ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ವಿನೋದ್ ಅಪ್ಪೆ ನೇಮಕ

ವಿನೋದ್ ಅಪ್ಪೆ
ಬೀದರ್: ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ) ಅಧ್ಯಕ್ಷರಾಗಿ ಕಾಂಗ್ರೆಸ್ ಮುಖಂಡ ವಿನೋದ್ ಅಪ್ಪೆ ಅವರನ್ನು ನಾಮನಿರ್ದೇಶನ ಮಾಡಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ರಾಜ್ಯಪಾಲರ ಆದೇಶಾನುಸಾರ ಸರ್ಕಾರದ ಅಧೀನ ಕಾರ್ಯದರ್ಶಿ ಲತಾ ಕೆ. ಅವರು ಈ ಕುರಿತು ಅಧಿಕೃತ ಅಧಿಸೂಚನೆ ಪ್ರಕಟಿಸಿದ್ದಾರೆ. ಈ ಹಿಂದೆ ಬುಡಾ ಅಧ್ಯಕ್ಷರಾಗಿದ್ದ ಜಾಬಶೆಟ್ಟಿ ಅವರ ಸ್ಥಾನಕ್ಕೆ ವಿನೋದ್ ಅಪ್ಪೆ ಅವರನ್ನು ನೇಮಕ ಮಾಡಲಾಗಿದೆ.
ವಿನೋದ್ ಅಪ್ಪೆ ಅವರು ಕಾಂಗ್ರೆಸ್ ಪಕ್ಷದಲ್ಲಿ ಹಲವು ವರ್ಷಗಳಿಂದ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಪಕ್ಷದ ಪರವಾಗಿ ವಿವಿಧ ಹೋರಾಟಗಳು ಮತ್ತು ಸಂಘಟನಾ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಾರೆ.
ಸಚಿವ ಈಶ್ವರ್ ಖಂಡ್ರೆ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ವಿನೋದ್ ಅಪ್ಪೆ ಅವರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದರು. ಬಳಿಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಅಬ್ದುಲ್ ಮನ್ನಾನ್ ಸೇಠ್ ಅವರನ್ನು ನೇಮಕ ಮಾಡಿದ ನಂತರ, ಇದೀಗ ವಿನೋದ್ ಅಪ್ಪೆ ಅವರಿಗೆ ಬುಡಾ ಅಧ್ಯಕ್ಷರ ಜವಾಬ್ದಾರಿ ನೀಡಲಾಗಿದೆ.




