ಎಲ್ಲರನ್ನೂ ಪ್ರೀತಿಯಿಂದ ಕಾಣುವುದೇ ನಿಜವಾದ ಧರ್ಮ: ಸಚಿವ ಈಶ್ವರ್ ಖಂಡ್ರೆ

ಭಾಲ್ಕಿ: ಎಲ್ಲರನ್ನೂ ಪ್ರೀತಿಯಿಂದ ಕಾಣುವುದೇ ನಿಜವಾದ ಧರ್ಮವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಹೇಳಿದರು.
ಪಟ್ಟಣದ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ಭಾನುವಾರ ಆಯೋಜಿಸಿದ್ದ ವಾರ್ಷಿಕ ಜಾತ್ರಾ ಮಹೋತ್ಸವದ ಸಂಭ್ರಮದ ಬಲಿಪೂಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಯೇಸು ಕ್ರಿಸ್ತರು ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಿದ್ದರು. ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ನೀಡುವಷ್ಟು ಕರುಣಾಮಯಿಯಾಗಿದ್ದರು. ಇಂತಹ ಕರುಣಾಮಯಿ ಯೇಸುವಿನ ಪುಣ್ಯಕ್ಷೇತ್ರದಲ್ಲಿ ಹಲವಾರು ಜನೋಪಯೋಗಿ ಕಾರ್ಯಕ್ರಮಗಳು ನಡೆಯುತ್ತಿವೆ. ಸಮಾಜಮುಖಿ ಕಾರ್ಯಗಳನ್ನು ಮಾಡುವವರು ಎಲ್ಲರ ಮೆಚ್ಚುಗೆಗೆ ಪಾತ್ರರಾಗುತ್ತಾರೆ ಎಂದರು.
ಎಲ್ಲ ಧರ್ಮಗಳಲ್ಲಿಯೂ ಸತ್ಯ ಮತ್ತು ಅಹಿಂಸೆ ಮೂಲಮಂತ್ರಗಳಾಗಿವೆ. ನಾವೆಲ್ಲರೂ ಸತ್ಯವಂತರಾಗಿ, ದಯಾಶೀಲರಾಗಿ ಬದುಕಬೇಕು ಎಂದು ತಿಳಿಸಿದರು.
ರಾಜ್ಯ ಮತ್ತು ಜಿಲ್ಲೆಯ ಅಭಿವೃದ್ಧಿಗಾಗಿ ಕಾಂಗ್ರೆಸ್ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ. ಜನಹಿತ ಕಾರ್ಯಗಳನ್ನು ಮಾಡುವಲ್ಲಿ ನಮ್ಮ ಸರ್ಕಾರ ಸದಾ ಮುಂಚೂಣಿಯಲ್ಲಿದೆ ಎಂದು ಹೇಳಿದರು.
ಗುಲ್ಬರ್ಗ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ರಾಬರ್ಟ್ ಮೈಕಲ್ ಮಿರಾಂಡಾ ಅವರು ಸಾನ್ನಿಧ್ಯ ವಹಿಸಿ ಮಾತನಾಡಿದರು. ಬೆಂಗಳೂರಿನ ಸಹಾಯಕ ಧರ್ಮಾಧ್ಯಕ್ಷ ಆರೋಕ್ಯರಾಜ್ ಸತೀಶಕುಮಾರ್ ಅವರು ನೇತೃತ್ವ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಫಾದರ್ ಡೇವಿಡ್ ಆಂತೋನಿ, ರಾಬರ್ಟ್ ಮಿರಾಂಡಾ, ಫಾದರ್ ಕ್ಲೇರಿ ಡಿಸೋಜ, ರಾಜಕುಮಾರ್ ಎನ್.ಬಿ., ಫಾದರ್ ಸಂತೋಷ್ ಬಾಪು ಹಾಗೂ ಶಿವರಾಜ್ ಹಾಸನಕರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.






