ಯೆಯ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು.
ರಾಜಪ್ಪ ಗೂನ್ನಳ್ಳಿಕರ್ ಅವರು ಮಾತನಾಡಿ, ಅ. 24 ರಂದು ಬೋಧಗಯಾ ಮುಕ್ತಿ ಆಂದೋಲನದ ನಿಮಿತ್ಯವಾಗಿ ಬೌದ್ಧ ಧಮ್ಮಧ್ವಜ ಪಥ ಸಂಚಲನ ಹಾಗೂ ವರ್ಷವಾಸ ಸಮಾರೋಪ ಸಮಾರಂಭ ಕೂಡ ನಡೆಯಲಾಗುವುದು. ಪಥ ಸಂಚಲನವು ಸಾಯಂಕಾಲ 4 ಗಂಟೆಗೆ ಶಿವನಗರ್ ವಾಕಿಂಗ್ ಸ್ಪಾಟ್ ನಿಂದ ಪ್ರಾರಂಭವಾಗಿ ಕೇಂದ್ರ ಬಸ್ ನಿಲ್ದಾಣ, ಮಡಿವಾಳ ವೃತ್ತದ ಮೂಲಕ ಅಂಬೇಡ್ಕರ್ ವೃತ್ತಕ್ಕೆ ತಲುಪುವುದು. ಅಂಬೇಡ್ಕರ್ ವೃತ್ತದಲ್ಲಿ ಸಾಯಂಕಾಲ 5 ಗಂಟೆಗೆ ವೇದಿಕೆ ಕಾರ್ಯಕ್ರಮ ನಡೆಯುವುದು. ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಮೈಸೂರಿನ ಬೌದ್ಧ ಸಾಹಿತಿ, ಚಿಂತಕ ಹನಸೋಗೆ ಸೋಮಶೇಖರ್ ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಹಾಲಹಳ್ಳಿಯ ಭಂತೆ ಧಮ್ಮದೀಪ ದೇವನಾಮಪ್ರೀಯ, ಬೀದರ್ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ವಿಠಲದಾಸ್ ಪ್ಯಾಗೆ, ವಿಜಯಕುಮಾರ್ ಗಾಯಕವಾಡ್, ಬುದ್ಧ ಬೆಳಕು ಟ್ರಸ್ಟ್ ನ ಅಧ್ಯಕ್ಷ ಮಹೇಶ್ ಗೋರನಾಳಕರ್, ಸೂರ್ಯಕಾಂತ್ ಚಿದ್ರಿ, ಸುರೇಶ್ ಜೊಜನಾಕರ್, ಚಂದ್ರಕಲಾ ಜೆ. ಬಡಿಗೇರ್, ಮಂಜುಳಾ ಭಾವಿದೊಡ್ಡಿ, ಸಂತೋಷ್ ಫುಲೆ, ಗೋವಿಂದ್ ಪೂಜಾರಿ, ನರಸಪ್ಪಾ ಮೇಟಿ, ಜಗನಾಥ್ ಕಾಂಬಳೆ ಹಾಗೂ ಶಿವಮೂರ್ತಿ ಸುಬಾನೆ ಇದ್ದರು.







