ರಾಮನನ್ನು ಕಾಲ್ಪನಿಕ ಎಂದವರು ಇಂದು ರಾಮನ ಹುಂಡಿ ಬಗ್ಗೆ ಮಾತನಾಡುತ್ತಿದ್ದಾರೆ : ಕೇಂದ್ರ ಮಾಜಿ ಸಚಿವ ಭಗವಂತ್ ಖೂಬಾ

ಹುಮನಾಬಾದ್ : ರಾಮ ಕಾಲ್ಪನಿಕ ಎಂದು ಹೇಳುತ್ತಿದ್ದವರು ಇಂದು ರಾಮನ ಹುಂಡಿ ಹಾಗೂ ರಾಮನ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ ಭಗವಂತ್ ಖೂಬಾ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ತಾಲೂಕಿನ ಘಾಟಬೋರಳ ಗ್ರಾಮದಲ್ಲಿ ಬಿಜೆಪಿ ಯುವ ಮುಖಂಡ ಸಾಯಿನಾಥ್ ಹಂಡಗೆ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಖಿಲೇಶ್ ಯಾದವ್ ಅವರು ಈ ಹಿಂದೆ ರಾಮ ಹಾಗೂ ರಾಮಸೇತುವೆಯನ್ನು ಕಾಲ್ಪನಿಕ ಎಂದು ಹೇಳಿದ್ದರು. ಆದರೆ ಈಗ ರಾಮನ ಹೆಸರನ್ನು ಜಪಿಸುತ್ತಿದ್ದಾರೆ. ರಾಮ ಮಂದಿರಕ್ಕೆ ಒಂದು ರೂಪಾಯಿಯೂ ದೇಣಿಗೆ ನೀಡದವರು ಇಂದು ದೇಣಿಗೆ ಕಳ್ಳತನದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
ಯಾವುದೇ ಪರಿಸ್ಥಿತಿ ಬಂದರೂ ರಾಮನ ಮೇಲಿನ ನಮ್ಮ ಭಕ್ತಿ ಮತ್ತು ಶ್ರದ್ಧೆ ಕಡಿಮೆಯಾಗುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಹಾಗೂ ಯೋಗಿ ಆದಿತ್ಯನಾಥ್ ರಾಮ ಮಂದಿರವನ್ನು ಯಾರ ದುರುಪಯೋಗಕ್ಕೂ ಬಿಡುವುದಿಲ್ಲ ಎಂದು ಹೇಳಿದರು.
ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಕುರಿತು ಮಾತನಾಡಿದ ಅವರು, ಹಿಂದೂ, ಮುಸ್ಲಿಂ, ಸಿಖ್, ಕ್ರೈಸ್ತ ಸೇರಿದಂತೆ ಎಲ್ಲ ಸಮುದಾಯದವರು ಕಡ್ಡಾಯವಾಗಿ ನಮೂನೆ ಭರ್ತಿ ಮಾಡಬೇಕು. ಭಾರತೀಯ ಪ್ರಜೆಯಾಗಿದ್ದರೆ ಮತದಾರರ ಪಟ್ಟಿಯಲ್ಲಿ ಹೆಸರು ಉಳಿಯುತ್ತದೆ. ಅಕ್ರಮವಾಗಿ ದೇಶದಲ್ಲಿರುವ ಬಾಂಗ್ಲಾದೇಶಿಗರು ಮಾತ್ರ ಈ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಸಿದ್ದು ಪಾಟೀಲ್, ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಉಲ್ಲಾಸಿನಿ ಮುದ್ದಾಳೆ, ಯುವ ಮುಖಂಡ ಸಾಯಿನಾಥ್ ಹಂಡಗೆ ಹಾಗೂ ತಾನಾಜಿ ಭೋಸಲೇ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.






