ಬೀದರ್ | SIR ಅಭಿಯಾನ ಇನ್ನಷ್ಟು ಚುರುಕುಗೊಳಿಸಿ: ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್

ಬೀದರ್: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಅಭಿಯಾನವನ್ನು ಇನ್ನಷ್ಟು ವೇಗವಾಗಿ ಹಾಗೂ ಪರಿಣಾಮಕಾರಿಯಾಗಿ ನಡೆಸುವಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ತಿಳಿಸಿದರು.
ನಗರದ ಐತಿಹಾಸಿಕ ಬೀದರ್ ಕೋಟೆಯ ಮುಖ್ಯದ್ವಾರದಲ್ಲಿ ಎಸ್‌ಐಆರ್ ಬೈಕ್ ರ‍್ಯಾಲಿಗೆ ಚಾಲನೆ ನೀಡಿದ ನಂತರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಎಸ್‌ಐಆರ್ ಪ್ರಗತಿ ಕುರಿತು ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಬಿಎಲ್‌ಒಗಳು ಪ್ರತಿಯೊಂದು ಮನೆಗೆ ತಪ್ಪದೇ ಭೇಟಿ ನೀಡಿ ಯಾವುದೇ ಅರ್ಹ ಮತದಾರರು ಬಿಟ್ಟು ಹೋಗದಂತೆ ಅರ್ಜಿ ವಿತರಣೆ ಮಾಡಬೇಕು ಎಂದರು.
ಬೀದರ್ ಜಿಲ್ಲೆಯಲ್ಲಿ ಒಟ್ಟು 1,528 ಮತ ಕೇಂದ್ರಗಳಿದ್ದು, 14,61,959 ಮತದಾರರಿದ್ದಾರೆ. ಜು.13ರ ವರೆಗೆ ಒಟ್ಟು 14,20,002 ಮತದಾರರಿಗೆ ಎನುಮರೇಶನ್ ಫಾರ್ಮ್‌ಗಳನ್ನು ವಿತರಿಸಲಾಗಿದ್ದು ಒಟ್ಟು ಶೇ.97.13 ರಷ್ಟು ಪ್ರಗತಿ ಸಾಧಸಲಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
986 ಮತ ಕೇಂದ್ರಗಳಲ್ಲಿ ಶೇ.100, 368 ಕೇಂದ್ರಗಳಲ್ಲಿ ಶೇ.90 ರಷ್ಟು ಫಾರ್ಮ್‌ಗಳನ್ನು ವಿತರಣೆಯಾಗಿದೆ. 22 ಕೇಂದ್ರಗಳಲ್ಲಿ ಶೇ.50 ರಷ್ಟು ವಿತರಣೆ ಆಗಿರುವುದಕ್ಕೆ ಅತೃಪ್ತಿ ವ್ಯಕ್ತಪಡಿಸಿದ ಅವರು, ಇನ್ನೆರಡು ದಿನಗಳಲ್ಲಿ ತಪ್ಪದೇ ಶೇ.100 ರಷ್ಟು ಪ್ರಗತಿ ಸಾಧಿಸುವಂತೆ ಸೂಚಿಸಿದರು.
ಭಾಲ್ಕಿಯ 17 ಕೇಂದ್ರಗಳಲ್ಲಿ ಶೇ.50 ರಷ್ಟು ಪ್ರಗತಿ ಸಾಧಿಸಿದ್ದು, ಅಲ್ಲಿನ ಇಆರ್‌ಒ ಈ ಕುರಿತು ತಾಲೂಕಿನ ಎಲ್ಲ ಬಿಎಲ್‌ಒಗಳು ಕ್ರೀಯಾಶೀಲರಾಗಿ ಶೇ.100 ಪ್ರಗತಿ ಸಾಧಿಸಬೇಕು ಎಂದು ಅವರು ಸೂಚಿಸಿದರು.
ಜು.29 ಕೊನೆಯ ದಿನವಾಗಿದ್ದು, ಇನ್ನುಳಿದ 14 ದಿನಗಳಲ್ಲಿ ಡಿಜಿಟೈಜೆಷನ್ ಪೂರ್ಣಗಳಿಸಬೇಕು. ಬೇರೆದೆ ಜಿಲ್ಲೆಯಲ್ಲಿ ಈವರೆಗೆ ಶೇ.27.37 ಡಿಜಿಟೈಜೆಶನ್ ಪ್ರಗತಿಯಾಗಿದೆ. ಬಿಎಲ್‌ಒಗಳು ಸೂಪರ್‌ವೈಸರ್‌ಗಳ ಮೇಲೆ ಒತ್ತಡ ಹೆಚ್ಚಲಿದೆ. ಶೀಘ್ರವೇ ಕ್ರೀಯಾಶೀಲರಾಗಿ ಪೂರ್ಣಗೊಳಿಸುವಂತೆ ಎಲ್ಲ ಇಆರ್‌ಒಗಳಿಗೆ ಸೂಚಿಸಿದ ಅವರು, ಚುನಾವಣಾ ಆಯೋಗದಿಂದ ಎಲ್ಲ ಜಿಲ್ಲೆಗಳ ಇಆರ್‌ಒಗಳಿಗೆ ಪ್ರತಿ ದಿನ ಪ್ರತಿ ಎರಡು ಗಂಟೆಗೆ ಇಡೀ ರಾಜ್ಯದಲ್ಲಾಗುವ ಪ್ರಗತಿಯ ವಿವರ ವಾಟ್ಸ್ಆ್ಯಪ್‌ಗೆ ಕಳಿಸಲಾಗುತ್ತದೆ ಎಂದರು.
ವಯಸ್ಸಾದವರ ಪಟ್ಟಿಯನ್ನು ಕಡ್ಡಾಯವಾಗಿ ಇಆರ್‌ಒಗಳು ಎಲ್ಲ ನೋಂದಾಯಿತ ರಾಜಕೀಯ ಪಕ್ಷಗಳಿಗೆ ಪ್ರತಿದಿನ ಸಹಿ ಮಾಡಿ ಇಮೇಲ್ ಹಾಗೂ ವಾಟ್ಸ್ಆ್ಯಪ್‌ಗೆ ಕಳಿಸಬೇಕು. ಉಳಿದ 14 ದಿನಗಳಲ್ಲಿ ಎಲ್ಲರು ಸಹ ಕ್ರೀಯಾಶೀಲರಾಗಿ ಕಾರ್ಯನಿರ್ವಹಿಸಿ ಎಸ್‌ಐಆರ್ ಯಶಸ್ವಿಗೊಳಿಸಬೇಕು ಎಂದು ಅವರು ಸೂಚಿಸಿದರು.
ಜಿಲ್ಲಾಧಿಕಾರಿ ಶೀಲ್ಪಾ ಶರ್ಮಾ ಅವರು ಮಾತನಾಡಿ, ಚುನಾವಣಾ ಆಯೋಗದ ನಿರ್ದೇಶನದಂತೆ ಕಾಲ ಕಾಲಕ್ಕೆ ಎಲ್ಲ ಕೆಲಸಗಳನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ದಿಲೀಪ್ ಬದೋಲೆ ಅವರು, ಜಿಲ್ಲೆಯಲ್ಲಿ ಕೈಗೊಂಡ ಸ್ವೀಪ್ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಿವನಂದ್ ಕರಾಳೆ ಸೇರಿದಂತೆ ಎಲ್ಲ ತಾಲೂಕುಗಳ ಇಆರ್‌ಓಗಳು ಉಪಸ್ಥಿತರಿದ್ದರು.






