ವ್ಯಸನಕ್ಕೆ ಬಲಿಯಾಗದೆ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕು : ಸಚಿವ ಈಶ್ವರ್ ಖಂಡ್ರೆ
ಭಾಲ್ಕಿಯಲ್ಲಿ 14.75 ಕೋಟಿ ರೂ. ವೆಚ್ಚದ ಕ್ರೀಡಾಂಗಣದ ಶಂಕುಸ್ಥಾಪನೆ

ಬೀದರ್ : ಯಾವುದೇ ವ್ಯಸನಗಳಿಗೆ ಬಲಿಯಾಗದೆ, ನಿಯಮಿತ ವ್ಯಾಯಾಮ ಹಾಗೂ ಕ್ರೀಡಾ ಚಟುವಟಿಕೆಯಲ್ಲಿ ಭಾಗಿಯಾಗಿ ಸದೃಢರಾಗಿ ಆರೋಗ್ಯವಂತ ಸಮಾಜ ನಿರ್ಮಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಯುವಜನರಿಗೆ ಕರೆ ನೀಡಿದರು.
ಇಂದು ಭಾಲ್ಕಿಯಲ್ಲಿ ಸುಮಾರು 14.75 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಅತ್ಯಾಧುನಿಕ ರಾಷ್ಟ್ರಮಟ್ಟದ ಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕ್ರೀಡೆ ನೋಡುಗರಿಗೆ ಮನರಂಜನೆ ನೀಡಿದರೆ, ಆಡುವವರಿಗೆ ಆರೋಗ್ಯ ನೀಡುತ್ತದೆ. ದೇಹ ಸದೃಢವಾಗುತ್ತದೆ. ಬುದ್ಧಿ ಮತ್ತು ಮನಸ್ಸು ಎರಡನ್ನೂ ಸಮತೋಲನದಲ್ಲಿಡುತ್ತದೆ. ಕ್ರೀಡೆಯಲ್ಲಿ ಗೆಲ್ಲಲು ಯೋಜನೆ (ಗೇಮ್ ಪ್ಲಾನ್) ಮಾಡಲಾಗುತ್ತದೆ. ಆಗ ಮೆದುಳು ಕೆಲಸ ಮಾಡುತ್ತದೆ. ಗೆಲ್ಲುವ ಛಲದಿಂದ ಆಡುತ್ತಾರೆ. ಆಗ ದೇಹ ಕೆಲಸ ಮಾಡುತ್ತದೆ. ಹೀಗಾಗಿ ಬುದ್ಧಿ ಮತ್ತು ದೇಹ ಎರಡೂ ಬೆಳೆಯಲು ಕ್ರೀಡೆಗಳು ಸಹಕಾರಿಯಾಗಿವೆ ಎಂದರು.
ಗ್ರಾಮೀಣ ಯುವಜನರ ಸುಪ್ತ ಪ್ರತಿಭೆಯನ್ನು ಗುರುತಿಸಿ, ಅವರನ್ನು ಉತ್ತಮ ಕ್ರೀಡಾಪಟುಗಳಾಗಿ ರೂಪಿಸಬೇಕಾದರೆ ಅವರಿಗೆ ಅಭ್ಯಾಸ ಮಾಡಲು ಸೂಕ್ತ ಅನುಕೂಲತೆ ಬೇಕು. ಅದನ್ನು ಈ ಕ್ರೀಡಾಂಗಣ ಒದಗಿಸಲಿದೆ ಎಂದು ಹೇಳಿದರು.
ಕಾರ್ಯಕ್ರಮದ ಕೊನೆಯಲ್ಲಿ ಯುವಜನತೆಗೆ ಆರೋಗ್ಯಪೂರ್ಣ ದೇಹ ಕಾಪಾಡಿಕೊಳ್ಳಲು, ದುಶ್ಚಟಗಳಿಗೆ ಬಲಿಯಾಗಲ್ಲ, ದೇಶಕ್ಕೆ ಕೈಲಾದಷ್ಟು ಕೊಡುಗೆ ನೀಡುತ್ತೇನೆ, ಹಸಿರೇ ಉಸಿರು, ಆರೋಗ್ಯವಂತ ಯುವಕರಿಂದ ಆರೋಗ್ಯಪೂರ್ಣ ಸಮಾಜದ ನಿರ್ಮಾಣ ಸಾಧ್ಯ ಎಂಬ ಸಂದೇಶವನ್ನು ಜಗತ್ತಿಗೆ ಸಾರುತ್ತೇನೆ ಎಂಬ ಪ್ರತಿಜ್ಞಾವಿಧಿ ಬೋಧಿಸಲಾಯಿತು.







