400 ಕೋಟಿ ರೂ.ಗಳ ಸೇಲ್ ಉಕ್ಕು ಹಗರಣದಲ್ಲಿ ಬಿಜೆಪಿಗೆ ದೇಣಿಗೆ ನೀಡಿದ್ದ ಕಂಪೆನಿ ಹೆಸರು!
ಲೋಕ್ ಪಾಲ್ ಆದೇಶದಂತೆ ಸಿಬಿಐ ಕ್ರಮ

ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: ಚುನಾವಣಾ ಬಾಂಡ್ ಗಳ ಮೂಲಕ ಬಿಜೆಪಿಗೆ 30 ಕೋಟಿ ರೂ.ದೇಣಿಗೆ ನೀಡಿದ್ದ ಆಪ್ಕೋ ಇನ್ ಫ್ರಾಟೆಕ್ ಪ್ರೈ.ಲಿ. ಭಾರತೀಯ ಉಕ್ಕು ಪ್ರಾಧಿಕಾರ(ಸೇಲ್)ವನ್ನು ಒಳಗೊಂಡ ಪ್ರಮುಖ ಹಗರಣದ ಕೇಂದ್ರಬಿಂದುವಾಗಿದೆ. ಸುದ್ದಿ ಜಾಲತಾಣ ‘ದಿ ವೈರ್’ನಡೆಸಿದ ವಿವರವಾದ ತನಿಖೆಯ ಪ್ರಕಾರ ಲೋಕ್ ಪಾಲ್ ಮತ್ತು ಕೇಂದ್ರ ಜಾಗ್ರತ ಆಯೋಗ(ಸಿವಿಸಿ)ದ ವರದಿಗಳ ಆಧಾರದಲ್ಲಿ ಸಿಬಿಐ ಅಕ್ಟೋಬರ್ 2024ರಲ್ಲಿ ದಾಖಲಿಸಿರುವ ಎಫ್ ಐ ಆರ್ ನಲ್ಲಿ ಆಪ್ಕೋ ಕಂಪೆನಿಯನ್ನು ಹೆಸರಿಸಲಾಗಿದೆ. ಹಗರಣವು 400 ಕೋಟಿ ರೂ.ಗೂ ಅಧಿಕ ಮೌಲ್ಯದ ಸಬ್ಸಿಡಿ ಉಕ್ಕಿನ ಅಕ್ರಮ ಖರೀದಿ ಮತ್ತು ಮರುಮಾರಾಟವನ್ನು ಒಳಗೊಂಡಿದೆ.
ಅ.2020ರಲ್ಲಿ ಸೇಲ್ ನೊಂದಿಗೆ ಖರೀದಿ ಒಪ್ಪಂದಕ್ಕೆ ಸಹಿ ಹಾಕುವ ಕೇವಲ ಒಂದು ವಾರದ ಮೊದಲು ಅಸ್ತಿತ್ವಕ್ಕೆ ಬಂದಿದ್ದ ಛಾಯಾ ಕಂಪೆನಿ ವೆಂಕಟೇಶ ಇನ್ ಫ್ರಾ ಪ್ರಾಜೆಕ್ಟ್ಸ್ ಪ್ರೈ.ಲಿ.(ವಿಐಪಿಪಿಎಲ್)ಗೆ ಆಪ್ಕೋ ಸುಳ್ಳು ಅನುಭವ ಪ್ರಮಾಣಪತ್ರವನ್ನು ನೀಡಿತ್ತು ಎಂದು ಸಿಬಿಐ ಎಫ್ ಐ ಆರ್ ನಲ್ಲಿ ಆರೋಪಿಸಿದೆ. ಪ್ರಮಾಣಪತ್ರದಲ್ಲಿ ವಿಐಪಿಪಿಎಲ್ 11 ಬೃಹತ್ ಮೂಲಸೌಕರ್ಯ ಯೋಜನೆಗಳಲ್ಲಿ ಆಪ್ಕೋದಡಿ ಉಪಗುತ್ತಿಗೆದಾರನಾಗಿ ಕಾರ್ಯ ನಿರ್ವಹಿಸಿತ್ತು ಎಂದು ಹೇಳಲಾಗಿದ್ದು, ಇದು ಕಟ್ಟುಕಥೆ ಎನ್ನುವುದು ನಂತರ ಬೆಳಕಿಗೆ ಬಂದಿತ್ತು.
ವಿಐಪಿಪಿಎಲ್ ಈ ಸುಳ್ಳು ಪ್ರಮಾಣಪತ್ರವನ್ನು ಬಳಸಿಕೊಂಡು ಸೇಲ್ ನಿಂದ ಹೆಚ್ಚಿನ ಸಬ್ಸಿಡಿ ದರಗಳಲ್ಲಿ ಉಕ್ಕನ್ನು ಖರೀದಿಸಿತ್ತು ಮತ್ತು ಲಾಭಕ್ಕಾಗಿ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿತ್ತು ಎಂದು ಆರೋಪಿಸಲಾಗಿದೆ.
ಪಟ್ಟಿ ಮಾಡಲಾದ ಯೋಜನೆಗಳಲ್ಲಿ ವಿಐಪಿಪಿಎಲ್ ನ ಯಾವುದೇ ಪಾತ್ರವಿರಲಿಲ್ಲ ಎಂದು ನಂತರ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಸಿವಿಸಿಗೆ ದೃಢಪಡಿಸಿತ್ತು. ಇದರ ಹೊರತಾಗಿಯೂ ಸೇಲ್ ಅಧಿಕಾರಿಗಳು ದಾಖಲೆಗಳ ಅಧಿಕೃತತೆಯನ್ನು ಪರಿಶೀಲಿಸದೆ ಮಾರಾಟ ಒಪ್ಪಂದವನ್ನು ಅನುಮೋದಿಸಿದ್ದರು. ಇದರಿಂದಾಗಿ ಕಾನೂನುಬದ್ಧ ಮೂಲಸೌಕರ್ಯ ಯೋಜನೆಗಳಿಗೆ ಮೀಸಲಾಗಿದ್ದ 11 ಲ.ಟನ್.ಗೂ ಅಧಿಕ ಉಕ್ಕನ್ನು ಖರೀದಿಸಲು ವಿಐಪಿಪಿಎಲ್ ಗೆ ಸಾಧ್ಯವಾಗಿತ್ತು.
ಕುತೂಹಲಕಾರಿಯಾಗಿ ಆಪ್ಕೋ 2020-23ರ ನಡುವೆ 30 ಕೋಟಿ ರೂ.ಮೌಲ್ಯದ ಚುನಾವಣಾ ಬಾಂಡ್ ಗಳನ್ನು ಖರೀದಿಸಿತ್ತು ಮತ್ತು ಇವೆಲ್ಲವನ್ನೂ ಬಿಜೆಪಿ ನಗದೀಕರಿಸಿಕೊಂಡಿತ್ತು. ಇದೇ ಅವಧಿಯಲ್ಲಿ ಸರಕಾರಿ ಸಂಸ್ಥೆಗಳು ಹಲವಾರು ಮೂಲಸೌಕರ್ಯ ಗುತ್ತಿಗೆಗಳನ್ನು ಆಪ್ಕೋಗೆ ನೀಡಿದ್ದವು.
ಈ ಪ್ರಕರಣವನ್ನು ಬಯಲಿಗೆಳೆದಿದ್ದ ಸೇಲ್ ನ ಮಾಜಿ ಮಾರಾಟ ಅಧಿಕಾರಿ ರಾಜೀವ್ ಭಾಟಿಯಾ ಅವರು ಆಂತರಿಕ ಎಚ್ಚರಿಕೆಗಳನ್ನು ನೀಡಿದ್ದರು ಮತ್ತು ಅಂತಿಮವಾಗಿ ಪ್ರಧಾನಿ ಕಚೇರಿಯನ್ನು ಸಂಪರ್ಕಿಸಿದ್ದರು. 2022ರಲ್ಲಿ ಅವರನ್ನು ಅಮಾನತು ಮಾಡಲಾಗಿತ್ತು ಮತ್ತು ಬಳಿಕ ಅವಧಿಗೆ ಮುನ್ನವೇ ನಿವೃತ್ತಿಗೊಳಿಸಲಾಗಿತ್ತು. ಹಗರಣಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿದ್ದ ಇತರ ಅಧಿಕಾರಿಗಳನ್ನು 2024ರ ಸಾರ್ವತ್ರಿಕ ಚುನಾವಣೆಗಳ ನಂತರ ಮರುನೇಮಕ ಮಾಡಿಕೊಳ್ಳಲಾಗಿತ್ತು.
ಸೇಲ್ ಯಾವುದೇ ಹಣಕಾಸು ನಷ್ಟವುಂಟಾಗಿದ್ದನ್ನು ನಿರಾಕರಿಸಿದೆ ಮತ್ತು ವಿಐಪಿಪಿಎಲ್ ಕಾನೂನುಬದ್ಧ ಡೀಲರ್ ಆಗಿತ್ತು ಎಂದು ಸಮರ್ಥಿಸಿಕೊಂಡಿದೆ. ಆದಾಗ್ಯೂ ಸಿವಿಸಿ ಮತ್ತು ಲೋಕ್ ಪಾಲ್ ವರದಿಗಳು ಈ ಹೇಳಿಕೆಗೆ ತೀವ್ರ ವ್ಯತಿರಿಕ್ತವಾಗಿದ್ದು, ನಕಲಿ ದಾಖಲೆಗಳು ಮತ್ತು ಆಂತರಿಕ ಸಹಕಾರವನ್ನು ಒಳಗೊಂಡ ಸಂಘಟಿತ ವಂಚನೆಯನ್ನು ಬೆಟ್ಟು ಮಾಡಿವೆ.
ವಂಚನೆಯ ಮೂಲಕ ಸೇಲ್ ಜೊತೆ ಇದೇ ರೀತಿಯ ಒಪ್ಪಂದಗಳಲ್ಲಿ ಭಾಗಿಯಾಗಿವೆ ಎನ್ನಲಾದ ಇತರ ಕಂಪೆನಿಗಳ ಬಗ್ಗೆಯೂ ಸಿಬಿಐ ಹೆಚ್ಚಿನ ತನಿಖೆಯನ್ನು ನಡೆಸುತ್ತಿದೆ.
ಸೌಜನ್ಯ: thewire.in







