ಶ್ವೇತ ಭವನದಲ್ಲಿ ರಾಷ್ಟ್ರೀಯ ಭದ್ರತಾ ಮಂಡಳಿ ಸಭೆ ನಡೆಸಲಿರುವ ಡೊನಾಲ್ಡ್ ಟ್ರಂಪ್
ಇರಾನ್ ಮೇಲಿನ ದಾಳಿಗೆ ಅಮೆರಿಕ ಸಿದ್ಧತೆ?

Photo credit : The Guardian
ವಾಷಿಂಗ್ಟನ್: ಇರಾನ್ ಮೇಲೆ ದಾಳಿ ಮಾಡುವ ಬಗ್ಗೆ ತಮ್ಮ ಆಯ್ಕೆಗಳನ್ನು ಪರಿಗಣಿಸಲು ಟ್ರಂಪ್ ತಮ್ಮ ರಾಷ್ಟ್ರೀಯ ಭದ್ರತಾ ಮಂಡಳಿಯೊಂದಿಗೆ ಸಭೆ ನಡೆಸಲು ಕೆಲವೇ ಕ್ಷಣಗಳಲ್ಲಿ ಶ್ವೇತ ಭವನಕ್ಕೆ ಆಗಮಿಸಲಿದ್ದಾರೆ ಎಂದು Aljazeera ವರದಿ ಮಾಡಿದೆ.
ಅಮೆರಿಕದ ಸೆನೆಟ್ ಕಾಂಗ್ರೆಸ್ ಅನುಮೋದನೆಯಿಲ್ಲದೆ ಇರಾನ್ ಮೇಲೆ ದಾಳಿಗಳನ್ನು ಮಾಡಲು ಟ್ರಂಪ್ ಅವರು ಯೋಜಿಸಿದ್ದಾರೆ ಎನ್ನಲಾಗಿದೆ.
ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಈಗಾಗಲೇ 9ನೇ ದಿನಕ್ಕೆ ಕಾಲಿಟ್ಟಿದೆ.
ಒಂದು ವೇಳೆ ಅಮೆರಿಕದ ಮೇಲೆ ದಾಳಿ ನಡೆಯಲಿದೆ ಎಂಬ ಕಾರಣ ಮುಂದಿಟ್ಟುಕೊಂಡರೆ, ಭದ್ರತಾ ಕ್ರಮವಾಗಿ ಇರಾನ್ ಮೇಲೆ ದಾಳಿ ಮಾಡಲು ಟ್ರಂಪ್ಗೆ ಮುಕ್ತ ಅಧಿಕಾರವಿದೆ. ಆಗ ಅವರು ಸೆನೆಟ್ ಕಾಂಗ್ರೆಸ್ ಅನುಮತಿ ಪಡೆಯಬೇಕಾದ ಅವಶ್ಯಕತೆ ಇರುವುದಿಲ್ಲ. ಟ್ರಂಪ್ ವಿವೇಚನಾತ್ಮಕವಾಗಿ ಇದೇ ಅಧಿಕಾರವನ್ನು ಬಳಸಿಕೊಂಡು ಇರಾನ್ ಮೇಲೆ ವಾಯುದಾಳಿಗೆ ಆದೇಶಿಸಬಹುದು ಎಂದು ಅಂದಾಜಿಸಲಾಗಿದೆ.
ಸಂಘರ್ಷವು ನಿರಂತರವಾಗಿದ್ದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೆನೆಟ್ ಕಾಂಗ್ರೆಸ್ಗೆ ಹೋಗಿ ಅಧಿಕೃತ ಯುದ್ಧ ಘೋಷಣೆಯ ರೂಪದಲ್ಲಿ ಸೆನೆಟರುಗಳ ಬೆಂಬಲವನ್ನು ಕೇಳಬೇಕಾಗುತ್ತದೆ.
ಆದರೆ ಯಾವುದೇ ರೀತಿಯ ಮಿಲಿಟರಿ ದಾಳಿಗಳಿಗೆ ಆದೇಶಿಸಿದಾಗಲೆಲ್ಲಾ ಸೆನೆಟ್ ಕಾಂಗ್ರೆಸ್ಗೆ ಹೋಗಬೇಕಾಗುವುದಿಲ್ಲ. ಇದೇ ಅವಕಾಶವನ್ನು ಟ್ರಂಪ್ ಬಳಸುವ ಸಾಧ್ಯತೆ ಹೆಚ್ಚಿದೆ ಎಂದು ರಾಜಕೀಯ ಶಾಸ್ತ್ರಜ್ಞರು ವಿಶ್ಲೇಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ವೇತ ಭವನದಲ್ಲಿ ನಡೆಯಲಿರುವ ರಾಷ್ಟ್ರೀಯ ಭದ್ರತಾ ಮಂಡಳಿಯ ಸಭೆಯು ಮಹತ್ವವನ್ನು ಪಡೆದುಕೊಂಡಿದೆ.







