SIR: ಬೀದರ್ ಜಿಲ್ಲೆಯಲ್ಲಿ ನೋಟಿಸ್ಗಳ ವಿಚಾರಣೆ, ವಿಲೇವಾರಿ ಪ್ರಕ್ರಿಯೆ ಚುರುಕು

ಸಾಂದರ್ಭಿಕ ಚಿತ್ರ (PTI)
ಬೀದರ್ : ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಅರ್ಹತಾ ಅ.1 ಕ್ಕೆ ಸಂಬಂಧಿಸಿದಂತೆ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯ ಹಿನ್ನೆಲೆಯಲ್ಲಿ, ಆಯಾ ಕ್ಷೇತ್ರಗಳ ಮತದಾರರ ನೋಂದಣಾಧಿಕಾರಿ ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿಗಳ ಹಂತದಲ್ಲಿ ವಿಚಾರಣೆಗಳನ್ನು ನಡೆಸಿ ಕರಡು ಪಟ್ಟಿಯಲ್ಲಿನ ನ್ಯೂನತೆಗಳನ್ನು ವಿಲೇವಾರಿ ಮಾಡಲಾಗುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾ ಚುನಾವಣಾಧಿಕಾರಿ ಸುರೇಖಾ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಆ.24 ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದ್ದು, 2002ರ ಮತದಾರರ ಪಟ್ಟಿಗೆ ಹೋಲಿಸಿದಾಗ ಹೆಸರುಗಳಲ್ಲಿ ವ್ಯತ್ಯಾಸವಿರುವ ಹಾಗೂ ಮ್ಯಾಪಿಂಗ್ ಆಗದ ಒಟ್ಟು 32,666 ಮತದಾರರನ್ನು ಗುರುತಿಸಿ ನೋಟಿಸ್ ಜಾರಿ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಬಸವಕಲ್ಯಾಣ ಮತ ಕ್ಷೇತ್ರದಲ್ಲಿ ಒಟ್ಟು 3,093 ನೋಟಿಸ್ಗಳನ್ನು ಜಾರಿಗೊಳಿಸಲಾಗಿದ್ದು, ಇಗಾಗಲೇ 2,957 ನೋಟೀಸ್ ತಲುಪಿವೆ. 136 ವಿತರಣೆಗೆ ಬಾಕಿ ಇವೆ. 901 ವಿಚಾರಣೆಗಳು ಪೂರ್ಣಗೊಂಡಿದ್ದು, 1,051 ದಿನಾಂಕ ಮೀರಿದ ವಿಚಾರಣೆಗಳನ್ನು ಮರು ವೇಳಾಪಟ್ಟಿ ಮಾಡಬೇಕಿದೆ. ಹುಮನಾಬಾದ್ ಮತ ಕ್ಷೇತ್ರದಲ್ಲಿ ಒಟ್ಟು 5,049 ನೋಟಿಸ್ಗಳಲ್ಲಿ 4,358 ವಿತರಣೆಯಾಗಿದ್ದು, 691 ಬಾಕಿ ಇವೆ. 845 ವಿಚಾರಣೆಗಳು ಪೂರ್ಣಗೊಂಡಿದ್ದು, 992 ದಿನಾಂಕ ಮೀರಿದ ವಿಚಾರಣೆಗಳಿಗೆ ದಿನಾಂಕ ಮರು ನಿಗದಿಪಡಿಸಬೇಕಿದೆ. ಬೀದರ ದಕ್ಷಿಣ ಮತ ಕ್ಷೇತ್ರದಲ್ಲಿ ಒಟ್ಟು 2,459 ನೋಟಿಸ್ಗಳ ಪೈಕಿ 2,427 ತಲುಪಿದ್ದು, 32 ಬಾಕಿ ಇವೆ. 942 ವಿಚಾರಣೆಗಳು ಪೂರ್ಣಗೊಂಡಿದ್ದು, 944 ದಿನಾಂಕ ಮೀರಿದ ವಿಚಾರಣೆಗಳು ಹಾಗೂ 1 ಪ್ರಕರಣ ಮರು ವೇಳಾಪಟ್ಟಿಯಲ್ಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಬೀದರ್ ಮತ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚು ಅಂದರೆ ಒಟ್ಟು 11,262 ನೋಟಿಸ್ಗಳಲ್ಲಿ 8,589 ವಿತರಣೆಯಾಗಿದ್ದು, 2,673 ಬಾಕಿ ಇವೆ. 2,128 ವಿಚಾರಣೆಗಳು ಪೂರ್ಣಗೊಂಡಿವೆ. 1,327 ದಿನಾಂಕ ಮೀರಿದ ವಿಚಾರಣೆಗಳು ಹಾಗೂ 1 ಮರು ವೇಳಾಪಟ್ಟಿಯಲ್ಲಿದೆ. ಭಾಲ್ಕಿ ಮತ ಕ್ಷೇತ್ರದಲ್ಲಿ ಒಟ್ಟು 5,835 ನೋಟಿಸ್ಗಳಲ್ಲಿ 4,976 ವಿತರಣೆಯಾಗಿದ್ದು, 860 ಬಾಕಿ ಇವೆ. 902 ವಿಚಾರಣೆಗಳು ಪೂರ್ಣಗೊಂಡಿದ್ದು, 806 ದಿನಾಂಕ ಮೀರಿದ ವಿಚಾರಣೆಗಳು ಹಾಗೂ 3 ದಿನಾಂಕ ಮರು ವೇಳಾಪಟ್ಟಿಯಲ್ಲಿವೆ. ಔರಾದ್ ಮತ ಕ್ಷೇತ್ರದಲ್ಲಿ ಒಟ್ಟು 4,968 ನೋಟಿಸ್ಗಳಲ್ಲಿ 3,886 ವಿತರಣೆಯಾಗಿದ್ದು, 1,082 ಬಾಕಿ ಇವೆ. 1,813 ವಿಚಾರಣೆಗಳು ಪೂರ್ಣಗೊಂಡಿದ್ದು, 2,977 ದಿನಾಂಕ ಮೀರಿದ ವಿಚಾರಣೆಗಳು ಹಾಗೂ 2 ಪ್ರಕರಣಗಳು ಮರು ವೇಳಾಪಟ್ಟಿಯಲ್ಲಿವೆ ಎಂದು ಅವರು ತಿಳಿಸಿದ್ದಾರೆ.
ಒಟ್ಟು ಜಿಲ್ಲಾದ್ಯಂತ 32,666 ನೋಟಿಸ್ಗಳನ್ನು ಜನರೇಟ್ ಮಾಡಲಾಗಿದ್ದು, 27,193 ತಲುಪಿಸಲಾಗಿದೆ. ಇನ್ನು 5,474 ತಲುಪಿಸಿವುದು ಬಾಕಿ ಇವೆ. ಇದುವರೆಗೆ ಒಟ್ಟು 7,531 ವಿಚಾರಣೆಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ. 8,097 ದಿನಾಂಕ ಮೀರಿದ ವಿಚಾರಣೆಗಳು ಮರು ವೇಳಾಪಟ್ಟಿಯಲ್ಲಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ವಿಕಲಚೇತನರು ಮತ್ತು ಹಿರಿಯ ನಾಗರಿಕರಿಗೆ ಮನೆ ಬಾಗಿಲಿಗೆ ಸೇವೆ, ವಿಶೇಷ ಚೇತನರು ಹಾಗೂ ವಯೋವೃದ್ಧ ಮತದಾರರಿಗೆ ಅನುಕೂಲವಾಗುವಂತೆ, ಅಧಿಕಾರಿಗಳೇ ಸ್ವತಃ ಅವರ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿ ವಿಚಾರಣೆ ನಡೆಸಿ ನೋಟಿಸ್ಗಳನ್ನು ವಿಲೇವಾರಿ ಮಾಡುತ್ತಿದ್ದಾರೆ. ಜನನ ದಿನಾಂಕಕ್ಕನುಗುಣವಾಗಿ ಸಲ್ಲಿಸಬೇಕಾದ ದಾಖಲೆಗಳು, ಸಾಮಾನ್ಯ ಮತದಾರರು ನೋಟಿಸ್ನಲ್ಲಿ ನೀಡಲಾದ ದಿನಾಂಕ ಮತ್ತು ಸಮಯಕ್ಕೆ ಸರಿಯಾಗಿ ನಿಗದಿತ ಸ್ಥಳದಲ್ಲಿ ಹಾಜರಾಗಿ ಅರ್ಹತಾ ಮಾನದಂಡಕ್ಕೆ ತಕ್ಕಂತೆ ದಾಖಲೆ ಸಲ್ಲಿಸಬೇಕು ಎಂದು ಅವರು ಸೂಚನೆ ನೀಡಿದ್ದಾರೆ.
ಜು.1, 1987 ಕ್ಕಿಂತ ಮೊದಲು ಜನಿಸಿದವರು, ತಮ್ಮ ಸ್ವಂತ ಜನ್ಮ ದಿನಾಂಕ ಅಥವಾ ಜನ್ಮ ಸ್ಥಳವನ್ನು ಸಾಬೀತುಪಡಿಸುವ ಯಾವುದಾದರೂ ಒಂದು ಸರ್ಕಾರಿ ಮಾನ್ಯತೆ ಪಡೆದ ದಾಖಲೆ, ಜು1, 1987 ರಿಂದ ಡಿ.2, 2004ರ ನಡುವೆ ಜನಿಸಿದವರು ತಮ್ಮ ಸ್ವಂತ ದಾಖಲೆಯೊಂದಿಗೆ ತಂದೆ ಅಥವಾ ತಾಯಿಯ ಜನ್ಮ ದಿನಾಂಕ, ಸ್ಥಳದ ದಾಖಲೆ ನೀಡಬೇಕು. ಡಿ.2, 2004ರ ನಂತರ ಜನಿಸಿದವರು ಸ್ವಂತ ದಾಖಲೆಯ ಜೊತೆಗೆ ತಂದೆ ಮತ್ತು ತಾಯಿ ಇಬ್ಬರ ಜನ್ಮ ದಿನಾಂಕ, ಸ್ಥಳದ ದಾಖಲೆಗಳು (ಪೋಷಕರು ವಿದೇಶಿಯರಾಗಿದ್ದರೆ ಅವರ ಪಾಸ್ಪೋರ್ಟ್ ಹಾಗೂ ವೀಸಾ ಪ್ರತಿ) ಸಲ್ಲಿಸಬೇಕು. ವಿದೇಶದಲ್ಲಿ ಜನಿಸಿದವರು, ಭಾರತೀಯ ಮಿಷನ್ ನೀಡಿರುವ ಜನ್ಮ ನೋಂದಣಿ ಪ್ರಮಾಣಪತ್ರ ಸಲ್ಲಿಸಬೇಕು.
ಮಾನ್ಯ ಮಾಡಲಾಗುವ ಪ್ರಮುಖ ದಾಖಲೆಗಳು: ಸರ್ಕಾರಿ ಉದ್ಯೋಗಿ ಐಡಿ, ಪಿಂಚಣಿ ಆದೇಶ, ಜನನ ಪ್ರಮಾಣಪತ್ರ, ಪಾಸ್ಪೋರ್ಟ್, ಶೈಕ್ಷಣಿಕ ಪ್ರಮಾಣಪತ್ರ, ಶಾಶ್ವತ ನಿವಾಸ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ, ಅರಣ್ಯ ಹಕ್ಕು ಪ್ರಮಾಣಪತ್ರ, ಜಮೀನು ಅಥವಾ ಮನೆ ಹಂಚಿಕೆ ಪ್ರಮಾಣಪತ್ರ ಹಾಗೂ ಚುನಾವಣಾ ಆಯೋಗದ ನಿರ್ದೇಶನದಂತೆ ಆಧಾರ್ ಕಾರ್ಡ್.
ಹೊಸ ಹೆಸರು ಸೇರ್ಪಡೆಗೆ ಸೆ. 23 ಕೊನೆಯ ದಿನ, ಕರಡು ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿರುವ ಅರ್ಹ ಮತದಾರರು ಆಕ್ಷೇಪಣೆ ಸಲ್ಲಿಸಲು ಅಥವಾ ಹೊಸದಾಗಿ ಹೆಸರು ಸೇರಿಸಲು ಅ.24 ರಿಂದ ಅ.23, 2026ರ ವರೆಗೆ ಅವಕಾಶ ನೀಡಲಾಗಿದೆ.
ಅಗತ್ಯ ಮೂಲ ದಾಖಲೆಗಳೊಂದಿಗೆ ನಮೂನೆ-6 ಹಾಗೂ ಡಿಕ್ಲೇರೇಶನ್ ಫಾರ್ಮ್ ಭರ್ತಿ ಮಾಡಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಬಹುದು. ಆನ್ಲೈನ್ ಸೌಲಭ್ಯ ಆಸಕ್ತರು ಸೇವಾ ಪೋರ್ಟಲ್ https://voters.eci.gov.in/ ಮೂಲಕವೂ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಸಲ್ಲಿಕೆಯಾದ ಅರ್ಜಿಗಳನ್ನು ಅ.22, 2026 ರ ಒಳಗಾಗಿ ವಿಲೇವಾರಿ ಮಾಡಿ, ಅ.27 ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.






