ಗಡಿ ಗ್ರಾಮಗಳಲ್ಲಿ ಕನ್ನಡ ಕಲಿಕಾ ತರಗತಿಗಳ ಅವಧಿ ವಿಸ್ತರಿಸಬೇಕು: ಕುಪೇಂದ್ರ ಎಸ್. ಹೊಸಮನಿ

ಬೀದರ್: ಗಡಿ ಗ್ರಾಮಗಳಲ್ಲಿ ಕನ್ನಡ ಕಲಿಕಾ ತರಗತಿಗಳ ಅವಧಿ ವಿಸ್ತರಿಸಬೇಕು ಎಂದು ಕುಪೇಂದ್ರ ಎಸ್. ಹೊಸಮನಿ ಅವರು ಹೇಳಿದರು.
ಕಲ್ಯಾಣ ಕರ್ನಾಟಕ ಅಶ್ವಿನಿ ಶಿಕ್ಷಣ ಸಂಸ್ಥೆ ಹಾಗೂ ಬೆಂಗಳೂರಿನ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ರವಿವಾರ ಯಾಕತಪೂರ್ ಗ್ರಾಮದಲ್ಲಿ ಮೂರು ತಿಂಗಳ ಕಾಲ ನಡೆಸಲಾದ ಕನ್ನಡ ಕಲಿಕಾ ತರಗತಿಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮೂರು ತಿಂಗಳ ಅವಧಿಯಲ್ಲಿ ಮಕ್ಕಳಿಗೆ ಕನ್ನಡ ಭಾಷೆ, ನಾಡು-ನುಡಿ, ಸಾಹಿತ್ಯ ಹಾಗೂ ಕನ್ನಡ ನಾಡಿನ ಚರಿತ್ರೆಯ ಕುರಿತು ಪಾಠಗಳನ್ನು ನೀಡಲಾಗಿದೆ ಎಂದು ತಿಳಿಸಿದ ಅವರು, ಗಡಿ ಗ್ರಾಮಗಳಲ್ಲಿ ಈ ತರಗತಿಗಳ ಅವಧಿಯನ್ನು ಕನಿಷ್ಠ ಆರು ತಿಂಗಳಿಂದ ಒಂದು ವರ್ಷದವರೆಗೆ ವಿಸ್ತರಿಸಬೇಕು ಎಂದು ಅವರು ಮನವಿ ಮಾಡಿದರು.
ಡಾ. ಗಂಗಾಂಜಲಿ ಅವರು ಮಾತನಾಡಿ, ಕನ್ನಡ ಕಲಿಕೆ ಸಂಸ್ಕೃತಿಯ ಬೆಳವಣಿಗೆಗೆ ಅತ್ಯಂತ ಅಗತ್ಯವಾಗಿದ್ದು, ಗಡಿ ಗ್ರಾಮಗಳಲ್ಲಿ ಕನ್ನಡ ಬಳಕೆಯನ್ನು ಉತ್ತೇಜಿಸಬೇಕು ಎಂದು ಹೇಳಿದರು.
ಸುರೇಶ್ ಬಿಟ್ಟೆ ಅವರು ಮಾತನಾಡಿ, ಸರ್ಕಾರ ಇಂತಹ ಕಾರ್ಯಕ್ರಮಗಳಿಗೆ ಬೆಂಬಲ ನೀಡಿರುವುದು ಶ್ಲಾಘನೀಯವಾದರೂ ಕನ್ನಡ ಕಲಿಕಾ ಕೇಂದ್ರಗಳು ಒಂದು ವರ್ಷ ನಿರಂತರವಾಗಿ ನಡೆಯಬೇಕು ಎಂದರು.
ಗೌಸುದ್ದೀನ್ ಅವರು ಮಾತನಾಡಿ, ಕನ್ನಡ ಕಲಿಕಾ ಕೇಂದ್ರಗಳು ಗ್ರಾಮೀಣ ಬಡ ಮಕ್ಕಳಿಗೆ ಬಹಳ ಉಪಯುಕ್ತವಾಗಿವೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಮಹಿಳಾ ಹೋರಾಟಗಾರ್ತಿ ಹೂವಮ್ಮ ಹಾಗೂ ಅಕ್ಷತಾ ಸೇರಿದಂತೆ ಗ್ರಾಮಸ್ಥರು, ಶಿಕ್ಷಣ ಪ್ರೇಮಿಗಳು, ಮಕ್ಕಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕನ್ನಡ ಕಲಿಕಾ ಕೇಂದ್ರದ ಶಿಕ್ಷಕಿ ಅಶ್ವಿನಿ ಕೆ. ಅವರು ನಿರೂಪಿಸಿದರು.







