ಕಬ್ಬಿಗೆ ಬೆಲೆ ನಿಗದಿ ವಿಚಾರ : ಹುಮನಾಬಾದ್‌ನಲ್ಲಿ ರೈತರಿಂದ ಬೃಹತ್ ಪ್ರತಿಭಟನೆ

ಹುಮನಾಬಾದ : ಕಬ್ಬಿನ ದರ ನಿಗದಿಪಡಿಸಬೇಕು ಎಂದು ಆಗ್ರಹಿಸಿ ಹುಮನಾಬಾದ್ ನಗರದಲ್ಲಿ ರೈತರಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಇಂದು ನಗರದ ಪ್ರವಾಸಿ ಮಂದಿರದಿಂದ ಆರಂಭವಾದ ಪ್ರತಿಭಟನೆಯು ಅಂಬೇಡ್ಕರ್ ವೃತ್ತ, ಹಳೆ ತಹಶೀಲ್ದಾರ್ ಕಚೇರಿ ಹಾಗೂ ಶಿವಾಜಿ ವೃತ್ತದ ಮೂಲಕ ರಾಷ್ಟ್ರೀಯ ಹೆದ್ದಾರಿ ಕಡೆಗೆ ಸಾಗಿತ್ತು. ಟ್ರ್ಯಾಕ್ಟರ್‌ಗಳಲ್ಲಿ ಹಸಿರು ಶಾಲು ಬೀಸುತ್ತಾ ತಂಡೋಪತಂಡವಾಗಿ ರೈತರು ಆಗಮಿಸಿದರು. ಎತ್ತಿನ ಬಂಡಿ, ಟ್ರ್ಯಾಕ್ಟರ್‌ಗಳಿಗೆ ಕಬ್ಬು ಕಟ್ಟಿ ವಿನೂತನವಾಗಿ ಹೋರಾಟ ನಡೆಸಿದರು.
ಪ್ರತಿಭಟನೆ ಮೆರವಣಿಗೆಯು ರಾಷ್ಟ್ರೀಯ ಹೆದ್ದಾರಿ ಕಡೆಗೆ ಸಾಗುತ್ತಿರುವಾಗ ಮಾರ್ಗಮಧ್ಯದಲ್ಲಿ ಪ್ರತಿಭಟನಾ ನಿರತ ರೈತರನ್ನು ಪೊಲೀಸರು ತಡೆದರು. ರೈತರ ಪ್ರತಿಭಟನೆಗೆ ದಲಿತ ಸಂಘಟನೆ, ಕಾರ್ಮಿಕ ಸಂಘಟನೆ ಹಾಗೂ ವಕೀಲ ಸಂಘಟನೆಯವರು ಸೇರಿ ಹಲವಾರು ಸಂಘಟನೆಗಳು ಬೆಂಬಲ ಸೂಚಿಸಿದವು. ಪ್ರತಿಭಟನೆಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಲಾಯಿತು.
ಎತ್ತಿನ ಬಂಡಿ, ಟ್ರ್ಯಾಕ್ಟರ್ ಅಲ್ಲಿ ಹಳ್ಳಿ ಹಳ್ಳಿಗಳಿಂದ ಸಾವಿರಾರು ಸಂಖ್ಯೆಯಲ್ಲಿ ಬಂದ ರೈತರು, ಸಿಎಂ ಸಿದ್ದರಾಮಯ್ಯ, ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರ ಶ್ರದ್ಧಾಂಜಲಿ ಭಾವಚಿತ್ರ ಹಿಡಿದು ಆಕ್ರೋಶ ವ್ಯಕ್ತಪಡಿಸಿದರು. ರೈತರಿಂದ ಆ ಮೂವರ ಭಾವಚಿತ್ರಗಳು ಕಸಿದುಕೊಳ್ಳಲು ಪೊಲೀಸರು ಮುಂದಾದ ಹರಸಾಹಸ ಪಟ್ಟರು. ಹುಮನಬಾದ್ ಡಿವೈಎಸ್‌ಪಿ ಮಡಿವಾಳಪ್ಪ ಟ್ರ್ಯಾಕ್ಟರ್ ಏರಿ ಭಾವಚಿತ್ರ ಕಸಿದುಕೊಳ್ಳಲು ಯತ್ನಿಸಿದರು ಕೂಡ ರೈತರು ಭಾವಚಿತ್ರ ನೀಡುವುದಕ್ಕೆ ನಿರಾಕರಿಸಿದರು. ಈ ಸಮಯದಲ್ಲಿ ಕೆಲಹೊತ್ತು ಪೊಲೀಸ್ ಮತ್ತು ರೈತರ ನಡುವೆ ವಾಕ್ಸಮರ ನಡೆಯಿತು.
ರೈತರ ಹೋರಾಟಕ್ಕೆ ಹುಮನಾಬಾದ್ ನ ಶಾಸಕ ಸಿದ್ದು ಪಾಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ್ ಪಾಟೀಲ್, ಮಾಜಿ ಸಚಿವ ರಾಜಶೇಖರ್ ಪಾಟೀಲ್, ಎಂಎಲ್‌ಸಿ ಭೀಮರಾವ್ ಪಾಟೀಲ್ ಬೆಂಬಲ ಸೂಚಿಸಿದರು. ಪಕ್ಷಾತೀತವಾಗಿ ರೈತರ ಹೋರಾಟಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಎರಡು ಪಕ್ಷದ ನಾಯಕರು ಬೆಂಬಲ ನೀಡಿದರು.
ಈ ರೈತರ ಹೋರಾಟಕ್ಕೆ ಹುಮನಾಬಾದ್ ತಾಲ್ಲೂಕಿನ ವಕೀಲರ ಸಂಘವೂ ಬೆಂಬಲ ಸೂಚಿಸಿ, ರೈತರ ಪ್ರತಿಭಟನಾ ಮೆರವಣಿಗೆಯಲ್ಲಿ ವಕೀಲರು ಕೂಡ ಭಾಗವಹಿಸಿದರು.
ಬೀದರ್ ಜಿಲ್ಲೆಯಲ್ಲಿ ಪ್ರತಿ ಟನ್ ಕಬ್ಬಿಗೆ 3,500 ರೂ. ನಿಗದಿ ಮಾಡಬೇಕು. ಅಲ್ಲಿಯವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ. ನಮ್ಮ ಬೇಡಿಕೆಗಳು ಈಡೇರುವವರೆಗೆ ನಮ್ಮ ಹೋರಾಟ ನಿರಂತರವಾಗಿ ಮುಂದುವರೆಯಲಿದೆ ಎಂದು ರೈತರು ಎಚ್ಚರಿಸಿದರು.







