ರಾಜ್ಯ ಸಾರಿಗೆ ನೌಕರರ ಮುಷ್ಕರ: ಬೀದರ್‌ನಲ್ಲಿ ಖಾಸಗಿ ವಾಹನಗಳನ್ನು ಆಶ್ರಯಿಸಿದ ಪ್ರಯಾಣಿಕರು

ಬೀದರ್ : ವೇತನ ಪರಿಷ್ಕರಣೆ ಸಹಿತ ವಿವಿಧ ಬೇಡಿಕೆಳನ್ನು ಮುಂದಿಟ್ಟು ರಾಜ್ಯದ ಸಾರಿಗೆ ನಿಗಮಗಳ ನೌಕರರು ಮಂಗಳವಾರದಿಂದ ಮುಷ್ಕರ ಆರಂಭಿಸಿದ್ದು, ಬೀದರ್ ನ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳದ್ದೇ ದರ್ಬಾರು ಕಂಡು ಬಂದಿತು.
ಇವತ್ತು ಮುಂಜಾನೆಯಿಂದ ಯಾವುದೇ ರೀತಿಯ ಸರ್ಕಾರಿ ಬಸ್ಸುಗಳು ರಸ್ತೆಗೆ ಇಳಿಯದ ಕಾರಣ, ಪ್ರಯಾಣಿಕರು ನಗರದ ಬಸ್ ನಿಲ್ದಾಣದಲ್ಲಿ ಪರದಾಡುವಂತಾಗಿದೆ. ಇದರಿಂದಾಗಿ ಸರ್ಕಾರಿ ಬಸ್ ನಿಲ್ಲುವ ಸ್ಥಳದಲ್ಲಿ ಖಾಸಗಿ ವಾಹನಗಳು ಬಂದು ಪ್ರಯಾಣಿಕರನ್ನು ಹೊತ್ತೋಯ್ಯುತ್ತಿದ್ದವು. ಆದರೆ, ಖಾಸಗಿ ವಾಹನಗಳು ಪ್ರಮುಖ ನಗರಗಳಿಗೆ ಮಾತ್ರ ಸಾಗುತ್ತಿದ್ದವು. ಹಳ್ಳಿಗಳಿಗೆ ಹೋಗುವ ಪ್ರಯಾಣಿಕರು ಸಮಸ್ಯೆ ಉಂಟಾಗುತ್ತಿತ್ತು.
ಖಾಸಗಿ ವಾಹನಗಳು ಹೆಚ್ಚಿನ ದುಡ್ಡು ವಸೂಲಿ ಮಾಡುತ್ತಿವೆ ಎಂದು ಪ್ರಯಾಣಿಕರು ಆರೋಪಿಸಿದರು. ಮುಂಜಾನೆಯಿಂದ ಸರ್ಕಾರಿ ಬಸ್ಸುಗಳು ಸ್ಥಬ್ದವಾಗಿದ್ದರಿಂದ ಪ್ರಯಾಣಿಕರಿಗೆ ಖಾಸಗಿ ವಾಹನಗಳಲ್ಲಿ ತೆರಳುವುದು ಅನಿವಾರ್ಯವಾಯಿತು.
ಮಹಾರಾಷ್ಟ್ರ, ತೆಲಂಗಾಣ ಮತ್ತು ಜಿಲ್ಲೆಯ ಇತರ ಸ್ಥಳಗಳಿಗೆ ಪ್ರಯಾಣಿಕರನ್ನು ಸಾಗಿಸಲು ಜಿಲ್ಲಾಡಳಿತದಿಂದ ಖಾಸಗಿ ವಾಹನಗಳ ವ್ಯವಸ್ಥೆ ಮಾಡಲಾಗಿತ್ತು. ಸಾರಿಗೆ ನೌಕರರಿಗೆ ಮನವೊಲಿಸುವ ಕೆಲಸ ನಡೆಯುತ್ತಿದೆ ಎಂದು ವಿಭಾಗೀಯ ನಿಯಂತ್ರಣ ಅಧಿಕಾರಿ ಚಂದ್ರಕಾಂತ್ ಫುಲೆಕರ್ ಅವರು ತಿಳಿಸಿದ್ದರು. ನಂತರ 4 ಗಂಟೆಗೆ ಬಸ್ಸುಗಳು ಪ್ರಾರಂಭವಾಗಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.







