ಭಾಲ್ಕಿ, ಔರಾದ್ ಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ತಂಡ ಭೇಟಿ ; ಅವ್ಯವಸ್ಥೆ ವಿರುದ್ಧ ಅಸಮಾಧಾನ

ಬೀದರ್ : ಭಾಲ್ಕಿ ಹಾಗೂ ಔರಾದ್ ನ ಅಂಗನವಾಡಿ, ಸರಕಾರಿ ಶಾಲೆ, ವಸತಿ ಶಾಲೆ, ವಸತಿ ನಿಲಯ, ಗ್ರಾಮ ಪಂಚಾಯಿತಿ ಸೇರಿ ವಿವಿಧೆಡೆ ಶಶಿಧರ್ ಕೋಸಂಬೆ ಅವರ ನೇತೃತ್ವದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ತಂಡ ಇಂದು ಭೇಟಿ ನೀಡಿ ಅವ್ಯವಸ್ಥೆ ವಿರುದ್ಧ ಅಸಮಾಧಾನ ಹೊರಹಾಕಿದರು.
ಭಾಲ್ಕಿಯ ತಳವಾಡ(ಕೆ) ಗ್ರಾಮದ ಅಂಗನವಾಡಿ, ಸರಕಾರಿ ಶಾಲೆ, ಕೋನ ಮೇಳಕುಂದಾ ಮೊರಾರ್ಜಿ ವಸತಿ ಶಾಲೆ, ನಿಟ್ಟೂರ(ಬಿ) ಗ್ರಾಮ ಪಂಚಾಯತಿಗೆ ತಂಡ ಭೇಟಿ ನೀಡಿ ಮೊಟ್ಟೆ, ಆಹಾರ ಧಾನ್ಯ ಪೂರೈಕೆ ಸೇರಿ ಶಾಲಾ, ಮಕ್ಕಳ ಗ್ರಾಮ ಸಭೆ ನಡಾವಳಿಯ ದಾಖಲೆ ಪರಿಶೀಲನೆ ನಡೆಸಿತು.
ಅಂಗನವಾಡಿ ಕೇಂದ್ರದ ಭೇಟಿ ನೀಡಿದ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ ಇಲ್ಲದಿರುವುದನ್ನು ಕಂಡು ಆಯೋಗದ ಸದಸ್ಯರು ಗರಂ ಆದರು. 23 ಮಕ್ಕಳ ದಾಖಲಾತಿಯಲ್ಲಿ ಕೇವಲ 2 ಮಕ್ಕಳು ಹಾಜರಿ ಇದದ್ದು ಕಂಡು ಉಳಿದ ಮಕ್ಕಳು ಎಲ್ಲಿದ್ದಾರೆ ಎಂದು ಪ್ರಶ್ನೆ ಮಾಡಿದ ಅವರು, ಸಣ್ಣ ಗಾತ್ರದ ಮೊಟ್ಟೆ ವಿತರಣೆ ಮಾಡುತ್ತಿರುವುದನ್ನು ಗಮನಿಸಿ ಒಂದು ಮಗುವಿಗೆ ಕನಿಷ್ಠ 50 ಗ್ರಾಂ. ನಷ್ಟು ಮೊಟ್ಟೆ ನೀಡಬೇಕು ಎಂದು ಎಚ್ಚರಿಸಿದರು.
ಸಣ್ಣ ಗಾತ್ರದ ಮೊಟ್ಟೆ ಪೂರೈಕೆ ಆಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ, ದಾಖಲೆಯನ್ನು ಸಮರ್ಪಕವಾಗಿ ನಿರ್ವಹಿಸದ ಅಂಗನವಾಡಿ ಕಾರ್ಯಕರ್ತೆ ಮತ್ತು ಮೊಟ್ಟೆ ಪೂರೈಕೆದಾರರಿಗೆ ನೋಟಿಸ್ ನೀಡಿ ಆಯೋಗಕ್ಕೆ ವರದಿ ಸಲ್ಲಿಸುವಂತೆ ಸಿಡಿಪಿಓಗೆ ಸೂಚನೆ ನೀಡಿದರು.
ಔರಾದ್ ತಾಲ್ಲೂಕಿನಲ್ಲಿ ಬೀದಿ ಬದಿ ಇರುವ ಅಂಗಡಿಗಳಲ್ಲಿ ಬಾಲ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ನಾವೇ ಮೂವರು ಬಾಲ ಕಾರ್ಮಿಕರನ್ನು ಹಿಡಿದು ಕಾರ್ಮಿಕ ಇಲಾಖೆಗೆ ಒಪ್ಪಿಸಿದ್ದೇವೆ. ಇಲ್ಲಿನ ಕಾರ್ಮಿಕ ಇಲಾಖೆ ಏನು ಮಾಡುತ್ತಿದೆ ಎನ್ನುವುದೇ ಗೊತ್ತಾಗುತ್ತಿಲ್ಲ. ಇದು ಅಘಾತಕಾರಿ ಸಂಗತಿಯಾಗಿದೆ ಎಂದು ತಂಡದ ಸದಸ್ಯರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.







