ಬಿಜೆಪಿಯವರು ಎಮರ್ಜೆನ್ಸಿ ಬಗ್ಗೆ ಮಾತಾಡಿದರೆ ಏನು ಉಪಯೋಗವಿಲ್ಲ, ಪ್ರಸ್ತುತ ಅಭಿವೃದ್ಧಿ ಬಗ್ಗೆ ಮಾತನಾಡಲಿ : ಸಚಿವ ಶರಣಬಸಪ್ಪ ದರ್ಶನಾಪುರ

ಬೀದರ್ : ಎಮರ್ಜೆನ್ಸಿ ಒಳ್ಳೇದು ಅಂತ ಯಾರು ಹೇಳಿಲ್ಲ. ಎಮರ್ಜೆನ್ಸಿಯಾಗಿ 50 ವರ್ಷ ಕಳೆದಿವೆ. ಅದರ ಬಗ್ಗೆ ಮಾತನಾಡಿದರೆ ಇವಾಗ ಉಪಯೋಗವಿಲ್ಲ. ಪ್ರಸ್ತುತ ಅಭಿವೃದ್ಧಿ ಕೆಲಸಗಳ ಬಗ್ಗೆ ಬಿಜೆಪಿಯವರು ಮಾತನಾಡಲಿ ಎಂದು ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.
ಇಂದು ನಗರಕ್ಕೆ ಆಗಮಿಸಿದ ಅವರು, ತುರ್ತು ಪರಿಸ್ಥಿತಿ ಜಾರಿಗೆ ಬಂದ 50 ವರ್ಷವಾದ ಹಿನ್ನೆಲೆಯಲ್ಲಿ ಬಿಜೆಪಿ ಕರಾಳ ದಿನಾಚರಣೆ ಮಾಡುತ್ತಿರುವ ವಿಚಾರವಾಗಿ ಪತ್ರಕರ್ತರೊಂದಿಗೆ ಮಾತನಾಡುತ್ತಾ, 1977 ರಲ್ಲಿ ಆದ ಎಮರ್ಜೆನ್ಸಿ ಬಗ್ಗೆ ಮಾತಾಡುವುದರಿಂದ ಈಗ ಅಭಿವೃದ್ಧಿ ಆಗುತ್ತಾ ಎಂದು ಪ್ರಶ್ನಿಸಿದರು.
ಎಮರ್ಜೆನ್ಸಿ ಒಳ್ಳೇದು ಅಂತ ಯಾರು ಹೇಳಿಲ್ಲ. 50 ವರ್ಷ ಆದ ಮೇಲೆ ಆ ವಿಷಯ ಯಾಕೆ? ಕೇಂದ್ರದಲ್ಲಿ ಅಧಿಕಾರದಲ್ಲಿರುವ ಅವರು ಏನ್ ಮಾಡ್ತಿದ್ದಾರೆ ಎನ್ನುವುದು ಹೇಳಲಿ. ಅಭಿವೃದ್ಧಿ ಬಗ್ಗೆ ಅವರು ಮಾತನಾಡುವುದಿಲ್ಲ ಎಂದು ಕಿಡಿ ಕಾರಿದರು.
ಬಿಜೆಪಿಯವರು ಅಭಿವೃದ್ಧಿ ವಿಚಾರಗಳು ಇಟ್ಟುಕೊಂಡು ಯಾವುದಾದರೂ ಚುನಾವಣೆಗೆ ಹೋಗಿದ್ದಾರಾ? ನಾವು ಕೆಲಸ ಮಾಡಿದ್ದೀವಿ ಎಂದು ಅವರು ಎದೆ ತಟ್ಟಿ ಹೇಳಿದ್ದಾರಾ ಎಂದು ಪ್ರಶ್ನಿಸಿದ ಅವರು, 11 ವರ್ಷದಲ್ಲಿ ರೈತರಿಗೆ, ಕೂಲಿ ಕಾರ್ಮಿಕರಿಗೆ ಅವರು ಏನು ಮಾಡಲಿಲ್ಲ ಎಂದು ಗುಡುಗಿದರು.
ಗೃಹಲಕ್ಷ್ಮಿ ಹಣ ವಿಳಂಬದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು ಅವರು, 15 ಲಕ್ಷ ಕೊಡ್ತಿವಿ ಅಂತ ಹೇಳಿ 11 ವರ್ಷ ಆಯ್ತು ಅದನ್ನ ಯಾರು ಕೇಳುತ್ತಿಲ್ಲ. ಗೃಹಲಕ್ಷ್ಮಿ ಹಣಕ್ಕೆ ಎರಡು ತಿಂಗಳು ತಡವಾದರೆ ಏನಾಯ್ತು, ಎರಡು ವರ್ಷದಿಂದ ಕೊಡ್ತಿಲ್ವಾ ಎಂದು ಪ್ರತಿಕ್ರಿಯೆ ನೀಡಿದರು.







