ತಾಲಿಬಾನ್ ಮತ್ತು ಮನುಸ್ಮೃತಿಗೆ ಏನೂ ವ್ಯತ್ಯಾಸವಿಲ್ಲ : ಸಚಿವ ಸಂತೋಷ್ ಲಾಡ್

ಬೀದರ್ : ಹೆಣ್ಣುಮಕ್ಕಳಿಗೆ ಯಾವುದು ಶೈಕ್ಷಣಿಕವಾಗಿ ಅವಕಾಶ ನೀಡದೆ ಮಹಿಳೆಯರ ವಿರುದ್ಧವಾಗಿರುವ ತಾಲಿಬಾನ್ ಮತ್ತು ಮನುಸ್ಮೃತಿಗೆ ಯಾವುದೇ ರೀತಿಯ ವ್ಯತ್ಯಾಸವಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಇಂದು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಯವರ 11 ವರ್ಷದ ಸಾಧನೆ ಏನೆಂದರೆ ನರೇಂದ್ರ ಮೋದಿ ಅವರು ಒಂದೇ ಒಂದು ಪತ್ರಿಕಾಗೋಷ್ಠಿ ನಡೆಸಲಿಲ್ಲ. ತಾಲಿಬಾನಿಗಳಿಗೆ ಕರೆಸಿ ಇಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದೇ ಅವರ ದೊಡ್ಡ ಹೆಗ್ಗಳಿಕೆಯಾಗಿದೆ. ಎಲ್ಲಕ್ಕಿಂತ ನಾಚಿಕೆಗೇಡಿನ ಸಂಗತಿ ಎಂದರೆ ತಾಲಿಬಾನಿಗಳು ಇಲ್ಲಿಗೆ ಬಂದು, ತಾವು ನಡೆಸುವ ಪತ್ರಿಕಾಗೋಷ್ಠಿಯಲ್ಲಿ ಮಹಿಳೆಯರಿಗೆ ಅವಕಾಶ ಮಾಡಬಾರದು ಎನ್ನುತ್ತಾರಲ್ಲ ಇದು ಬಿಜೆಪಿಯವರ ಕೊಡುಗೆಯಾಗಿದೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ತಾಲಿಬಾನ್ ಮತ್ತು ಮನುಸ್ಮೃತಿಗೆ ಏನೂ ವ್ಯತ್ಯಾಸವಿಲ್ಲ. ಅದು ಬಿಜೆಪಿಯವರ ಐಡಿಯಾಲಜಿಯಾಗಿದೆ. ನದಿ, ದೇವರು, ಸರಸ್ವತಿ, ಕಾವೇರಿ ಎಲ್ಲವೂ ಹೆಣ್ಣು ಮಕ್ಕಳ ಹೆಸರ ಮೇಲೆಯೇ ಇರುವುದು. ಇವರು ಎಷ್ಟು ಮಹಿಳೆಯರಿಗೆ ಗೌರವ ನೀಡಿದ್ದಾರೆ ಎಂದರೆ, ಹೆಣ್ಣುಮಕ್ಕಳಿಗೆ ಯಾವುದು ಶೈಕ್ಷಣಿಕವಾಗಿ ಅವಕಾಶ ನೀಡದೆ ಮಹಿಳೆಯರ ವಿರುದ್ಧವಾಗಿರುತ್ತದೆಯೋ ಆ ತಾಲಿಬಾನಿಗಳಿಗೆ ಇಲ್ಲಿಗೆ ಕರೆಸಿ ಸನ್ಮಾನ ಮಾಡಲಾಗುತ್ತದೆ. ತಾಲಿಬಾನಿಗಳನ್ನು ಯಾಕೆ ಬೈಕಾಟ್ ಮಾಡುತ್ತಿಲ್ಲ. ಕಾಂಗ್ರೆಸ್ ನವರನ್ನು ತಾಲಿಬಾನ್ ಎಂದು ಬಯ್ಯುವ್ ಇವರು, ತಾಲಿಬಾನಿಗಳನ್ನು ಕರೆಸಿ ಪ್ರೊಟೋಕಾಲ್ ಪ್ರಕಾರ ಅವರಿಗೆ ಸೆಲ್ಯೂಟ್ ಹೊಡೆಯುತ್ತಿದ್ದಾರೆ ಎಂದು ಹೇಳಿದರು.
ವಾಜಪೇಯಿ, ಅಡ್ವಾಣಿ ಹಾಗೆಯೇ ಮೋದಿ ಕೂಡ ಪಾಕಿಸ್ತಾನಕ್ಕೆ ಹೋಗಿ ಬಂದರು. ಪಾಕಿಸ್ತಾನ ಜೊತೆಗೆ ಕ್ರಿಕೆಟ್ ಮ್ಯಾಚ್ ಆಡಿಸಿದರು. ಈಗ ತಾಲಿಬಾನಿಗಳನ್ನು ಕರೆಸಿದ್ದಾರೆ. ಈ ವಿಷಯಗಳ ಬಗ್ಗೆ ಚರ್ಚೆಯೇ ಮಾಡುವುದಿಲ್ಲ ಎಂದರು.
ಈ ಸರ್ಕಾರದಲ್ಲಿ ಭಾರತದಾದ್ಯಂತ ಅದೆಷ್ಟೋ ಪತ್ರಕರ್ತರನ್ನು ಕೊಲೆ ಮಾಡಲಾಗಿದೆ. ಯಾರು ಸರ್ಕಾರದ ವಿರುದ್ಧವಾಗಿ ಮಾತನಾಡಿದ್ದಾರೂ ಅವರು ಕೊಲೆಯಾಗಿದ್ದಾರೆ. ಗೌರಿ ಲಂಕೇಶ್, ಕಲ್ಬುರ್ಗಿ ಅವರನ್ನು ಹತ್ಯೆ ಮಾಡಲಾಯಿತು. ವ್ಯಾಪಂ ಪ್ರಕರಣದಲ್ಲಿರುವ ಸುಮಾರು 44 ಸಾಕ್ಷಿಗಳನ್ನು ಕೊಲೆ ಮಾಡಲಾಗಿದೆ. ಇದರ ಬಗ್ಗೆ ಯಾವುದೇ ರೀತಿಯ ಚರ್ಚೆಯಾಗುವುದಿಲ್ಲ. ಯಾವುದೇ ರೀತಿಯ ತನಿಖೆ ನಡೆಯುವುದಿಲ್ಲಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಪೌರಾಡಳಿತ ಮತ್ತು ಹಜ್ ಸಚಿವ ರಹೀಮ್ ಖಾನ್, ಮಹಾನಗರ ಪಾಲಿಕೆಯ ಅಧ್ಯಕ್ಷ ಮುಹಮ್ಮದ್ ಗೌಸ್, ಅನಿಲ್ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ್ ಅರಳಿ ಸೇರಿದಂತೆ ಇತರರು ಇದ್ದರು.







