ಬೀದರ್ | ಡ್ರೋಣ್ ಮೂಲಕ ನ್ಯಾನೊ ಯೂರಿಯಾ, ನ್ಯಾನೊ ಡಿಎಪಿ ಬಳಸುವುದರಿಂದ ಪರಿಸರದ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ : ದೇವಿಕಾ

ಬೀದರ್ : ಡ್ರೋಣ್ ಮೂಲಕ ನ್ಯಾನೊ ಯೂರಿಯಾ ಹಾಗೂ ನ್ಯಾನೊ ಡಿಎಪಿ ಬಳಸುವುದರಿಂದ ಮಣ್ಣಿನ ಫಲವತ್ತತೆಗೆ ಹಾಗೂ ಪರಿಸರದ ಮೇಲೆ ಯಾವುದೇ ದುಷ್ಪರಿಣಾಮ ಬೀರದೆ ಬೆಳೆಯ ಗುಣಮಟ್ಟದಲ್ಲಿ ವೃದ್ಧಿಯಾಗುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಅವರು ತಿಳಿಸಿದರು.
ಮನ್ನಳ್ಳಿ ಹೊಬಳಿ ವ್ಯಾಪ್ತಿಯಲ್ಲಿ ಬರುವ ರೇಕುಳಗಿ ಗ್ರಾಮದಲ್ಲಿ ಪ್ರಗತಿಪರ ರೈತ ರಹಮತ್‌ಉಲ್ಲಾ ಹುಸೇನಿ ಅವರ ಕ್ಷೇತ್ರದಲ್ಲಿ ನ್ಯಾನೊ ಯೂರಿಯಾ ಹಾಗೂ ನ್ಯಾನೊ ಡಿಎಪಿ ಬಳಕೆ ಕುರಿತು ಪ್ರಾತ್ಯಕ್ಷತೆಯಲ್ಲಿ ಅವರು ಮಾತನಾಡಿದರು.
ಅತಿಯಾದ ಹರಳು ರೂಪದ ಯೂರಿಯಾ ಬಳಕೆಯಿಂದ ಮಣ್ಣಿನ ಆಮ್ಲಿಯತೆ, ನೀರಿನ ಮಾಲಿನ್ಯ ಹೆಚ್ಚುತ್ತದೆ. ಬೆಳೆಗಳ ಕೀಟ ರೋಗಗಳಿಗೆ ತುತ್ತಾಗುವ ತರಕಾರಿ, ಹಣ್ಣು, ಧಾನ್ಯಗಳಲ್ಲಿ ವಿಷಕಾರಿಯಾದ ನೈಟ್ರೇಟ್ ಹಾಗೂ ನೈಟ್ರೇಟ್ ಪದಾರ್ಥಗಳ ಅಂಶ ಹೆಚ್ಚಾಗುತ್ತದೆ. ಶಿಶುಗಳಿಗೆ ಬ್ಲೂ ಬೇಬಿ ಸಿಂಡೋಮ್ ಸಮಸ್ಯೆ ಕಾಡಬಹುದು. ಮಾನವನಿಗೆ ಕ್ಯಾನ್ಸರ್ ಹೆಚ್ಚಾಗುತ್ತದೆ. ಅಂತರ್ಜಲವು ಮಾಲಿನ್ಯಗೊಳ್ಳಬಹುದು ಎಂದು ಅವರು ಹೇಳಿದರು.
ನ್ಯಾನೊ ಯೂರಿಯಾ ದ್ರವ ರೂಪದಲ್ಲಿ ಇರುವುದರಿಂದ ಗೊಬ್ಬರಕ್ಕಿಂತ 8 ರಿಂದ 10 ಪಟ್ಟು ಹೆಚ್ಚು ಪರಿಣಾಮಕಾರಿಯಾಗಿದೆ. ಇದು ಎಲೆಗಳಗೆ ಸಿಂಪರಣೆ ಮಾಡುವುದರಿಂದ ಬೆಳೆಗಳಿಗೆ ತ್ವರಿತ್ಯ ಪೋಷಕಾಂಶಗಳು ಸಿಗುತ್ತವೆ. ರೈತರು ಹೆಚ್ಚಾಗಿ ಹರಳು ರೂಪದ ಯೂರಿಯಾ ಬದಲಾಗಿ ದ್ರವ ರೂಪದ ನ್ಯಾನೊ ಯೂರಿಯಾ ಹಾಗೂ ನ್ಯಾನೊ ಡಿಎಪಿ ಬಳಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಬೀದರ್ ನ ಸಹಾಯಕ ಕೃಷಿ ನಿರ್ದೇಶಕಿ ಆರತಿ ಪಾಟೀಲ್, ರಾಜಕುಮಾರ್ ಎಕ್ಕೇಳಿ, ಸಹಾಯಕ ಕೃಷಿ ನಿರ್ದೇಶಕ (ವಿಷಯ ತಜ್ಞ) ವಿಜಯಕುಮಾರ್ ಸಿರಂಜೆ, ಮನ್ನಳ್ಳಿಯ ರೈತ ಸಂಪರ್ಕ ಕೇಂದ್ರ ಕೃಷಿ ಅಧಿಕಾರಿ ಹಾಗೂ IFFCO ಸಂಸ್ಥೆಯ ಜಿಲ್ಲಾ ವ್ಯವಸ್ಥಾಪಕ ಸುರೇಶ್ ಸೇರಿದಂತೆ ಗ್ರಾಮದ ಪ್ರಗತಿಪರ ರೈತರಾದ ರೆಹಮತಉಲ್ಲಾ ಹುಸೇನಿ, ಮಲ್ಲಿಕಾರ್ಜುನ್ ಹಚ್ಚಿ, ಗ್ರಾಮದ ರೈತರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.







