ಬಾಲಕಿ ಮೃತ್ಯು ಪ್ರಕರಣವನ್ನು ಎಸ್ಐಟಿ ತನಿಖೆಗೆ ಒಪ್ಪಿಸಲಿ : ನಟ ಚೇತನ್ ಅಹಿಂಸಾ

ಬೀದರ್ : ಮೇ 8ರಂದು ಕಮಲನಗರ್ ತಾಲೂಕಿನ ಬಾಲಕಿಯ ಮೃತ್ಯು ಪ್ರಕರಣವನ್ನು ಎಸ್ಐಟಿ ತನಿಖೆಗೆ ಒಪ್ಪಿಸಬೇಕು. ಎಸ್ಐಟಿ ಮೇಲೆ ನಮಗೆ ನಂಬಿಕೆ ಇದೆ. ಅದು ಪಾರದರ್ಶಕ ಹಾಗೂ ವಸ್ತುನಿಷ್ಠ ತನಿಖೆ ನಡೆಸಲಿ ಎಂದು ನಟ ಚೇತನ್ ಅಹಿಂಸಾ ಒತ್ತಾಯಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕಮಲನಗರ್ ತಾಲೂಕಿನ ಗ್ರಾಮವೊಂದರ 16 ವರ್ಷದ ಕಬಡ್ಡಿ ಮತ್ತು ಕುಸ್ತಿ ಪಟುವಾಗಿದ್ದ ಅಪ್ರಾಪ್ತ ಬಾಲಕಿ ಮೃತಪಟ್ಟಿದ್ದಾಳೆ. ಆರಂಭದಲ್ಲಿ ಇದನ್ನು ಆತ್ಮಹತ್ಯೆ ಎಂದು ಪ್ರಕರಣ ದಾಖಲಿಸಲಾಗಿತ್ತು. ಆದರೆ ಘಟನೆ ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಇದು ಅನುಮಾನಾಸ್ಪದ ಸಾವು ಎಂದು ಕಾಣುತ್ತಿದೆ” ಎಂದರು.
“ಈ ಪ್ರಕರಣದಲ್ಲಿ ಅನೇಕ ಹೋರಾಟಗಾರರು ಹಾಗೂ ಜನಪರರು ಸರ್ಕಾರದ ಮೇಲೆ ಒತ್ತಡ ಹಾಕಿದ ಬಳಿಕ ಪೊಲೀಸರು ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿರುವುದಾಗಿ ಹೇಳುತ್ತಿದ್ದಾರೆ. ಆದರೆ ಇದುವರೆಗೆ ನಿಜವಾದ ಮಾಹಿತಿ ಸಾರ್ವಜನಿಕರಿಗೆ ತಿಳಿದಿಲ್ಲ” ಎಂದು ಆರೋಪಿಸಿದರು.
ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸತ್ಯ ಮರೆಮಾಚುತ್ತಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ ಅವರು, “ಘಟನೆ ನಡೆದು 15 ದಿನಗಳು ಕಳೆದರೂ ಐಜಿಪಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡದಿರುವುದು ಪ್ರಭಾವಿಗಳ ಒತ್ತಡದ ಪರಿಣಾಮವಾಗಿರಬಹುದು. ಆರೋಪಿಯನ್ನು ರಕ್ಷಿಸಲು ಒಳಗೊಳಗೆ ಪ್ರಯತ್ನ ನಡೆಯುತ್ತಿದೆ ಎಂಬ ಅನುಮಾನ ಮೂಡಿದೆ” ಎಂದು ಹೇಳಿದರು.
ಮೃತ ಬಾಲಕಿಯ ಮರು ಮರಣೋತ್ತರ ಪರೀಕ್ಷೆ ನಡೆಸಿ ವರದಿಯನ್ನು ಬಹಿರಂಗಗೊಳಿಸಬೇಕು. ಹೋರಾಟಗಾರರ ವಿರುದ್ಧ ಪ್ರಕರಣ ದಾಖಲಿಸಿ ಬೆದರಿಸುವ ಕೆಲಸ ನಡೆಯುತ್ತಿದ್ದು, ಇದಕ್ಕೂ ತನಿಖೆ ಅಗತ್ಯವಿದೆ ಎಂದು ಅವರು ಆಗ್ರಹಿಸಿದರು.
ಈ ಕುರಿತು ನಾನು ಗೃಹ ಸಚಿವರೊಂದಿಗೆ ಕೂಡ ಮಾತನಾಡುತ್ತೇನೆ. ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆದು, ಆರೋಪಿಗಳು ಎಷ್ಟೇ ಪ್ರಭಾವಿಗಳಾಗಿದ್ದರೂ ಶಿಕ್ಷೆ ಆಗಬೇಕು. ನೊಂದ ಕುಟುಂಬಕ್ಕೆ ನ್ಯಾಯ ಒದಗಿಸುವ ಹೊಣೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಮೇಲಿದೆ ಎಂದು ಹೇಳಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಹೋರಾಟಗಾರರ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಬಿಎಸ್‌ಪಿ ಜಿಲ್ಲಾಧ್ಯಕ್ಷ ಕಪಿಲ್ ಗೋಡಬೊಲೆ, ದಲಿತ ಮುಖಂಡರಾದ ರಾಜಕುಮಾರ್ ಮೂಲಭಾರತಿ, ಶಕ್ತಿಕಾಂತ್ ಬಾವಿದೊಡ್ಡಿ, ಹರ್ಷಿತ್ ದಾಂಡೇಕರ್, ಹನುಮಂತ್ ಮಟ್ಟೆ, ಅಂಬಾದಾಸ್ ಚಕ್ರವರ್ತಿ, ಸಂತೋಷ್ ಶಿಂದೆ, ಉತ್ತಮ್ ಸುತಾರ್ ಹಾಗೂ ರಜನಿಶ್ ಸೇರಿದಂತೆ ಇತರರು ಇದ್ದರು.






