ಯುವಕರಲ್ಲಿ ಹೃದಯಕ್ಕೆ ಸಂಬಂಧಿಸಿದ ಕಾಯಿಲೆ ಹೆಚ್ಚಾಗಳು ಮುಖ್ಯ ಕಾರಣ ಮಾನಸಿಕ ಒತ್ತಡ: ಹೃದಯ ರೋಗ ತಜ್ಞ ನಿತೀನ್ ಗುದಗೆ

ಬೀದರ್: ಇತ್ತೀಚಿಗೆ ಯುವಕರಲ್ಲಿ ಹೃದಯಕ್ಕೆ ಸಬಂಧಿಸಿದ ಕಾಯಿಲೆಗಳಿಂದ ಮೃತಪಡುತ್ತಿದ್ದಾರೆ. ಇದಕ್ಕೆಲ್ಲ ಮುಖ್ಯ ಕಾರಣ ಮಾನಸಿಕ ಒತ್ತಡವಾಗಿದೆ ಎಂದು ಹೃದಯ ರೋಗ ತಜ್ಞ ನಿತೀನ್ ಗುದಗೆ ಅವರು ತಿಳಿಸಿದರು.
ಇಂದು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಹೃದಯ ಸಂಬಂಧಿ ಕಾಯಿಲೆಗಳಿಗೆ ಪ್ರಮುಖವಾಗಿ ನಾಲ್ಕು ಕಾರಣಗಳಿದ್ದು ಅದರಲ್ಲಿ ಮುಖ್ಯವಾಗಿ ಮಾನಸಿಕ ಒತ್ತಡವಾಗಿದೆ. ಹಾಗೆಯೇ ಕಡಿಮೆ ನಿದ್ದೆ ಮಾಡುವುದು. ಅತೀ ಹೆಚ್ಚಾಗಿ ಮೊಬೈಲ್ ಬಳಸುವುದು ಮತ್ತು ಜಂಕ್ ಫುಡ್ ಹೆಚ್ಚಾಗಿ ತಿನ್ನುವುದರಿಂದ ಯುವಕರಲ್ಲಿ ಹೆಚ್ಚಾಗಿ ಹೃದಯಾಘಾತ ಕಾಣಿಸುತ್ತಿದೆ ಎಂದರು.
ಆಹಾರವನ್ನು ಸರಿಯಾದ ಸಮಯಕ್ಕೆ ತಿನ್ನುವುದು ಮುಖ್ಯ. ಇತ್ತೀಚಿಗೆ ಜನರು ನಗುವುದನ್ನೇ ಮರೆಯುತ್ತಿದ್ದಾರೆ. ನಗು ಆರೋಗ್ಯಕ್ಕೆ ಉತ್ತಮ. ಬರ್ತ್ಡೇ, ಮ್ಯಾರೇಜ್ ಆನಿವರ್ಸರಿ ಮಾಡಿದ ಹಾಗೆ ವರ್ಷಕ್ಕೊಮ್ಮೆ ʼಹೆಲ್ತ್ ಅನಿವರ್ಸರಿʼ ಎಂದು ತಮ್ಮ ತಮ್ಮ ಆರೋಗ್ಯ ಚೆಕಪ್ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ. ವಿಜಯಕುಮಾರ್ ಕೋಟೆ ಅವರು ಮಾತನಾಡಿ, ಜಿಲ್ಲೆಯ ಐದು ಆಸ್ಪತ್ರೆಗಳಲ್ಲಿ ಐದು ಕ್ಯಾಥ್ ಲ್ಯಾಬ್ ಗಳಿವೆ. ಹಾಗಾಗಿ ಜಿಲ್ಲೆಯ ಜನರು ಬೇರೆ ರಾಜ್ಯಗಳಿಗೆ ಹೋಗುವ ಅವಶ್ಯಕತೆ ಇಲ್ಲ. ಕೆಲವೊಂದು ಖಾಸಗಿ ಆಸ್ಪತ್ರೆಯಲ್ಲಿ ಸರ್ಕಾರದ ಯೋಜನೆಗಳು ಚಾಲ್ತಿಯಲ್ಲಿದ್ದು, ಆರೋಗ್ಯ ಭಾಗ್ಯ, ಸಂಜೀವಿನಿ, ಆಯುಷ್ಮಾನ್ ಮತ್ತು ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್ ಇದ್ದವರಿಗೆ ಯೋಜನೆಯಲ್ಲಿರುವ ರಿಯಾಯಿತಿ ಅಥವಾ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು.
ಇತ್ತೀಚಿಗೆ ಹೃದಯರೋಗಗಳು ಹೆಚ್ಚಾಗುತ್ತಿವೆ ಎಂದು ಭಯಪಟ್ಟವರು ಭಯದಿಂದ ಹೊರಬರಬೇಕು. ಭಯಪಡುವ ಅಗತ್ಯವಿಲ್ಲ. ಯಾವುದೇ ದುಷ್ಚಟಗಳು ಫಲ ನೀಡುವುದಿಲ್ಲ. ದುಷ್ಚಟಗಳಿಂದ ದೂರವಿರಬೇಕು ಎಂದು ಸಲಹೆ ನೀಡಿದರು.
ಡಾ. ನಾಗರಾಜ್ ಅವರು ಮಾತನಾಡಿ, ಚಿಕ್ಕ ಮಕ್ಕಳು, ವಿದ್ಯಾರ್ಥಿಗಳ ಮೇಲೆ ಅಂಕಗಳಿಗೋಸ್ಕರ ಮಾನಸಿಕ ಒತ್ತಡಕ್ಕೆ ತಳ್ಳಬೇಡಿ. ಇದರಿಂದಾಗಿ ಹೃದಯ ಕಾಯಿಲೆಗಳು ಹೆಚ್ಚಾಗುತ್ತಿವೆ ಎಂದರು.
ಈ ಸಂದರ್ಭದಲ್ಲಿ ಸಂದರ್ಭದಲ್ಲಿ ಭಾರತೀಯ ವೈದ್ಯಕೀಯ ಸಂಘದ ಕಾರ್ಯದರ್ಶಿ ಡಾ. ಸಂತೋಷ್ ರೇಜಂತಲ್, ಡಾ. ಶರದ್ ಮಸೂದಿ, ಡಾ. ಸಂಜೀವಕುಮಾರ್ ರೆಡ್ಡಿ, ಡಾ. ಸಚಿನ್ ಗುದಗೆ ಹಾಗೂ ಡಾ. ಮಹೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.