ವಿಕಸಿತ ಭಾರತ ನಿರ್ಮಾಣದಲ್ಲಿ ಯುವಕರ ಪಾತ್ರ ಮಹತ್ವದ್ದು : ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
ಬೀದರ್ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವ : 20 ವಿದ್ಯಾರ್ಥಿಗಳಿಗೆ ಚಿನ್ನ, ಇಬ್ಬರಿಗೆ ಗೌರವ ಡಾಕ್ಟರೇಟ್ ಪ್ರದಾನ

ಬೀದರ್: ಬೀದರ್ ವಿಶ್ವವಿದ್ಯಾಲಯದಿಂದ ಪದವಿ ಪಡೆದು ಹೊರಬರುತ್ತಿರುವ ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳುವುದರ ಜೊತೆಗೆ ದೇಶವನ್ನು ವಿಕಸಿತ ರಾಷ್ಟ್ರವನ್ನಾಗಿ ಮಾಡುವ ಸಂಕಲ್ಪದೊಂದಿಗೆ ಮುಂದುವರಿಯಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕರೆ ನೀಡಿದರು.
ನಗರದ ಹೊರವಲಯದ ನಂದಿನಗರದಲ್ಲಿರುವ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ನಡೆದ ಬೀದರ್ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೀದರ್ ವಿಶ್ವವಿದ್ಯಾಲಯದ ಮೊದಲ ಘಟಿಕೋತ್ಸವ ಇತಿಹಾಸದಲ್ಲಿ ದಾಖಲೆಯಾಗುವ ಕಾರ್ಯಕ್ರಮವಾಗಿದೆ. ವಿದ್ಯಾರ್ಥಿಗಳು ಪದವಿ ಪಡೆಯುವ ಮೂಲಕ ಜೀವನದ ಹೊಸ ಅಧ್ಯಾಯ ಆರಂಭಿಸುತ್ತಿದ್ದಾರೆ. ಜೀವನದಲ್ಲಿ ಸುಖ-ದುಃಖ ಎರಡೂ ಬರುತ್ತವೆ. ಸುಖದ ವೇಳೆ ವಿನಯದಿಂದ ಇರಬೇಕು, ಕಷ್ಟದ ವೇಳೆ ಧೈರ್ಯದಿಂದ ಮುನ್ನಡೆಯಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಎಐ ಯುಗದಲ್ಲಿ ಜಗತ್ತು ವೇಗವಾಗಿ ಬದಲಾಗುತ್ತಿದ್ದು, ಉತ್ತಮ ಶಿಕ್ಷಣ ಮತ್ತು ಕೌಶಲ್ಯದ ಮೂಲಕ ಸಾಧನೆ ಮಾಡಬೇಕು. ಗಣಿತ, ಖಗೋಳ, ವೈದ್ಯಕೀಯ, ಭಾಷೆ, ಸಾಹಿತ್ಯ ಹಾಗೂ ಕೃಷಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತವು ವಿಶ್ವಕ್ಕೆ ಅಮೂಲ್ಯ ಕೊಡುಗೆ ನೀಡಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತ–2047 ಸಂಕಲ್ಪ ಸಾಕಾರಗೊಳಿಸುವಲ್ಲಿ ಯುವಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ತಮ್ಮ ಜ್ಞಾನ ಮತ್ತು ಪರಿಶ್ರಮದಿಂದ ರಾಷ್ಟ್ರ ನಿರ್ಮಾಣದಲ್ಲಿ ಪಾಲ್ಗೊಳ್ಳಬೇಕು ಎಂದು ರಾಜ್ಯಪಾಲರು ಹೇಳಿದರು.
ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಮಾತನಾಡಿ, ಪದವಿ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗ, ಸಂಶೋಧನೆ, ಉದ್ಯೋಗ ಹಾಗೂ ಸಮಾಜ ನಿರ್ಮಾಣದಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ 20 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಲಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಇಬ್ಬರು ಗಣ್ಯರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಬೀದರ್ ವಿಶ್ವವಿದ್ಯಾಲಯದ ಕುಲಪತಿ ಬಿ.ಎಸ್.ಬಿರಾದಾರ್ ಅವರು ವಿಶ್ವವಿದ್ಯಾಲಯದ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕುಲಸಚಿವ ಪರಮೇಶ್ವರ್ ನಾಯಕ್, ಸಿಂಡಿಕೆಟ್ ಸದಸ್ಯರಾದ ನಾಗಭೂಷಣ ಕಮಠಾಣೆ, ಶಾಂತಲಿಂಗ್, ಶಿವನಾಥ್ ಪಾಟೀಲ್, ವಿಠಲದಾಸ್ ಪ್ಯಾಗೆ, ವೈಷ್ಣವಿ ಪಾಟೀಲ್, ಸಚಿನ್ ಮಲ್ಕಾಪುರೆ, ಅಬ್ದುಲ್ ಸತ್ತಾರ್ ಸೇರಿದಂತೆ ಇತರರು ಇದ್ದರು.
ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳ ವಿವರ :
ಎಂ.ಎ ಅರ್ಥಶಾಸ್ತ್ರದಲ್ಲಿ ಪಲ್ಲವಿ, ಎಂ.ಎ ಇಂಗ್ಲೀಷ್‌ನಲ್ಲಿ ನಿಕಿತಾ, ಎಂ.ಎ ಇತಿಹಾಸದಲ್ಲಿ ಭಾಗ್ಯಶ್ರೀ, ಎಂ.ಎ ಕನ್ನಡದಲ್ಲಿ ಜಯಶ್ರೀ, ಎಂ.ಎ ರಾಜ್ಯಶಾಸ್ತ್ರದಲ್ಲಿ ಅನುಪಮಾ, ಎಂ.ಎ ಸಮಾಜಶಾಸ್ತ್ರದಲ್ಲಿ ನಂದಿನಿ, ಎಂ.ಎ ಉರ್ದುವಿನಲ್ಲಿ ಇರ್ಫಾನಾ ಬೇಗ್ಂ, ಎಂ.ಎ ಮಹಿಳಾ ಅಧ್ಯಯನದಲ್ಲಿ ರವಿಕುಮಾರ್, ಎಂ.ಕಾಂ ನಲ್ಲಿ ಮೊಹಮ್ಮದ್ ಮುಜಮ್ಮಿಲ್, ಎಂ.ಎಡ್ ನಲ್ಲಿ ಸ್ವಾತಿ, ಎಂ.ಎಸ್.ಡಬ್ಲ್ಯು ನಲ್ಲಿ ಆಶಾ, ಎಂ.ಎಸ್ಸಿ ಬಯೋಟೆಕ್ನಾಲಜಿಯಲ್ಲಿ ನಿದಾ ಹಬೀಬಾ, ಎಂ.ಎಸ್ಸಿ ಸಸ್ಯಶಾಸ್ತ್ರದಲ್ಲಿ ಸೋನಿಯಾ, ಎಂ.ಎಸ್ಸಿ ರಸಾಯನಶಾಸ್ತ್ರದಲ್ಲಿ ಸೈಯದಾ ಮಾರಿಯಾ ಫಾತಿಮಾ, ಎಂ.ಎಸ್ಸಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಹುರಿಯತ್ ಫಾತಿಮಾ, ಎಂ.ಎಸ್ಸಿ ಗಣಿತದಲ್ಲಿ ಮೆಹರೀನ್ ಅಮೀನ್, ಎಂ.ಎಸ್ಸಿ ಆರ್ಗಾನಿಕ್ ಕೆಮಿಸ್ಟ್ರಿಯಲ್ಲಿ ಮನೀಷಾ, ಎಂ.ಎಸ್ಸಿ ಭೌತಶಾಸ್ತ್ರದಲ್ಲಿ ದಿವ್ಯಾ, ಎಂ.ಎಸ್ಸಿ ಪ್ರಾಣಿಶಾಸ್ತ್ರದಲ್ಲಿ ಸೈಯದಾ ಮೆಹಮೂದಾ ಬಾನು ಹಾಗೂ ಬಿ.ಎಡ್ ಪದವಿಯಲ್ಲಿ ರೇಣುಕಾ ಅವರು ಚಿನ್ನದ ಪದಕಗಳಿಸಿದ್ದಾರೆ.
ಇಬ್ಬರಿಗೆ ಗೌರವ ಡಾಕ್ಟರೇಟ್ :
ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಎಸ್.ಎಂ ಜನವಾಡಕರ್ ಹಾಗೂ ಸಾಮಾಜಿಕ ಸೇವೆಯಲ್ಲಿ ಸಾಧನೆ ಮಾಡಿದ ಶಿವಯ್ಯ ಸ್ವಾಮಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಯಿತು.






