ಬ್ಲಡ್ ಗ್ರೂಪ್ ಸಂಬಂಧಿ ಹೆರಿಗೆ ಸಮಸ್ಯೆ: ‘ಇಂಟ್ರಾಯುಟ್ರೈನ್ ಟ್ರಾನ್ಸ್ ಫ್ಯೂಶನ್’ನಡಿ ತಾಯಿ-ಶಿಶುವಿನ ರಕ್ಷಣೆ
ಕೆಎಂಸಿ ಆಸ್ಪತ್ರೆಯ ಡಾ.ಸಮೀನ ಹಾರೂನ್ ನೇತೃತ್ವದ ವೈದ್ಯರ ತಂಡದ ಸಾಧನೆ

ಮಂಗಳೂರು, ಮಾ.28: ಪುಣೆ ಮೂಲದ ಮಹಿಳೆಯೊಬ್ಬರ ಕ್ಲಿಷ್ಟಕರ ಹೆರಿಗೆಯನ್ನು ‘ಇಂಟ್ರಾಯುಟ್ರೈನ್ ಟ್ರಾನ್ಸ್ ಫ್ಯೂಶನ್’' ವ್ಯವಸ್ಥೆಯ ಮೂಲಕ ನಿರ್ವಹಿಸಿ ತಾಯಿ ಹಾಗೂ ಶಿಶುವನ್ನು ರಕ್ಷಿಸುವ ಕಾರ್ಯವನ್ನು ಮಂಗಳೂರಿನ ಕೆಎಂಸಿಯ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗದ ಪ್ರಮುಖ ವೈದ್ಯೆ ಡಾ.ಸಮೀನ ಹಾರೂನ್ ನೇತೃತ್ವದ ವೈದ್ಯರ ತಂಡ ನಿರ್ವಹಿಸಿದೆ.
ಪುಣೆ ಮೂಲದ ಗರ್ಭಿಣಿಯೊಬ್ಬರು ಬ್ಲಡ್ ಗ್ರೂಪ್ ಸಂಬಂಧಿಸಿ ಸಮಸ್ಯೆಯಿಂದಾಗಿ ಹೆರಿಗೆಯಲ್ಲಿ ಕಾಣಿಸಿಕೊಳ್ಳುವ ಅಪಾಯಕಾರಿ ಪರಿಸ್ಥಿತಿಯಲ್ಲಿ 3ನೆ ಹೆರಿಗೆಗಾಗಿ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರ ಸಮಯೋಚಿತ ಚಿಕಿತ್ಸೆ ಹಾಗೂ ನಿರ್ವಹಣೆಯ ಮೂಲಕ ಸುರಕ್ಷಿತವಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಆಗಿದ್ದ ಸಮಸ್ಯೆ ಏನು?
ತಾಯಿ ಹಾಗೂ ತಂದೆಯ ಬ್ಲಡ್ ಗ್ರೂಪ್ ಗಳು ಪಾಸಿಟಿವ್ ಹಾಗೂ ನೆಗೆಟಿವ್ (ಪರಸ್ಪರ ವಿರುದ್ಧ) ಆಗಿದ್ದರೆ, ಸಾಮಾನ್ಯವಾಗಿ 2ನೇ ಹೆರಿಗೆಯಿಂದ ತಾಯಿ ಹಾಗೂ ಶಿಶುವಿನಲ್ಲಿ ರಕ್ತಕ್ಕೆ ಸಂಬಂಧಿಸಿದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಎರಡನೇ ಮತ್ತು ಬಳಿಕದ ಹೆರಿಗೆಯನ್ನು ಅವಧಿಪೂರ್ಣವಾಗಿ ಮಾಡಿಸಬೇಕಾಗಿರುವುದರಿಂದ, ಬಳಿಕ ಮಗುವಿನಲ್ಲಿ ತೊಂದರೆ ಕಾಣಿಸಿಕೊಂಡು ಬದುಕಿಸುವುದು ಕಷ್ಟಸಾಧ್ಯವಾಗುತ್ತದೆ. ಪಾಸಿಟಿವ್ ಹಾಗೂ ನೆಗೆಟಿವ್ ಬ್ಲಡ್ ಗ್ರೂಪ್ ಗಳಿಂದ ಗರ್ಭಾವಸ್ಥೆಯಲ್ಲಿ ತಾಯಿಯ ರಕ್ತದಲ್ಲಿ ಆ್ಯಂಟಿಬಾಡೀಸ್ ಸೃಷ್ಟಿಯಾಗುತ್ತದೆ. ಇದು ಗರ್ಭಿಣಿಯ ಜತೆಗೆ ಗರ್ಭದಲ್ಲಿರುವ ಶಿಶುವಿನ ಮೇಲೂ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಡಾ.ಸಮೀನ ಹಾರೂನ್.
‘ನಮ್ಮ ಆಸ್ಪತ್ರೆಗೆ ದಾಖಲಾಗಿದ್ದ 35 ವರ್ಷದ ಆ ಮಹಿಳೆಯ ಪ್ರಥಮ ಹೆರಿಗೆ ನಾಲ್ಕು ವರ್ಷಗಳ ಹಿಂದೆ ನಡೆದಿದ್ದು, ಸುಸೂತ್ರವಾಗಿತ್ತು. ಎರಡನೇ ಹೆರಿಗೆಯ ಸಂದರ್ಭ ತೊಂದರೆ ಕಾಣಿಸಿಕೊಂಡಿದ್ದ ಕಾರಣ ಕೊನೆಯ ಸಂದರ್ಭದಲ್ಲಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಶಿಶುವಿನ ಜನನದ ಬಳಿಕ ಮೆದುಳಿನಲ್ಲಿ ರಕ್ತಸ್ರಾವ ಆಗಿ ಒಂದು ವರ್ಷದ ಅವಧಿಯಲ್ಲಿ ಶಿಶು ಮೃತಪಟ್ಟಿತ್ತು. ಇದಾಗಿ ಮತ್ತೆ ಗರ್ಭ ಧರಿಸಿದ್ದ ಆ ಮಹಿಳೆಯ ಹೆರಿಗೆ ಮತ್ತಷ್ಟು ಜಟಿಲವಾಗಿತ್ತು. 2ನೇ ಗರ್ಭಧಾರಣೆಯ ಸಂದರ್ಭ ಐದು ತಿಂಗಳಲ್ಲಿ ಆ ಮಹಿಳೆಯಲ್ಲಿ ತೊಂದರೆ ಕಾಣಿಸಿಕೊಂಡಿದ್ದರೆ, ಈ ಬಾರಿ ಗರ್ಭಿಣಿಯಾದ ಅವರನ್ನು ತೀವ್ರ ನಿಗಾದೊಂದಿಗೆ ತಪಾಸಣೆ ನಡೆಸಲಾಯಿತು. ಗರ್ಭಾವಸ್ಥೆ 30ನೇ ವಾರಕ್ಕೆ ತಲುಪಿದಾಗ ಐಸಿಟಿ (ಇನ್ ಡೈರೆಕ್ಟ್ ಕೂಂಬ್ಸ್ ಟೆಸ್ಟ್) ಪಾಸಿಟಿವ್ ಬಂದಿತ್ತು. ಸ್ಕ್ಯಾನಿಂಗ್ ಮಾಡಿದಾಗ ರಕ್ತದಲ್ಲಿ ಕಬ್ಬಿಣಾಂಶ ಸಂಪೂರ್ಣ ಇಳಿಕೆಯಾಗಿರವುದು ಪತ್ತೆಯಾಗಿತ್ತು. ಗರ್ಭಾವಸ್ಢೆಯಲ್ಲಿರುವ ಶಿಶುವಿಗೆ ನೇರವಾಗಿ ನಾವು ಚಿಕಿತ್ಸೆ ನೀಡಿ ಉಳಿಸಬೇಕಾಗಿತ್ತು. ಅವಧಿಪೂರ್ಣಗೊಳ್ಳುವ ಮೊದಲು ಹೆರಿಗೆ ಮಾಡಿಸಿದರೆ ಜಾಂಡೀಸ್ ಕಾಣಿಸಿಕೊಳ್ಳುವ, ಮೆದುಳಿನಲ್ಲಿ ರಕ್ತಸ್ರಾವಾಗುವ ಕಾರಣ ಶಿಶು ಉಳಿಯುವ ಸಾಧ್ಯತೆ ಕಡಿಮೆ. ಹಾಗಾಗಿ ಮತ್ತೆ ಮೂರು ವಾರ ನಾವು ಕಾಯಬೇಕಾಗಿತ್ತು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಗರ್ಭಾಶಯದ (ಇಂಟ್ರಾಯುಟ್ರೈನ್ ಟ್ರಾನ್ಸ್ ಫ್ಯೂಶನ್’) ಒಳಗೆ ಹಿಮೋಗ್ಲೋಬಿನ್ ಯುಕ್ತ ರಕ್ತವನ್ನು ಒದಗಿಸುವ ಸವಾಲಿನ ಪ್ರಕ್ರಿಯೆಯನ್ನು ನಿರ್ವಹಿಸಲಾಯಿತು. ಮತ್ತೆ ಎರಡು ವಾರದ ಬಳಿಕ ಶಿಶುವಿನಲ್ಲಿ ಹಿಮೋಗ್ಲೋಬಿನ್ ಅಂಶ ಕಡಿಮೆಯಾದ ಕಾರಣ 35ನೇ ವಾರದಲ್ಲಿ ಹೆರಿಗೆ ಮಾಡಿಸುವ ಮೂಲಕ, ಅವಧಿಪೂರ್ವದಲ್ಲಿ ಶಿಶುವಿನ ಜನನದಿಂದ ಆಗಬಹುದಾಗಿದ್ದ ಸಮಸ್ಯೆಯನ್ನು ನಿವಾರಿಸಲಾಯಿತು. ಸದ್ಯ ತಾಯಿ ಮಗು ಆರೋಗ್ಯವಂತರಾಗಿದ್ದು, ಎರಡು ದಿನಗಳ ಹಿಂದೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ’ ಎಂದು ಡಾ.ಸಮೀನ ಹಾರೂನ್ ವಿವರ ನೀಡಿದ್ದಾರೆ.
‘ಆ ಮಹಿಳೆಯ 2ನೇ ಮಗು ಅದಾಗಲೇ ಇಂತಹ ಸಮಸ್ಯೆಯಿಂದ ಸಾವಿಗೀಡಾಗಿದ್ದ ಕಾರಣ, ಈ ಹೆರಿಗೆ ಕ್ಲಿಷ್ಟಕರವಾಗಿತ್ತು. ಹಾಗಿದ್ದರೂ ನಮ್ಮ ತಂಡದ ಇತರ ವೈದ್ಯರಾದ ಡಾ.ಶಮೀ ಶಾಸ್ತ್ರಿ, ಡಾ.ಪುಂಡಲೀಕ ಬಾಳಿಗಾ ಹಾಗೂ ಡಾ.ಮರಿಯಾ ಬೊಕೆಲೋ ಅವರ ಸಹಕಾರದಲ್ಲಿ ಆಸ್ಪತ್ರೆಯಲ್ಲಿ ಲಭ್ಯವಿರುವ ಆಧುನಿಕ ಸೌಲಭ್ಯಗಳನ್ನು ಬಳಸಿಕೊಂಡು ಹೆರಿಗೆಯನ್ನು ಸುರಕ್ಷಿತವಾಗಿ ನಡೆಸಿದ ಖುಷಿ ಇದೆ’ ಎಂದು ಡಾ.ಸಮೀನ ‘ವಾರ್ತಾಭಾರತಿ’ ಜತೆ ಸಂತಸ ಹಂಚಿಕೊಂಡಿದ್ದಾರೆ.







