ಬೀದರ್ | ಆನ್ ಲೈನ್ ವಂಚನೆಯಿಂದ ಎಚ್ಚರ ವಹಿಸಿ, ಜಾಗೃತಗೊಳ್ಳಬೇಕಾದ ಅವಶ್ಯಕತೆಯಿದೆ : ಪ್ರೊ.ಬಿ.ಎಸ್.ಬಿರಾದಾರ್

ಬೀದರ್ : ಇಂದಿನ ಡಿಜಿಟಲ್ ಯುಗದ ವ್ಯವಹಾರದಲ್ಲಿ ಆನ್ ಲೈನ್ ವಂಚನೆ ಹಾಗೂ ಮೋಸಗಳು ನಿರಂತರವಾಗಿ ನಡೆಯುತ್ತಿವೆ. ಇಂತಹ ವಂಚನೆಯಿಂದ ಎಲ್ಲರೂ ಎಚ್ಚರವಹಿಸಿ, ಜನಸಾಮಾನ್ಯರು ಜಾಗೃತಗೊಳ್ಳಬೇಕಾದ ಅವಶ್ಯಕತೆಯಿದೆ ಎಂದು ಬೀದರ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಎಸ್.ಬಿರಾದಾರ್ ಹೇಳಿದರು.
ಇಂದು ಬೀದರ್ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಡಿಜಿಟಲ್ ತಂತ್ರಜ್ಞಾನ ಹಾಗೂ ಸೈಬರ್ ಸೆಕ್ಯೂರಿಟಿ ಅರಿವು ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಪ್ರತಿದಿನ ಎಲ್ಲೋ ಒಂದು ಕಡೆ ಸೈಬರ್ ಅಪರಾಧಗಳು ಜರುಗುತ್ತಲೇ ಇವೆ. ವಂಚಕರು ವಿನೂತನ ತಂತ್ರಜ್ಞಾನದಿಂದ ಜನರಿಗೆ ಮೋಸ ಮಾಡುತ್ತಿದ್ದಾರೆ. ಇದರಿಂದ ಸಾರ್ವಜನಿಕರು ಎಚ್ಚರವಹಿಸಬೇಕಿದೆ ಎಂದರು.
ಭಾಲ್ಕಿ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕ ಶಿವಾನಂದ್ ಪವಾಡಶೆಟ್ಟಿ ಮಾತನಾಡಿ, ವ್ಯಕ್ತಿಗಳ ವೈಯಕ್ತಿಕ ಮಾಹಿತಿ ಅವರಿಗೆ ಗೊತ್ತಿಲ್ಲದಂತೆಯೇ ವಂಚಕರಿಗೆ ಸುಲಭವಾಗಿ ದೊರೆಯುತ್ತಿರುವುದು ದುರಂತವಾಗಿದೆ. ಪ್ರತಿಯೊಬ್ಬರು ತಮ್ಮ ಡಿವೈಸ್ಗಳನ್ನು ಅತ್ಯಂತ ಜಾಗೃತವಹಿಸಿ ನಿರ್ವಹಿಸಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಮೊಬೈಲ್ ಬಳಕೆಯ ಸಂದರ್ಭದಲ್ಲಿ ಸದಾ ಎಚ್ಚರವಹಿಸಬೇಕಾಗಿದೆ ಎಂದು ತಿಳಿಸಿದರು.
ಪೊಲೀಸ್ ವೃತ್ತ ನಿರೀಕ್ಷಕ ಗುರುಪಾದ್ ಬಿರಾದಾರ್ ಮಾತನಾಡಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಮಾಹಿತಿ ಕೇಂದ್ರದ ತಾಂತ್ರಿಕ ನಿರ್ದೇಶಕ ಕೆ.ಶ್ರೀನಿವಾಸ್, ಬೀದರ್ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಶಾಂತಲಿಂಗ್ ಸಾವಳಗಿ, ನಾಗಭೂಷಣ ಕಮಠಾಣೆ, ಮೌಲ್ಯಮಾಪನ ಕುಲಸಚಿವ ಪ್ರೊ.ಪರಮೇಶ್ವರ್ ನಾಯ್ಕ.ಟಿ, ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು ಹಾಗೂ ಶಿಕ್ಷಣ ನಿಕಾಯದ ಡೀನ್ ಡಾ.ಮಲ್ಲಿಕಾರ್ಜುನ್ ಕನಕಟ್ಟೆ, ವಾಣಿಜ್ಯ ಹಾಗೂ ನಿರ್ವಹಣಾ ನಿಕಾಯದ ಡೀನ್ ಡಾ.ಶರಣಪ್ಪ ಮಲಗೊಂಡ್, ಧನ್ನೂರಾ ಪೊಲೀಸ್ ಠಾಣೆಯ ಉಪನಿರೀಕ್ಷಕ ವಿಶ್ವರಾಧ್ಯ, ಭರತರಾಜ್, ಅಜಿತಕುಮಾರ್ ಹಾಗೂ ಕೇಶವ್ ಸೇರಿದಂತೆ ಇತರರು ಉಪಸ್ಥಿತರಿದ್ದರು.







