ಮಾ.1ರಿಂದ ರಾಜ್ಯ ಮಟ್ಟದ ಪಾರಂಪರಿಕ ವೈದ್ಯ ಸಮ್ಮೇಳನ : ಸಚಿವ ಈಶ್ವರ್ ಖಂಡ್ರೆ

ಬೀದರ್ : ರಾಜ್ಯ ಮಟ್ಟದ ಪಾರಂಪರಿಕ ವೈದ್ಯ ಸಮ್ಮೇಳನವನ್ನು ಬೀದರ್ ನಲ್ಲಿ ಮಾ.1 ರಿಂದ 3 ದಿನಗಳ ಕಾಲ ನಡೆಸಲಾಗುವುದು ಎಂದು ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ಹೇಳಿದರು.
ನಿನ್ನೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಈ ಕುರಿತು ಜರುಗಿದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನೂರಾರು ವರ್ಷಗಳಿಂದ ರೂಢಿಗತವಾಗಿ ಔಷಧೀಯ ಸಸ್ಯಗಳನ್ನು ವಿವಿಧ ರೋಗಗಳನ್ನು ಗುಣಪಡಿಸುವಲ್ಲಿ ತೊಡಗಿಸಿಕೊಂಡಿರುವ ಪಾರಂಪರಿಕ ವೈದ್ಯರಿಗೆ ತಾಂತ್ರಿಕ ಜ್ಞಾನ ಹಾಗೂ ಸರಕಾರದ ಮನ್ನಣೆ ದೊರೆಯಬೇಕಿದೆ. ಈ ನಿಟ್ಟಿನಲ್ಲಿ ಸಮ್ಮೇಳನಗಳು ಪರಿಣಾಮಕಾರಿಯಾಗುತ್ತವೆ. ಬಿದರ್ ನಲ್ಲಿ 15ನೇ ರಾಜ್ಯ ಮಟ್ಟದ ಪಾರಂಪರಿಕ ವೈದ್ಯ ಸಮ್ಮೇಳನ ಯಶಸ್ವಿಯಾಗಿ ಆಯೋಜಿಸಲು ಸರಕಾರದಿಂದ ಎಲ್ಲ ರೀತಿಯ ಸಹಾಯ ನೀಡಲಾಗುವುದು ಎಂದರು.
ಆಧುನಿಕ ಕಾಲದಲ್ಲಿ ಎಲ್ಲೆಡೆ ಮಾಲಿನ್ಯ ಕಾಣುತ್ತಿದ್ದೇವೆ. ಉತ್ತಮ ಆರೋಗ್ಯಕ್ಕೆ ಪಾರಂಪರಿಕ ಔಷಧಿಗಳು ಬಹುಪಯೋಗಿಗಳಾಗಿವೆ. ರಾಜ್ಯದಲ್ಲಿ ಹೇರಳವಾದ ಔಷಧೀಯ ಸಸ್ಯಗಳಿವೆ. ಪಶ್ಚಿಮ ಘಟ್ಟವು ಇಡೀ ಜಗತ್ತಿನ 18 ಜೀವ ವೈವಿದ್ಯತೆ ಪ್ರದೇಶಗಳಲ್ಲಿ ಪ್ರಮುಖ ಸ್ಥಾನ ಹೊಂದಿದ್ದು, ಸಾವಿರಾರು ಔಷಧೀಯ ಗುಣವಿರುವ ಸಸ್ಯಗಳನ್ನು ಹೊಂದಿದೆ. ಬೀದರ್ ನಲ್ಲಿಯೂ ವಿವಿಧ ಔಷಧೀಯ ಸಸ್ಯಗಳಿವೆ. ರಾಜ್ಯದಲ್ಲಿ ಸಾವಿರಾರು ಪಾರಂಪರಿಕ ಔಷಧೀಯ ವೈದ್ಯರು ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಇನ್ನು ಅನೇಕ ಸಂಶೋಧನೆಗಳು ಜರುಗತ್ತಿವೆ ಎಂದು ತಿಳಿಸಿದರು.
ಪಾರಂಪರಿಕ ವೈದ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಅನುಗನಾಡು ಕೃಷ್ಣಮೂರ್ತಿ ಮಾತನಾಡಿ, ಸಮ್ಮೇಳನದಲ್ಲಿ ಅನುಭವಿ ವೈದ್ಯರಿಗೆ ವೈದ್ಯ ರತ್ನ ಪ್ರಶಸ್ತಿ ನೀಡುವುದು. ಸಂಪನ್ಮೂಲ ವ್ಯಕ್ತಿಗಳಿಂದ ವಿವಿಧ ಗೋಷ್ಠಿಗಳು ಜರುಗಲಿವೆ. ಈ ಬಾರಿ ಇಬ್ಬರಿಗೆ ಔಷಧಿ ಸಸ್ಯಗಳ ಸಂರಕ್ಷಿಸಿರುವ ಪಾರಂಪರಿಕ ವೈದ್ಯರಿಗೆ ವನೌಷಧಿ ಪಂಡಿತ ಪ್ರಶಸ್ತಿ ನೀಡಲಾಗುವುದು. ಸಮ್ಮೇಳನದಲ್ಲಿ ವಿವಿಧ ಮಳಿಗೆಗಳನ್ನು ಹಾಕಲಾಗುವುದು ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪ್ರೊ.ಜಗನ್ನಾಥ ಹೆಬ್ಬಾಳೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ, ಅಪರ್ ಜಿಲ್ಲಾಧಿಕಾರಿ ಶಿವಕುಮಾರ್ ಶೀಲವಂತ್, ರಾಜ್ಯ ಪಾರಂಪರೀಕ ವೈದ್ಯ ಪರಿಷತ್ ಅಧ್ಯಕ್ಷ ಮಹಾದೇವಯ್ಯ, ನಗರಸಭೆ ಅಧ್ಯಕ್ಷ ಎಂ.ಡಿ.ಗೌಸ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮುತ್ತಣ್ಣ ಕರಿಗಾರ್, ಸಾಮಾಜಿಕ ಅರಣ್ಯ ಉಪ ಸಂರಕ್ಷಣಾಧಿಕಾರಿ ಎ.ಬಿ.ಪಾಟೀಲ್, ಪ್ರೊ.ಉಮಾಕಾಂತ್ ಪಾಟೀಲ್, ಪ್ರೊ.ರಾಜೇಂದ್ರ ಬಿರಾದಾರ್, ಡಾ.ರಾಜಕುಮಾರ್ ಹೆಬ್ಬಾಳೆ, ಬಸವರಾಜ್ ಕಟ್ಟಿಮನಿ, ಶಾಹೀನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಖದೀರ್, ವೈಜನಾಥ್ ಪಾಟೀಲ್, ಶಿವಾನಂದ್ ಜಂಗಿನಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.







