ಮಹಿಳಾ ಪೊಲೀಸರ ಅಕ್ಕ ಪಡೆಯನ್ನು ರಾಜ್ಯಾದ್ಯಂತ ವಿಸ್ತರಿಸಲು ಕ್ರಮ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೀದರ್ : ಮಹಿಳೆಯರ ಸುರಕ್ಷತೆ ಹಿನ್ನೆಲೆಯಲ್ಲಿ ಬೀದರ್ ಜಿಲ್ಲಾ ಪೊಲೀಸ್ ಇಲಾಖೆಯು ರಚಿಸಿದ ಮಹಿಳಾ ಪೊಲೀಸ್ ಅಕ್ಕ ಪಡೆಯನ್ನು ರಾಜ್ಯಾದ್ಯಂತ ವಿಸ್ತರಿಸಲು ಗೃಹ ಸಚಿವರೊಂದಿಗೆ ಚರ್ಚಿಸುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಿಳಿಸಿದರು.
ಇಂದು ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ಕಲಬುರಗಿ ವಿಭಾಗ ಮಟ್ಟದಲ್ಲಿ ಐಸಿಡಿಎಸ್ ಶಾಖೆಯಲ್ಲಿ ಕೈಗೊಂಡಿರುವ ಪ್ರಗತಿ ಪರಿಶೀಲನೆ ನಂತರ ಅವರು ಮಾತನಾಡಿದರು.
ಮಹಿಳೆಯರ ರಕ್ಷಣೆ ಹಾಗೂ ಸಮಸ್ಯೆ ಬಗೆಹರಿಸಲು ಮಹಿಳಾ ಪೊಲೀಸರ ತಂಡ ಅಕ್ಕ ಪಡೆಯ ಮಾದರಿ ಶ್ಲಾಘನೀಯವಾಗಿದೆ. ಇಂಥ ಪಡೆಯನ್ನು ಪ್ರತಿ ಜಿಲ್ಲೆಯಲ್ಲೂ ರಚಿಸುವಂತೆ ಗೃಹ ಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಅವರು ತಿಳಿಸಿದರು.
ಅಂಗವಿಕಲರ ಯುಡಿಐ ಕಾರ್ಡ್ ವಿತರಣೆಯಲ್ಲಿರುವ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು. ಮಕ್ಕಳ ಹಾಗೂ ಮಹಿಳೆಯರ ಕಳ್ಳ ಸಾಗಾಣಿಕೆ, ಭಿಕ್ಷಾಟನೆ ಕುರಿತು ತೀವೃ ನಿಗಾ ವಹಿಸುವಂತೆ ಅದಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ. ಅಪೌಷ್ಠಿಕತೆ ನಿವಾರಣೆಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬೀದರ್ ಜಿಲ್ಲೆಯಲ್ಲಿ ಮೊಟ್ಟೆ ವಿತರಣೆ ಸಮಸ್ಯೆ ಕುರಿತು ಗಮನಕ್ಕೆ ಬಂದಿದ್ದು, ರಾಜ್ಯದ ಇತರೆ ಜಿಲ್ಲೆಗಳಂತೆ ಬಾಲ ವಿಕಾಸ ಸಮಿತಿಗೆ ಮೊಟ್ಟೆ ಅನುದಾನ ಸಂದಾಯವಾಗುವಂತೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.