ಬೀದರ್ | ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಡಾ.ಅಂಬೇಡ್ಕರ್ ಫೋಟೋ ಇಡದೆ ಅವಮಾನ : ಜ್ಞಾನ ಸುಧಾ ಮಹಾವಿದ್ಯಾಲಯದ ವಿರುದ್ಧ ಕ್ರಮ ಕೈಗೊಳ್ಳಿ : ಘಾಳೇಪ್ಪಾ ಲಾಧಾಕರ್

ಬೀದರ್ : 79ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಜ್ಞಾನ ಸುಧಾ ಮಹಾವಿದ್ಯಾಲಯದಲ್ಲಿ ಡಾ.ಅಂಬೇಡ್ಕರ್ ಫೋಟೊ ಇಡದೆ ಅವಮಾನ ಮಾಡಲಾಗಿದ್ದು, ಆ ಮಹಾವಿದ್ಯಾಲಯದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಭೀಮ್ ಆರ್ಮಿಯ ಜಿಲ್ಲಾ ಗೌರವಾಧ್ಯಕ್ಷ ಘಾಳೇಪ್ಪಾ ಲಾಧಾಕರ್ ಅವರು ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.
ಮಹಾತ್ಮ ಗಾಂಧಿ ಅವರ ಭಾವಚಿತ್ರದೊಂದಿಗೆ ಡಾ.ಅಂಬೇಡ್ಕರ್ ಅವರ ಭಾವಚಿತ್ರವಿಟ್ಟು ಪೂಜಿಸುವುದು ಸರ್ಕಾರದ ಆದೇಶವಿರುತ್ತದೆ. ಬೀದರ್ ಜಿಲ್ಲೆಯ ಪ್ರತಿಷ್ಠತ ಕಾಲೇಜಾದ ಜ್ಞಾನ ಸುಧಾ ಮಹಾವಿದ್ಯಾಲಯದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧಿ ಅವರ ಭಾವಚಿತ್ರದೊಂದಿಗೆ ಡಾ.ಅಂಬೇಡ್ಕರ್ ಅವರ ಭಾವಚಿತ್ರ ಇಡದೆ ಪೂಜೆ ಸಲ್ಲಿಸಲಾಗಿದೆ ಎಂದು ಆರೋಪಿಸಲಾಗಿದೆ.
ಸರಕಾರದ ಆದೇಶವಿದ್ದರೂ ಕೂಡ ಜ್ಞಾನಸುಧಾ ಸಂಸ್ಥೆಯ ಅಧ್ಯಕ್ಷರು ಸರ್ಕಾರದ ನಿಯಮವನ್ನು ಉಲ್ಲಂಘಿಸಿ ಕೇವಲ ಮಹಾತ್ಮ ಗಾಂಧೀಜಿಯವರ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಿದ್ದಾರೆ. ಡಾ. ಅಂಬೇಡ್ಕರ್ ಅವರ ಭಾವಚಿತ್ರ ಇಟ್ಟು ಪೂಜೆ ಮಾಡದೆ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ. ಪೂರ್ಣಿಮಾ ಜಾರ್ಜ್ ಎಂಬ ಫೇಸ್ಬುಕ್ ಅಕೌಂಟ್ ನಲ್ಲಿ ಕೇವಲ ಮಹಾತ್ಮ ಗಾಂಧಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿರುವುದು ಪೋಸ್ಟ್ ಮಾಡಿದ್ದಾರೆ. ಆದ ಕಾರಣ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಇವರ ಮೇಲೆ ಸೂಕ್ತವಾದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.







