ರೋಟರಿ ಕ್ಲಬ್ ಸಿಲ್ವರ್ ಸ್ಟಾರ್ ನ ಕಾರ್ಯ ಶ್ಲಾಘನೀಯ : ಸಚಿವ ರಹೀಮ್ ಖಾನ್
►ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ಕುರಿತು ಜಾಗೃತಿ ►50 ಕ್ಯಾನ್ಸರ್ ಯೋಧರಿಗೆ ಉಚಿತ ಚಿಕ್ಸಿತೆಯ ಭರವಸೆ

ಬೀದರ್ : ಜಿಲ್ಲೆಯ ಯುವ ಮನಸ್ಸುಗಳೆಲ್ಲ ರೋಟರಿ ಕ್ಲಬ್ ಸಿಲ್ವರ್ ಸ್ಟಾರ್ ಮೂಲಕ ಕೇವಲ ಒಂದು ವರ್ಷದಲ್ಲಿ ಸಾಕಷ್ಟು ಸಮಾಜ ಸುಧಾರಣಾ ಕೆಲಸಗಳು ಮಾಡಿದ್ದಾರೆ. ಅವರ ಈ ಕಾರ್ಯ ಸಮಾಜಕ್ಕೆ ಮಾದರಿಯಾಗಿದ್ದು, ರೋಟರಿ ಸಿಲ್ವರ್ ಸ್ಟಾರ್ ಕಾರ್ಯವನ್ನು ನೋಡಿದರೆ ನಮಗೆ ಹೆಮ್ಮೆಯಾಗುತ್ತದೆ ಎಂದು ಪೌರಾಡಳಿತ ಸಚಿವ ರಹೀಮ್ ಖಾನ್ ಅವರು ತಿಳಿಸಿದರು.
ಇಂದು ನಗರದ ಯು ಪಿ ಎಚ್ ಸಿ ಬಿದ್ರಿ ಕಾಲೋನಿಯಲ್ಲಿ ರೋಟರಿ ಕ್ಲಬ್ ಆಫ್ ಬೀದರ್ ಸಿಲ್ವರ್ ಸ್ಟಾರ್ಸ್, ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಎಫ್ ಪಿ ಎ ಇಂಡಿಯಾ ಇವರ ಸಹಯೋಗದಲ್ಲಿ ಕ್ಯಾನ್ಸರ್ ಯೋಧರಿಗೆ ಮತ್ತೊಂದು ಅವಕಾಶ ಎಂಬ ಹೆಸರಿನಲ್ಲಿ ಮಹಿಳೆಯರಿಗಾಗಿ ಆಯೋಜಿಸಿದ್ದ ವಿಶೇಷ ಆರೋಗ್ಯ ಶಿಬಿರದಲ್ಲಿ ಅವರು ಮಾತನಾಡಿದರು.
ರೋಟರಿ ಕ್ಲಬ್ ಆಫ್ ಬೀದರ್ ಸಿಲ್ವರ್ ಸ್ಟಾರ್ಸ್‌ನ ಈ ಕಾರ್ಯವನ್ನು ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರ ಜೊತೆಗೂಡಿ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರ ಗಮನಕ್ಕೆ ತಂದು ಸರ್ಕಾರದಿಂದ ಸಹಾಯಹಸ್ತ ನೀಡುವ ಕೆಲಸ ನಾನು ಮಾಡುತ್ತೇನೆ. ಜನ ಜಾತಿ, ಮತ, ಧರ್ಮಗಳ ಹೆಸರಿನಲ್ಲಿ ಜಗಳವಾಡುತ್ತಿರುವ ಈ ಕಾಲಘಟ್ಟದಲ್ಲಿ ಸಮಾಜದ ಸುಖ, ಶಾಂತಿ, ಸಮೃದ್ಧಿಗಾಗಿ ಮಾಡುತ್ತಿರುವ ನಿಮ್ಮ ಕಾರ್ಯ ಹೀಗೆ ಮುಂದುವರೆಯಲಿ ಎಂದರು.
ಹೈದ್ರಾಬಾದ್ ನ ಸ್ಟಾರ್ ಆಸ್ಪತ್ರೆಯ ನಿರ್ದೇಶಕ ಡಾ.ವಿಪಿನ್ ಗೋಯಲ್ ಅವರು ಮಾತನಾಡಿ, ಕ್ಯಾನ್ಸರ್ ರೋಗವನ್ನು ಅರ್ಲಿ ಸ್ಟೇಜ್ ನಲ್ಲಿ ಪತ್ತೆ ಹಚ್ಚುವುದು ಅತ್ಯವಶ್ಯಕವಾಗಿದೆ. ಭಾರತದಲ್ಲಿ ಶೇ.70 ರಿಂದ 80 ರಷ್ಟು ಕ್ಯಾನ್ಸರ್ ರೋಗಗಳು ಮೂರನೇ ಹಂತದಲ್ಲಿ ಪತ್ತೆಯಾಗುತ್ತವೆ. ಆದರೆ ಕ್ಯಾನ್ಸರ್ ರೋಗವು 3ನೇ ಹಂತದಲ್ಲಿ ಪತ್ತೆಯಾದಾಗ ರೋಗದಿಂದ ಗುಣಮುಖರಾಗುವ ಸಾಧ್ಯತೆ ತುಂಬಾ ಕಡಿಮೆ ಇರುತ್ತದೆ ಎಂದು ಮಾಹಿತಿ ನೀಡಿದರು.
ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವುದು, ಉಚಿತ ತಪಾಸಣೆಯ ಅವಕಾಶ ನೀಡುವುದು ಮತ್ತು ಅಗತ್ಯವಿದ್ದವರಿಗೆ ಉಚಿತ ಶಸ್ತ್ರಚಿಕಿತ್ಸೆ ಒದಗಿಸುವುದು ಶಿಬಿರದ ಮುಖ್ಯ ಉದ್ದೇಶವಾಗಿದ್ದು, ಪ್ರಾರಂಭಿಕ ಹಂತದಲ್ಲಿ ರೋಗ ಪತ್ತೆ ಹಚ್ಚುವ ಮತ್ತು ತಕ್ಷಣದ ಚಿಕ್ಸಿತೆಯಿಂದ ಜೀವ ರಕ್ಷಿಸಬಹುದು ಎಂಬುದರ ಮಹತ್ವವನ್ನು ಈ ಕಾರ್ಯಕ್ರಮದಲ್ಲಿ ತಿಳಿಸಲಾಯಿತು. ಹಾಗೆಯೇ ಜಿಲ್ಲೆಯ ಮಹಿಳೆಯರು ಈ ಶಿಬಿರದಲ್ಲಿ ಭಾಗಿಯಾಗಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ರೋಟರಿ ಸಿಲ್ವರ್ ಸ್ಟಾರ್ ಸಲಹೆಗಾರ ಬಸವರಾಜ್ ಧನ್ನೂರ್, ರೋಟರಿ ಸಿಲ್ವರ್ ಸ್ಟಾರ್ ಅಧ್ಯಕ್ಷ ಪುನೀತ್ ಸಿಂಗ್, ಸಿಲ್ವರ್ ಸ್ಟಾರ್ ನ ಪ್ರಧಾನ ಕಾರ್ಯದರ್ಶಿ ಪೂಜಾ ಜಾರ್ಜ್, ಕ್ಲಬ್ ಉಪಾಧ್ಯಕ್ಷ ಆದೀಶ್ ವಾಲಿ, ಕ್ಲಬ್ ನ ಜಂಟಿ ಕಾರ್ಯದರ್ಶಿ ಸ್ಫೂರ್ತಿ ಧನ್ನೂರ್, ಕ್ಲಬ್ ನ ನಿರ್ದೇಶಕಿ ಸಹನಾ ಪಾಟೀಲ್, ಎಫ್.ಪಿ.ಎ.ಐ ಅಧ್ಯಕ್ಷ ಮಲ್ಲಿಕಾರ್ಜುನ್ ಪಾಟೀಲ್, ಡಾ.ದೀಪಕ್ ಕೊಂಡಾ, ಐ.ಎಮ್.ಎ ಅಧ್ಯಕ್ಷೆ ಸರಿತಾ ಭದಬದೆ, ರೋಟರಿ ಕಲ್ಯಾಣ ವಲಯದ ಅಸಿಸ್ಟೆಂಟ್ ಗವರ್ನರ್ ಸೂರ್ಯಕಾಂತ್ ರಾಮಶೆಟ್ಟಿ, ಡಾ.ಸಂಗಮೇಶ ವಡಗಾಂವೆ ಹಾಗೂ ಖಜಾಂಚಿ ಅಮಯ್ ಸಿಂಧೋಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.