ಒಂದು ತಿಂಗಳಲ್ಲಿ ಇಂದಿರಾ ಕಿಟ್ ಪ್ರಾರಂಭ ಮಾಡುತ್ತೇವೆ : ಸಚಿವ ಕೆ.ಹೆಚ್ ಮುನಿಯಪ್ಪ

ಹುಮನಾಬಾದ್ : ಜನರಿಗೆ ಪೌಷ್ಠಿಕ ಆಹಾರ ತಲುಪಿಸುವ ನಿಟ್ಟಿನಲ್ಲಿ ಇಂದಿರಾ ಕಿಟ್ ಶೀಘ್ರದಲ್ಲಿಯೇ ಪ್ರಾರಂಭ ಮಾಡುತ್ತಿದ್ದೇವೆ ಎಂದು ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಅವರು ಹೇಳಿದರು.
ರವಿವಾರ ಬೆಳಿಗ್ಗೆ ಹುಮನಾಬಾದ್ ನ ಮಾಜಿ ಸಚಿವ ರಾಜಶೇಖರ್ ಪಾಟೀಲ್ ಅವರ ಮನೆಗೆ ಭೇಟಿ ನೀಡಿ ಸನ್ಮಾನ ಸ್ವೀಕರಿಸಿ ಸುದ್ಧಿಗಾರರೊಂದಿಗೆ ಮಾತನಾಡಿದ ಕೆ.ಹೆಚ್ ಮುನಿಯಪ್ಪ, 10 ಕೆ.ಜಿ ಅಕ್ಕಿ ನೀಡುವ ಮೂಲಕ ನಾವು ನುಡಿದಂತೆ ನಡೆದಿದ್ದೇವೆ. ಆದರೆ ಅಕ್ಕಿ ಸದುಪಯೋಗ ಆಗುತ್ತಿಲ್ಲ ಎಂಬ ಯೋಚನೆ ಮಾಡಿ ಇವಾಗ ಇಂದಿರಾ ಕಿಟ್ ಮೂಲಕ ಬೇಳೆ, ಎಣ್ಣೆ, ಉಪ್ಪು, ಸಕ್ಕರೆ ಕೊಡುವ ನಿರ್ಣಯ ಕ್ಯಾಬಿನೆಟ್ ನಲ್ಲಿ ಆಗಿದೆ. ಬಹುತೇಕ ಇದು ಒಂದು ತಿಂಗಳಲ್ಲಿ ಮನೆ ಮನೆಗೆ ಸೇರುವ ಕಾರ್ಯವಾಗಲಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಅವರು, ಮುಖ್ಯಮಂತ್ರಿ ತೀರ್ಮಾನ ಹೈಕಮಾಂಡ್ ನಲ್ಲಿದೆ. ಅದಕ್ಕೆ ನಾವು ಪ್ರತಿಕ್ರಿಯಿಸುವುದು ಸೂಕ್ತವಲ್ಲ. ಹೈಕಮಾಂಡ್ ತೀರ್ಮಾನವೇ ಅಂತಿಮ ತೀರ್ಮಾನವಾಗಿರುತ್ತದೆ. ಮುಖ್ಯಮಂತ್ರಿಯವರು ಒಳ್ಳೆಯ ಕಾರ್ಯ ಮಾಡುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ರಾಜಶೇಖರ್ ಪಾಟೀಲ್, ಮಾಜಿ ಸಚಿವ ಹೆಚ್.ಆಂಜನೇಯ, ವಿಧಾನ ಪರಿಷತ್ ಸದಸ್ಯರಾದ ಭೀಮರಾವ್ ಪಾಟೀಲ್, ಡಾ. ಚಂದ್ರಶೇಖರ್ ಪಾಟೀಲ್ ಹಾಗೂ ಮಾಜಿ ಸಂಸದ ಬಿ.ಎಲ್ ಚಂದ್ರಪ್ಪ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು, ಹುಮನಾಬಾದ್ ಕ್ಷೇತ್ರದ ಕಾರ್ಯಕರ್ತರು ಉಪಸ್ಥಿತರಿದ್ದರು.







