ವಿಬಿ-ಜಿ ರಾಮ ಜಿಯಿಂದ ಬಡ ಕಾರ್ಮಿಕರ ಹೊಟ್ಟೆ ಮೇಲೆ ಕಲ್ಲು ಹಾಕಲಾಗುತ್ತಿದೆ : ಸಚಿವ ಈಶ್ವರ್ ಖಂಡ್ರೆ

ಬೀದರ್ : ಮನರೇಗಾ ಯೋಜನೆಯನ್ನು ಬದಲಾವಣೆ ಮಾಡಿ ವಿಬಿ-ಜಿ ರಾಮ ಜಿ ತರಲಾಗುತ್ತಿದೆ. ಇದರಿಂದಾಗಿ ಬಡ ಕೂಲಿ ಕಾರ್ಮಿಕರ ಹೊಟ್ಟೆ ಮೇಲೆ ಕಲ್ಲು ಹಾಕಿ, ಅಂಬಾನಿ, ಅದಾನಿಯವರ ಜೇಬಿಗೆ ಹಣ ಹಾಕುವ ಕೆಲಸ ಕೇಂದ್ರ ಬಿಜೆಪಿ ಸರಕಾರ ಮಾಡುತ್ತಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದರು.
ನಗರದ ಪತ್ರಿಕಾ ಭವನದಲ್ಲಿ ರವಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಚಿವ ಈಶ್ವರ್ ಖಂಡ್ರೆ, ಮನರೇಗಾ ಯೋಜನೆಯ ಉದ್ದೇಶ ಗ್ರಾಮೀಣ ಭಾಗದ ಬಡವರಿಗೆ 100 ದಿನಗಳವರೆಗೆ ಉದ್ಯೋಗ ಸೃಷ್ಟಿಸಿ, ಬೇಡಿಕೆಗೆ ಅನುಗುಣವಾಗಿ ಕೂಲಿ ನೀಡುವಂತಹ ಜಗತ್ತಿನಲ್ಲಿಯೇ ಮೊಟ್ಟ ಮೊದಲ ಕಾಯಿದೆಯಾಗಿದೆ. ಆದರೆ ಬಿಜೆಪಿ ಆ ಕಾಯಿದೆ ಬಗ್ಗೆ ಅಪಪ್ರಚಾರ ಮಾಡುತ್ತಿದೆ. ದೇಶದಲ್ಲಿ 12 ಕೋಟಿ ಜನ, ರಾಜ್ಯದಲ್ಲಿ 71.18 ಲಕ್ಷ ಜನ ಕೂಲಿ ಕಾರ್ಮಿಕರು ಸಕ್ರಿಯವಾಗಿದ್ದಾರೆ. ಈ ಎಲ್ಲರ ಉದ್ಯೋಗದ ಹಕ್ಕನ್ನು ಮೋದಿ ಸರಕಾರ ನೀರು ಪಾಲು ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಕಾಂಗ್ರೆಸ್ ವತಿಯಿಂದ ಹಳ್ಳಿಯಿಂದ ದಿಲ್ಲಿವರೆಗೆ ಮನರೇಗಾ ಬಚಾವ್ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಗಾಂಧೀಜಿಯವರ ಹೋರಾಟದಿಂದ ನಮಗೆ ಸ್ವತಂತ್ರ ಸಿಕ್ಕಿದೆ. ಆ ಸ್ವಾತಂತ್ರ್ಯವನ್ನು ದುರುಪಯೋಗ ಮಾಡಿಕೊಂಡ ಮೋದಿ ಸರಕಾರ, ಗಾಂಧೀಜಿಯವರ ಹೆಸರನ್ನೇ ಅಳಿಸುವ ಕೆಲಸ ಮಾಡಿ ಅನ್ನ ತಿಂದವರ ಮನೆಗೆ ಕನ್ನ ಹಾಕುವ ದುಸ್ಸಾಹಸಕ್ಕೆಬಂದಿದ್ದು ಅತ್ಯಂತ ಖಂಡನೀಯವಾಗಿದೆ ಎಂದು ಹೇಳಿದರು.
ಬೀದರ್ ಜಿಲ್ಲೆಯಲ್ಲಿ ಸುಮಾರು 2,39,567 ಜಾಬ್ ಕಾರ್ಡ್ ಗಳಿಗೆ. ಇದರಲ್ಲಿ 1,40,363 ಜಾಬ್ ಕಾರ್ಡ್ ಗಳು ಕ್ರಿಯಾಶಿಲವಾಗಿವೆ. ಅವರ ಪಾರಿವಾರದವರಿಗೆ ಸೇರಿದರೆ 4,45,773 ಜನರಿಗೆ ಇದರಿಂದಾಗಿ ಲಾಭವಾಗುತ್ತಿದೆ. ಜಿಲ್ಲೆಯ 2 ಕೋಟಿ 93 ಲಕ್ಷ ಕೂಲಿಕಾರ್ಮಿಕರ ಹಣ ಇನ್ನು ಪಾವತಿ ಮಾಡಬೇಕಿದೆ. ಕೇಂದ್ರದಲ್ಲಿ ಬಿಜೆಪಿ ಸರಕಾರ ಬಂದಾಗಿನಿಂದ ಇದನ್ನು ದುರ್ಬಲಗೊಳಿಸುವ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಮನರೇಗಾ ಯೋಜನೆ ಅಡಿಯಲ್ಲಿ ಸುಮಾರು 200 ರಿಂದ 226 ಕಾಮಗಾರಿಗಳು ಪಡೆಯುವುದಕ್ಕೆ ಅವಕಾಶವಿತ್ತು. ಆದರೆ ಕೇಂದ್ರದ ಬಿಜೆಪಿ ಸರ್ಕಾರದ ಧೋರಣೆ ಈ ಎಲ್ಲ ಕಾಮಗಾರಿಗಳಿಗೆ ತಡೆಯುವ ಕೆಲಸ ಮಾಡಿ ಬರೀ ಬಂಡವಾಳಶಾಹಿ, ಉದ್ಯೋಗಪತಿಗಳಿಗೆ ಹಣ ಹೋಗಬೇಕು ಎನ್ನುವುದಾಗಿದೆ.
ನಮ್ಮ ಜಿಲ್ಲೆಯಲ್ಲಿ ಶೇ. 42 ರಷ್ಟು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿದ್ದಾರೆ. ಶೇ. 24 ರಷ್ಟು ಪರಿಶಿಷ್ಟ ಜಾತಿಯ ಕೂಲಿ ಕಾರ್ಮಿಕರು, ಶೇ. 18 ರಷ್ಟು ಪರಿಶಿಷ್ಟ ಪಂಗಡದ ಕೂಲಿ ಕಾರ್ಮಿಕರು, ಶೇ. 56 ರಷ್ಟು ಮಹಿಳೆಯರು ಇದ್ದಾರೆ. ಇವರೆಲ್ಲ ಬಡವರಾಗಿದ್ದು, ಇವರ ಹೊಟ್ಟೆ ಮೇಲೆ ಕಲ್ಲು ಹಾಕುವ ಕೆಲಸ ಕೇಂದ್ರ ಸರಕಾರ ಮಾಡುತ್ತಿದೆ ಎಂದು ಆಕ್ರೋಶ ಹೊರಹಾಕಿದರು.
ಭಾರತದ ಪ್ರತಿ ಗ್ರಾಮ ಪಂಚಾಯತ್ ನವರು ಮನರೇಗಾದ ಲಾಭ ಪಡೆಯಬಹುದಾಗಿತ್ತು. ಆದರೆ ಇವಾಗ ಕೇಂದ್ರ ಸರಕಾರದಿಂದ ಅಧಿಸೂಚಿಸಲ್ಪಟ್ಟ ಗ್ರಾಮಗಳಲ್ಲಿನ ಕಾರ್ಮಿಕರು ಮಾತ್ರ ಈ ಉದ್ಯೋಗದ ಲಾಭ ಪಡೆಯುತ್ತಾರೆ. ಜಿ ಎಸ್ ಟಿ ಸಂಪೂರ್ಣ ಕೇಂದ್ರ ಸರಕಾರದ ಅಧೀನದಲ್ಲಿದೆ. ತೆರಿಗೆ ಕಟ್ಟುವುದರಲ್ಲಿ ಕರ್ನಾಟಕ ರಾಜ್ಯ ಎರಡನೇ ಸ್ಥಾನದಲ್ಲಿದೆ. ಕೇಂದ್ರ ಸರಕಾರ ಕರ್ನಾಟಕ ರಾಜ್ಯಕ್ಕೆ ಸಮರ್ಪಕವಾಗಿ ನೀಡುವ ಹಣ ನೀಡಲಿಲ್ಲ. ಹೀಗಾಗಿ ಕೇಂದ್ರದ ಬಿಜೆಪಿ ಸರಕಾರ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ಸರಕಾರಗಳಿಗೆ ದುರ್ಬಲ ಮಾಡಿ, ಸರ್ವಾಧಿಕಾರಿ ಧೋರಣೆ, ಹಿಟ್ಲರ್ ಶಾಹಿ ಧೋರಣೆ ಅನುಸರಿಸುತ್ತಿದೆ. ಇದರಿಂದ ಒಕ್ಕೂಟ ವ್ಯವಸ್ಥೆ, ದೇಶದ ಅಖಂಡತೆಗೆ ಧಕ್ಕೆಯಾಗುತ್ತದೆ ಎಂದು ಅವರು ಕಿಡಿ ಕಾರಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ರಾಜಶೇಖರ್ ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ್ ಪಾಟೀಲ್, ಭೀಮರಾವ್ ಪಾಟೀಲ್, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಬಸವರಾಜ್ ಜಾಬಶೆಟ್ಟಿ, ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಅಮೃತರಾವ್ ಚಿಮಕೋಡ್, ಸಂಜಯ್ ಜಾಗೀರದಾರ್, ಜಾರ್ಜ್, ಬಾಬುರಾವ್ ತುಂಬಾ ಹಾಗೂ ರವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.







