ಯೋಗವು ದೇಹ, ಮನಸ್ಸು, ಆತ್ಮದ ಸಮತೋಲನ ಸಾಧಿಸುವ ಶ್ರೇಷ್ಠ ಪಥವಾಗಿದೆ: ಸಚಿವ ಈಶ್ವರ್ ಖಂಡ್ರೆ

ಬೀದರ್ : ಯೋಗವು ಕೇವಲ ಶಾರೀರಿಕ ವ್ಯಾಯಾಮವಲ್ಲ. ಅದು ದೇಹ, ಮನಸ್ಸು ಮತ್ತು ಆತ್ಮದ ಸಮತೋಲನವನ್ನು ಸಾಧಿಸುವ ಶ್ರೇಷ್ಠ ಪಥವಾಗಿದೆ ಎಂದು ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ತಿಳಿಸಿದರು.
ಇಂದು ಬೀದರ ಕೋಟೆ ಆವರಣದಲ್ಲಿ ಆಯುಷ್ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜನೆಗೊಂಡ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ಭಾರತೀಯ ಸಂಸ್ಕೃತಿ ಕೊಟ್ಟ ಅತ್ಯಮೂಲ್ಯ ಕೊಡುಗೆಗಳಲ್ಲಿ ಯೋಗವೂ ಒಂದಾಗಿದೆ. ಪ್ರತಿದಿನವೂ ಯೋಗ ಅಭ್ಯಾಸ ಮಾಡುವ ಮೂಲಕ ಆರೋಗ್ಯಕರ ಬದುಕು ರೂಪಿಸೋಣ. ಉತ್ತಮ ಆರೋಗ್ಯವಂತ ಜೀವನಕ್ಕೆ ಯೋಗ ಬಹಳ ಮುಖ್ಯವಾಗಿದೆ ಎಂದರು.
ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಯೋಗವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಥಾನಮಾನ ಪಡೆದುಕೊಂಡಿದೆ. ಯೋಗದಿಂದ ರೋಗನಿರೋಧಕ ಶಕ್ತಿ ಹೆಚ್ಚಿಸಿ. ಶಾಂತಿ, ನೆಮ್ಮದಿ ಜೀವನಕ್ಕೆ ಅನುಕೂಲಕರವಾಗಿದೆ. ಕಲುಷಿತ ಆಹಾರ, ನೀರು, ಗಾಳಿಯಿಂದ ಆರೋಗ್ಯದ ಮೇಲೆ ಅನೇಕ ಪರಿಣಾಮ ಬೀರುತ್ತದೆ ಆದ್ದರಿಂದ ನಮ್ಮ ಆರೋಗ್ಯಕ್ಕೆ ನಾವು ಮೊದಲ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಶಾಸಕ ಶೈಲೇಂದ್ರ ಬೆಲ್ದಾಳೆ ಅವರು ಮಾತನಾಡಿ, ಯೋಗವು ನಮ್ಮ ದೇಶದ ಸಂಸ್ಕೃತಿ , ಆಚಾರ, ವಿಚಾರಗಳನ್ನು ಒಳಗೊಂಡ ಉತ್ತಮ ಆಚರಣೆಯಾಗಿದೆ. ಇಂದು ವಿಶ್ವದಾದ್ಯಂತ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಮಾತನಾಡಿ, ಯೋಗವು ಆರೋಗ್ಯದ ಜೊತೆಗೆ ಕೆಲಸ ಮಾಡುವ ಇಚ್ಛಾಶಕ್ತಿ ಹೆಚ್ಚಿಸಿ ವ್ಯಕ್ತಿಯನ್ನು ಕ್ರಿಯಾಶೀಲರನ್ನಾಗಿ ಮಾಡುತ್ತದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಗಿರೀಶ್ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಅಪರ ಜಿಲ್ಲಾಧಿಕಾರಿ ಶಿವಕುಮಾರ್ ಶೀಲವಂತ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ್ ಪೂಜಾರಿ ಹಾಗೂ ಜಿಲ್ಲಾ ಆಯುಷ್ ಅಧಿಕಾರಿ ಖತೀಜಾ ಬೇಗಂ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಶಾಲೆಯ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಭಾಗವಹಿಸಿ ಯೋಗ ಮಾಡಿದರು.







