ಹೈಕಮಾಂಡ್ ನ ಜಾತಿ ಲೆಕ್ಕಾಚಾರ ನೋಡಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿ ಕಣಕ್ಕೆ: ಶಾಸಕ ಯತ್ನಾಳ್
ಅಧ್ಯಕ್ಷರ ಆಯ್ಕೆ ಹಿನ್ನಲೆ ದೆಹಲಿಗೆ ಪ್ರಯಾಣ

ಕಲಬುರಗಿ: ಬಿಜೆಪಿಯ ಹೈಕಮಾಂಡ್‍ನ ಜಾತಿ ಲೆಕ್ಕಾಚಾರ ನೋಡಿಕೊಂಡು ಅದೇ ಜಾತಿಯವರನ್ನು ನಾವು ರಾಜ್ಯಾಧ್ಯಕ್ಷರ ಸ್ಥಾನದ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸುತ್ತೇವೆ ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ಸದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಬಣದಿಂದ ಯಾರು ಸ್ಪರ್ಧೆ ಮಾಡುತ್ತಾರೆ ಎಂಬುದರ ಕುರಿತು ಚರ್ಚಿಸಿ ನಿರ್ಣಯ ತೆಗೆದುಕೊಳ್ಳುತ್ತೇವೆ. ಹೈಕಮಾಂಡ್ ನ ಜಾತಿ ಲೆಕ್ಕಾಚಾರ ನೋಡಿಕೊಂಡು ಅದೇ ಜಾತಿಯ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದು ಖಂಡಿತ ಎಂದು ಹೇಳಿದರು.
ನಾನು ಸಹ ದೆಹಲಿಗೆ ಹೋಗುತ್ತಿದ್ದೇನೆ. ಒಬ್ಬರಲ್ಲಾ ನಮ್ಮ ಪಕ್ಷದ ಹಲವಾರು ರಾಷ್ಟ್ರೀಯ ಮುಖಂಡರನ್ನು ಭೇಟಿ ಮಾಡುತ್ತೇವೆ. ರಾಜ್ಯಾಧ್ಯಕ್ಷರ ಆಯ್ಕೆ ಸಂಬಂಧ ನಾವು ವರಿಷ್ಠರನ್ನು ಭೇಟಿ ಮಾಡುತ್ತೇವೆ. ದೆಹಲಿ ಚುನಾವಣೆಯ ಬಹಿರಂಗ ಪ್ರಚಾರ ಮುಗಿದು ಹೋಗಿದೆ. ರಾಜಕೀಯ ಮುಖಂಡರು ಮಕ್ಕಳ ಜೊತೆ ಜಾಲಿ ಮೂಡ್‌ನಲ್ಲಿದ್ದಾರೆ. ಪಕ್ಷದ ವರಿಷ್ಠರು ಭೇಟಿಗಾಗಿ ಸಮಯ ಕೊಟ್ಟಿದ್ದಾರೆ. ನಾವು ಭೇಟಿ ಮಾಡುತ್ತೇವೆ ಎಂದರು.
ರಾಜ್ಯಾಧ್ಯಕ್ಷನಾಗಿ ಮುಂದುವರೆಯುತ್ತೇನೆ ಎನ್ನುವ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಚುನಾವಣೆ ನಡೆದು ಅವರೇ ರಾಜ್ಯಾಧ್ಯಕ್ಷ ಮತ್ತೊಮ್ಮೆ ಆಗಲಿ. ಬೇಡ ಅಂದವರಾರು.? ಅಲ್ಲಿವರೆಗೂ ನನಗೆ ಓಟ್ ಹಾಕಿ ನನಗೆ ಓಟ್ ಹಾಕಿ ಅಂತ ಕೈ ಮುಗಿದು ಅವರು ಓಡಾಡಬೇಕಲ್ವಾ.? ಕೆಲವರಿಗೆ ಕೈ ಮುಗಿಯೋದಾದರು ನಾವು ಕಲಿಸದಂಗೆ ಆಗುತ್ತೆ ಎಂದು ಕುಟುಕಿದರು.
ನಾನು, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಸಮಕಾಲೀನರು. ಒಂದು ವೇಳೆ ವಿಜಯೇಂದ್ರರನ್ನು ಮತ್ತೆ ರಾಜ್ಯಾಧ್ಯಕ್ಷ ಮಾಡಿದರೆ, ನಮ್ಮ ನಿರ್ಣಯ ತಿಳಿಸುತ್ತೇವೆ. ನಮ್ಮ ಹೋರಾಟವಂತೂ ಮುಂದುವರೆಯುತ್ತದೆ ಎಂದು ಸ್ಪಷ್ಟಪಡಿಸಿದರು.
ಮಾಜಿ ಸಚಿವ ಶ್ರೀರಾಮುಲು ರಾಜ್ಯಾಧ್ಯಕ್ಷ ಆದರೆ ನಮ್ಮದೇನೂ ತಕರಾರಿಲ್ಲ. ಅವರೂ ನಮ್ಮವರೆ. ಅವರಾದರೆ, ನಮ್ಮ ಬೆಂಬಲ ಇರುತ್ತೆ. ರಾಜ್ಯದ ಎಲ್ಲಾ ಸಂಸದರು ನಮ್ಮ ಜೊತೆಗಿದ್ದಾರೆ. ವಿಜಯೇಂದ್ರ ಒಬ್ಬರನ್ನು ಬಿಟ್ಟು, ಯತ್ನಾಳ ರಾಜ್ಯಾಧ್ಯಕ್ಷ ಆಗಬೇಕು ಎಂಬ ಕೂಗಿದೆ. ಏನಾಗುತ್ತೋ ನೋಡೋಣ ಎಂದರು.
ನಮ್ಮಿಂದ ಬಿಜೆಪಿ ಪಕ್ಷಕ್ಕೆ ಯಾವುದೇ ಡ್ಯಾಮೇಜ್ ಆಗಿಲ್ಲ. ಯತ್ನಾಳರಿಂದಲೇ ನಮ್ಮ ಪಾರ್ಟಿಯ ಕಾರ್ಯಕರ್ತರು ಜೀವಂತವಾಗಿದ್ದಾರೆ. ಹಾಗೆ ನೋಡಿದರೆ, ನಮ್ಮ ಪಕ್ಷಕ್ಕೆ ನಾವೇ ಆಶಾಕಿರಣ.
- ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ
ದೇಶ- ವಿದೇಶಗಳಲ್ಲಿ ಆಸ್ತಿ ಮಾಡಿಲ್ಲ
ನಮಗೆ ಬೇರೆಯವರಂತೆ ದೇಶ ವಿದೇಶಗಳಲ್ಲಿ ಆಸ್ತಿ ಮಾಡಿಡುವ ಆಸಕ್ತಿ ಇಲ್ಲ. ವಿಜಯೇಂದ್ರ ದುಬೈನಲ್ಲಿ, ಸಿಂಗಾಪೂರನಲ್ಲಿ ಆಸ್ತಿ ಮಾಡಿಟ್ಟು ಏನು ಮಾಡುತ್ತಾನೆ. ಜನರಿಗೆ ದಾನ ಕೊಟ್ಟರೆ, ಒಳ್ಳೆಯದಾಗುತ್ತೆ. ನಮಗೆ ಒಳ್ಳಯದಾಗಲಿ ಎಂದು ವಿಜಯೇಂದ್ರ ಅಂತಾನಾ.? ಯಾರಿಗಾದರು, ಒಳ್ಳೆಯದಾಗಲಿ ಅನ್ನೋದು ಅವರಿಂದ ಹೇಳಲು ಸಾಧ್ಯವೇ ಇಲ್ಲ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಖಾರವಾಗಿ ಹೇಳಿದರು.