ಉತ್ತರಾಖಂಡ ಘಟನೆಯಿಂದ ಇಡೀ ದೇಶದ ಜನರಿಗೆ ಅವಮಾನ: ಡಾ. ಭೀಮಸೇನರಾವ್ ಶಿಂಧೆ
ಮಲ್ಲಿಕಾರ್ಜುನ ಖರ್ಗೆಗೆ ಅವಮಾನ ಖಂಡಿಸಿ ಪ್ರತಿಭಟನೆ

ಔರಾದ್: ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಣ ಮಾಡಿರುವ ಘಟನೆ ಖಂಡನೀಯವಾಗಿದ್ದು, ಈ ಘಟನೆಯಿಂದ ಇಡೀ ದೇಶದ ಜನರಿಗೆ ಅವಮಾನವಾಗಿದೆ ಎಂದು ಕಾಂಗ್ರೆಸ್ ಮುಖಂಡ ಡಾ. ಭೀಮಸೇನರಾವ್ ಶಿಂಧೆ ಅವರು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಶನಿವಾರ ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಣ ಮಾಡಿದ ಘಟನೆ ಖಂಡಿಸಿ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ನಂತರದಲ್ಲಿ ತಹಶೀಲ್ದಾರ್ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, "ಈ ಕೃತ್ಯದಲ್ಲಿ ಭಾಗಿಯಾದವರನ್ನು ಗಡಿಪಾರು ಮಾಡಬೇಕು. ಇಂತಹ ಘಟನೆ ಮರುಕಳಿಸದಂತೆ ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬೇಕು" ಎಂದು ಆಗ್ರಹಿಸಿದರು.
ಸುಧಾಕರ್ ಕೊಳ್ಳೂರ್ ಅವರು ಮಾತನಾಡಿ, ಉತ್ತರಾಖಂಡದಲ್ಲಿ ಮನುವಾದಿಗಳು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಭಾಷಣೆ ಮಾಡಿದ ಸ್ಥಳ ಶುದ್ಧೀಕರಣ ಮಾಡಿರುವುದು ಅಕ್ಷಮ್ಯ ಅಪರಾಧ ಕೃತ್ಯವಾಗಿದೆ. ಈ ಕೃತ್ಯದಲ್ಲಿ ಭಾಗವಹಿಸಿದ ಕಿಡಿಗೇಡಿಗಳನ್ನು ಬಂಧಿಸಿ ಅವರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು. ಈ ಘಟನೆಯಿಂದ ಇಡೀ ದೇಶಕ್ಕೆ ಅಪಮಾನವಾಗಿದೆ. ಇಂತಹ ಘಟನೆ ನಡೆಯದಂತೆ ಎಚ್ಚರವಹಿಸಬೇಕು. ಇಲ್ಲದಿದ್ದರೆ ರಾಷ್ಟ್ರವ್ಯಾಪಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ರಾಮಣ್ಣಾ ವಡೆಯಾರ್, ಚೆನ್ನಪ್ಪ ಉಪ್ಪೆ, ಪ್ರಕಾಶ್ ಪಾಟೀಲ್, ಶರಣಪ್ಪಾ ಪಾಟೀಲ್, ಅನೀಲ್ ಹೆಡೆ, ರಾಜು ಎಡವೆ, ಶಲ್ಲಾವುದ್ದಿನ್ ಜಮಗಿ, ಹರಿದೇವ್ ಸಂಗನಾಳ್, ದತ್ತಾತ್ರಿ ಬಾಪೂರೆ, ಸತೀಷ್ ವಗ್ಗೆ, ಕೃಷ್ಣಾ ಕಾಂಬಳೆ, ಚೆಂದು ಡಿ.ಕೆ., ಮಲ್ಲಿಕಾರ್ಜುನ್ ಜೀರ್ಗೆ, ಪ್ರಶಾಂತ್ ಫುಲಾರೆ, ಅಂಜಾರೆಡ್ಡಿ ಹಾಗೂ ಪ್ರಕಾಶ್ ಜಾಧವ್ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ಭಾಗವಹಿಸಿದ್ದರು.






