ಬಿಗ್ಬಾಸ್-13 ಖ್ಯಾತಿಯ ಶೆಫಾಲಿ ಜರಿವಾಲಾ ಹೃದಯಾಘಾತದಿಂದ ನಿಧನ

PC: x.com/GossipsTv
ಮುಂಬೈ: ಬಿಗ್ಬಾಸ್ 13ನೇ ಸೀಸನ್ ಮೂಲಕ ಜನಪ್ರಿಯತೆ ಗಳಿಸಿದ ನಟಿ ಶೆಫಾಲಿ ಜರಿವಾಲಾ (42) ಹೃದಯಾಘಾತದಿಂದ ನಿಧನರಾಗಿದ್ದಾರೆ. ಬೆಲ್ಲೆವ್ಯೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಶೆಫಾಲಿ ಸಾವನ್ನು ದೃಢಪಡಿಸಿದೆ. ಜೂನ್ 27ರಂದು ರಾತ್ರಿ ನಟಿ ಶೆಫಾಲಿ ಹೃದಯಾಘಾತಕ್ಕೆ ಒಳಗಾಗಿದ್ದರು.
ಹೃದಯಾಘಾತ ಸಂಭವಿಸಿದ ತಕ್ಷಣ ಪತಿ ಹಾಗೂ ಇತರ ಮೂವರು ಶೆಫಾಲಿಯವರನ್ನು ಬೆಲ್ಲೆವ್ಯೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿದರು. ತಕ್ಷಣವೇ ವೈದ್ಯಕೀಯ ಚಿಕಿತ್ಸೆ ನೀಡಿದರೂ ಆಕೆ ಮೃತಪಟ್ಟಿರುವುದನ್ನು ಆಸ್ಪತ್ರೆ ಘೋಷಿಸಿತು. ಆ ಬಳಿಕ ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಆಸ್ಪತ್ರೆ ಸ್ಪಷ್ಟಪಡಿಸಿದೆ.
"ಅಂಧೇರಿಯ ಸ್ಟಾರ್ ಬಜಾರ್ ಎದುರಿನ ಬೆಲ್ಲೆವ್ಯೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಶೆಫಾಲಿ ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ಕರೆ ತರುವ ಮುನ್ನವೇ ಅವರು ಕೊನೆಯುಸಿರೆಳೆದಿದ್ದರು" ಎಂದು ಹಿರಿಯ ಪತ್ರಕರ್ತ ವೀಕೆ ಲಲ್ವಾನಿ ಜಾಲತಾಣದಲ್ಲಿ ವಿವರ ನೀಡಿದ್ದಾರೆ.
ಟಿವಿ ಸೆಲೆಬ್ರಿಟಿಗಳಾದ ಅಲಿ ಗೋನಿ, ರಾಜೀವ್ ಆದಿತ್ಯ ಮತ್ತು ಇತರರು, ಶೆಫಾನಿ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ. ನಟಿ ಮೋನಿಕಾ ಅವರು ಕೂಡಾ ಸಾವಿನ ಬಗ್ಗೆ ಅಚ್ಚರಿ ಮತ್ತು ಆಘಾತ ವ್ಯಕ್ತಪಡಿಸಿದ್ದಾರೆ.
ಈ ದೀಢೀರ್ ಸಾವು ಮನೋರಂಜನಾ ಉದ್ಯಮದಲ್ಲಿ ಮತ್ತು ಅವರ ಅಭಿಮಾನಿ ಬಳಗದಲ್ಲಿ ಆಘಾತಕ್ಕೆ ಕಾರಣವಾಗಿದೆ.







