ಶತ್ರು ದೇಶಗಳ ಹಡಗುಗಳನ್ನು ತಡೆಯುವುದು ನಮ್ಮ ಕಾನೂನಾತ್ಮಕ ಹಕ್ಕು: ಇರಾನ್ ಪ್ರತಿಪಾದನೆ

PC: x.com/GlobalReportNow
ಟೆಹರಾನ್: ಶತ್ರುದೇಶಗಳ ಹಡಗು ಹಾರ್ಮುಝ್ ಜಲಸಂಧಿಯನ್ನು ಪ್ರವೇಶಿಸದಂತೆ ತಡೆಯುವ ಕಾನೂನುಬದ್ಧ ಹಕ್ಕು ಇರಾನ್ ಗೆ ಇದೆ ಎಂದು ಅಲ್ಲಿನ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಅಬ್ಬಾಸ್ ಅರಘ್ಚಿ ಪ್ರತಿಪಾದಿಸಿದ್ದಾರೆ.
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರಿಗೆ ಈ ಅಂಶವನ್ನು ಸ್ಪಷ್ಟಪಡಿಸಿರುವ ಸಚಿವರು, ಶತ್ರುದೇಶಗಳು ಮತ್ತು ಅವರ ಮಿತ್ರದೇಶಗಳಿಗೆ ಸಂಬಂಧಿಸಿದ ಹಡಗುಗಳು ಹಾರ್ಮುಝ್ ಜಲಸಂಧಿಯ ಮೂಲಕ ಹಾದುಹೋಗುವುದನ್ನು ಕಾನೂನು ಹಕ್ಕುಗಳ ಚೌಕಟ್ಟಿನಲ್ಲೇ ತಡೆಯುವ ಬಗ್ಗೆ ಚಿಂತನೆ ನಡೆಸಿದೆ ಎಂದು ಹೇಳಿದ್ದಾರೆ.
ಏತನ್ಮಧ್ಯೆ ಹಾರ್ಮುಝ್ ಜಲಸಂಧಿ ತೆರವುಗೊಳಿಸದೇ ಇದ್ದಲ್ಲಿ ಇರಾನ್ ನ ಇಂಧನ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದ ಎಚ್ಚರಿಕೆಗೆ ಇರಾನ್ ಸೊಪ್ಪು ಹಾಕದ ಹಿನ್ನೆಲೆಯಲ್ಲಿ ಮತ್ತು ಅಮೆರಿಕ ನೀಡಿದ್ದ 15 ಅಂಶಗಳ ಕದನ ವಿರಾಮ ಪ್ರಸ್ತಾವವನ್ನು ಇರಾನ್ ತಿರಸ್ಕರಿಸಿದ್ದರಿಂದ ಯುದ್ಧ ಮುಗಿಯುವ ಬಗ್ಗೆ ಅನಿಶ್ಚಿತತೆ ಕಾಡುತ್ತಿದೆ. ಇದರಿಂದ ಅಮೆರಿಕದ ಷೇರು ಮಾರುಕಟ್ಟೆ ಭಾರಿ ನಷ್ಟ ಅನುಭವಿಸಿದೆ. ಷೇರು ದರಗಳು ಭಾರೀ ಕುಸಿದಿದ್ದು, ತೈಲ ಬೆಲೆ ಏರಿಕೆ ನಡುವೆಯೇ ಅಮೆರಿಕದ ಅಧ್ಯಕ್ಷರು ಹೇಳಿಕೆ ನೀಡಿ, ಸಂಧಾನ ಮಾತುಕತೆ ಬಗ್ಗೆ ಇರಾನ್ ಗಂಭೀರವಾಗಿ ಪರಿಗಣಿಸುವಂತೆ ಆಗ್ರಹಿಸಿದ್ದಾರೆ.
ಫೆಬ್ರುವರಿ 28ರಿಂದ ಆರಂಭವಾಗಿರುವ ಯುದ್ಧದಲ್ಲಿ ಈಗಾಗಲೇ 1900 ಮಂದಿ ಮೃತಪಟ್ಟಿದ್ದು, ಇವರಲ್ಲಿ 1000 ಮಂದಿ ಲೆಬನಾನ್ ಪ್ರಜೆಗಳು, 22 ಮಂದಿ ಇಸ್ರೇಲಿಗಳು, 13 ಮಂದಿ ಅಮೆರಿಕದ ಸೈನಿಕರು ಹಾಗೂ ಗಲ್ಫ್ ದೇಶಗಳ ನಾಗರಿಕರು ಸೇರಿದ್ದಾರೆ. ಇರಾನ್ ಹಾಗೂ ಲೆಬನಾನ್ ನಲ್ಲಿ ಲಕ್ಷಾಂತರ ಮಂದಿ ಸ್ಥಳಾಂತರಗೊಂಡಿದ್ದಾರೆ.
ಹಾರ್ಮುಝ್ನಲ್ಲಿ `ಟೋಲ್' ಸಂಗ್ರಹಿಸಲು ಪ್ರಸ್ತಾಪ
ಈ ಮಧ್ಯೆ, ಹಾರ್ಮುಝ್ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳಿಗೆ ಶುಲ್ಕ ಜಾರಿಗೊಳಿಸುವ ಮಸೂದೆಯನ್ನು ಇರಾನ್ ಸಂಸತ್ತು ಸಿದ್ಧಪಡಿಸುತ್ತಿರುವುದಾಗಿ ಫಾರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಟೋಲ್ ಸಂಗ್ರಹಿಸುವ ಪ್ರಸ್ತಾವನೆಯು ಇರಾನ್ನ ಸಾರ್ವಭೌಮತ್ವವನ್ನು ಅಧಿಕೃತವಾಗಿ ಗುರುತಿಸುವ ಮತ್ತು ಟೋಲ್ಗಳ ಮೂಲಕ ಆದಾಯವನ್ನು ಗಳಿಸುವ ಗುರಿಯನ್ನು ಹೊಂದಿದೆ. ಈ ಮಸೂದೆಗೆ ಮುಂದಿನ ವಾರ ಅನುಮೋದನೆ ದೊರಕುವ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ.







