ಚಾಂಪಿಯನ್ಸ್ ಟ್ರೋಫಿ | ಆಸೀಸ್ ಸೋಲಿಸಿ ಫೈನಲ್ ಗೆ ಲಗ್ಗೆಯಿಟ್ಟ ಭಾರತ
ಕೊಹ್ಲಿ ಅರ್ಧ ಶತಕ, ಸ್ಪೋಟಕ ಆಟವಾಡಿದ ಹಾರ್ದಿಕ್ ಪಾಂಡ್ಯ

Photo :x/@ICC
ದುಬೈ, ಮಾ.4: ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅರ್ಧ ಶತಕದ(84 ರನ್, 98 ಎಸೆತ, 5 ಬೌಂಡರಿ) ಕೊಡುಗೆ ಹಾಗೂ ಮುಹಮ್ಮದ್ ಶಮಿ(3-48) ನೇತೃತ್ವದ ಬೌಲರ್ಗಳ ಶಿಸ್ತುಬದ್ಧ ಬೌಲಿಂಗ್ ದಾಳಿಯ ನೆರವಿನಿಂದ ಟೀಮ್ ಇಂಡಿಯಾ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯ ಕ್ರಿಕೆಟ್ ತಂಡವನ್ನು 4 ವಿಕೆಟ್ಗಳಿಂದ ಮಣಿಸಿದೆ. ಈ ಗೆಲುವಿನ ಮೂಲಕ ಭಾರತ ತಂಡವು ಸತತ 3ನೇ ಬಾರಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಫೈನಲ್ ತಲುಪಿದ ಮೊದಲ ತಂಡ ಎನಿಸಿಕೊಂಡಿದೆ.
ದುಬೈ ಇಂಟರ್ನ್ಯಾಶನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ರವಿವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ರೋಹಿತ್ ಬಳಗವು ನ್ಯೂಝಿಲ್ಯಾಂಡ್ ಅಥವಾ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.
ರೋಚಕ ಗೆಲುವಿನ ಮೂಲಕ ಭಾರತ ತಂಡವು 2023ರ ಏಕದಿನ ವಿಶ್ವಕಪ್ ಫೈನಲ್ ಸೋಲಿಗೆ ತಕ್ಕ ಸೇಡು ತೀರಿಸಿಕೊಂಡಿದೆ.
ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯ ತಂಡವು 264 ರನ್ ಗಳಿಸಲಷ್ಟೇ ಶಕ್ತವಾಯಿತು. ಗೆಲ್ಲಲು 265 ರನ್ ಗುರಿ ಪಡೆದ ಭಾರತ ತಂಡ 48.1 ಓವರ್ಗಳಲ್ಲಿ 6 ವಿಕೆಟ್ಗಳ ನಷ್ಟಕ್ಕೆ 267 ರನ್ ಗಳಿಸಿತು. ಔಟಾಗದೆ 42 ರನ್ ಗಳಿಸಿದ ಕೆ.ಎಲ್.ರಾಹುಲ್ ಇನ್ನೂ 11 ಎಸೆತಗಳು ಬಾಕಿ ಇರುವಾಗಲೇ ತಂಡಕ್ಕೆ ಗೆಲುವು ತಂದುಕೊಟ್ಟರು.
ಭಾರತ ತಂಡವು 7.5 ಓವರ್ಗಳಲ್ಲಿ 43 ರನ್ಗೆ ಆರಂಭಿಕ ಆಟಗಾರರನ್ನು ಕಳೆದುಕೊಂಡಿತು. ಆಗ 3ನೇ ವಿಕೆಟ್ಗೆ 111 ಎಸೆತಗಳಲ್ಲಿ ನಿರ್ಣಾಯಕ 91 ರನ್ ಜೊತೆಯಾಟ ನಡೆಸಿದ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.
ಶ್ರೇಯಸ್ (45 ರನ್, 62 ಎಸೆತ, 3 ಬೌಂಡರಿ) ಔಟಾದ ನಂತರ ಕೆ.ಎಲ್.ರಾಹುಲ್ ಜೊತೆ ಕೈಜೋಡಿಸಿದ ಕೊಹ್ಲಿ 46 ಎಸೆತಗಳಲ್ಲಿ 47 ರನ್ ಸೇರಿಸಿದರು. ಕೊಹ್ಲಿ 43ನೇ ಓವರ್ನಲ್ಲಿ ಔಟಾದರು. ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ(28 ರನ್, 24 ಎಸೆತ, 1 ಬೌಂಡರಿ, 3 ಸಿಕ್ಸರ್) 6ನೇ ವಿಕೆಟ್ಗೆ 34 ರನ್ ಜೊತೆಯಾಟ ನಡೆಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಇದೇ ವೇಳೆ, ತನ್ನ 74ನೇ ಏಕದಿನ ಅರ್ಧಶತಕ ಗಳಿಸಿದ ಕೊಹ್ಲಿ ಅವರು ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ ಭಾರತದ ಪರ ಗರಿಷ್ಠ ರನ್ ಸ್ಕೋರರ್ ಎನಿಸಿಕೊಂಡರು. 2013ರಿಂದ 2017ರ ತನಕ 10 ಪಂದ್ಯಗಳಲ್ಲಿ 701 ರನ್ ಗಳಿಸಿದ್ದ ಶಿಖರ್ ಧವನ್ ದಾಖಲೆಯನ್ನು ಮುರಿದರು.
ಐಸಿಸಿ ಏಕದಿನ ಟೂರ್ನಿಗಳಲ್ಲಿ 53 ಇನಿಂಗ್ಸ್ಗಳಲ್ಲಿ ಗರಿಷ್ಠ 50 ಪ್ಲಸ್ ಸ್ಕೋರ್(24)ಗಳಿಸಿದ ಕೊಹ್ಲಿ ಅವರು ಸಚಿನ್ ತೆಂಡುಲ್ಕರ್(23 ಫಿಫ್ಟಿ ಪ್ಲಸ್ ಸ್ಕೋರ್, 58 ಇನಿಂಗ್ಸ್)ದಾಖಲೆ ಮುರಿದರು.
*ಆಸ್ಟ್ರೇಲಿಯ 264 ರನ್: ಇದಕ್ಕೂ ಮೊದಲು ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯ ತಂಡವು ನಾಯಕ ಸ್ಟೀವ್ ಸ್ಮಿತ್ ಹಾಗೂ ಅಲೆಕ್ಸ್ ಕ್ಯಾರಿ ಅವರ ಅರ್ಧಶತಕದ ಕೊಡುಗೆಯ ನೆರವಿನಿಂದ 264 ರನ್ ಗಳಿಸಿತು.
ಟಾವಿಸ್ ಹೆಡ್ ಜೊತೆ ಕೂಪರ್ರನ್ನು ಇನಿಂಗ್ಸ್ ಆರಂಭಿಸಲು ಕಳುಹಿಸಿ ಪ್ರಯೋಗಕ್ಕೆ ಮುಂದಾದ ಆಸ್ಟ್ರೇಲಿಯ ಕೈಸುಟ್ಟುಕೊಂಡಿತು. ಕೂಪರ್ 9 ಎಸೆತಗಳನ್ನು ಎದುರಿಸಿ ಮುಹಮ್ಮದ್ ಶಮಿ ಬೌಲಿಂಗ್ನಲ್ಲಿ ರಾಹುಲ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಆಸ್ಟ್ರೇಲಿಯ 3 ಓವರ್ಗಳಲ್ಲಿ 4 ರನ್ಗೆ 1 ವಿಕೆಟ್ ಕಳೆದುಕೊಂಡಿತು.
ಶಮಿ ಬೌಲಿಂಗ್ನಲ್ಲಿ ಹ್ಯಾಟ್ರಿಕ್ ಬೌಂಡರಿ ಗಳಿಸಿದ ಹೆಡ್ ಒತ್ತಡವನ್ನು ಕಡಿಮೆಗೊಳಿಸಿದರು. ವರುಣ್ ಚಕ್ರವರ್ತಿ ದಾಳಿಗಿಳಿಯುವ ತನಕ ಹೆಡ್ ಆರ್ಭಟ ಮುಂದುವರಿಯಿತು. ಆಸ್ಟ್ರೇಲಿಯ 7.2 ಓವರ್ಗಳಲ್ಲಿ 50 ರನ್ ತಲುಪಿತು.
ನ್ಯೂಝಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ 5 ವಿಕೆಟ್ ಗೊಂಚಲು ಪಡೆದಿದ್ದ ವರುಣ್ ಅವರು ಹೆಡ್(39 ರನ್, 33 ಎಸೆತ, 5 ಬೌಂಡರಿ, 2 ಸಿಕ್ಸರ್)ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದರು.
ಭಾರತದ ಸ್ಪಿನ್ನರ್ಗಳು ರನ್ ವೇಗಕ್ಕೆ ಕಡಿವಾಣ ಹಾಕಿದ್ದು, ಈ ಮಧ್ಯೆ ಲ್ಯಾಬುಶೇನ್ ಅವರು ಆಸ್ಟ್ರೇಲಿಯ ತಂಡ 19.5 ಓವರ್ಗಳಲ್ಲಿ 100 ರನ್ ಗಳಿಸಲು ನೆರವಾದರು.
ಲ್ಯಾಬುಶೇನ್(29 ರನ್, 36 ಎಸೆತ, 2 ಬೌಂಡರಿ, 1 ಸಿಕ್ಸರ್)ವಿಕೆಟನ್ನು ಪಡೆದ ಜಡೇಜ ಅವರು 56 ರನ್ ಜೊತೆಯಾಟವನ್ನು ಮುರಿದರು.
68 ಎಸೆತಗಳಲ್ಲಿ ಅರ್ಧಶತಕವನ್ನು ಪೂರೈಸಿದ ಸ್ಮಿತ್ ಅವರು ನಾಕೌಟ್ ಪಂದ್ಯಗಳಲ್ಲಿ ತನ್ನ ಶ್ರೇಷ್ಠ ಪ್ರದರ್ಶನ ಮುಂದುವರಿಸಿದರು.
ಜೋಶ್ ಇಂಗ್ಲಿಸ್(11 ರನ್)ವಿಕೆಟನ್ನು ಪಡೆದ ಜಡೇಜ ಆಸೀಸ್ಗೆ ಮತ್ತೊಂದು ಆಘಾತ ನೀಡಿದರು. ಅಲೆಕ್ಸ್ ಕ್ಯಾರಿ ಕ್ರೀಸ್ಗೆ ಇಳಿದ ತಕ್ಷಣವೇ ಕುಲದೀಪ್ ಯಾದವ್ ಹಾಗೂ ಹಾರ್ದಿಕ್ ಪಾಂಡ್ಯ ಬೌಲಿಂಗ್ನಲ್ಲಿ ಬೌಂಡರಿ ಸಿಡಿಸಿದರು.
ಸ್ಮಿತ್(73 ರನ್, 96 ಎಸೆತ, 4 ಬೌಂಡರಿ, 1 ಸಿಕ್ಸರ್)ವಿಕೆಟನ್ನು ಉರುಳಿಸಿದ ಶಮಿ ಅವರು 300ಕ್ಕೂ ಅಧಿಕ ರನ್ ಗಳಿಸುವ ಆಸ್ಟ್ರೇಲಿಯದ ಆಸೆಗೆ ತಣ್ಣೀರೆರಚಿದರು. ಮ್ಯಾಕ್ಸ್ವೆಲ್(7 ರನ್) ಸಿಕ್ಸರ್ ಸಿಡಿಸಿದ ಬೆನ್ನಿಗೇ ಅಕ್ಷರ್ ಪಟೇಲ್ಗೆ ಕ್ಲೀನ್ ಬೌಲ್ಡಾದರು.
6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದ ಕ್ಯಾರಿ 49 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ನೆರವಿನಿಂದ ತನ್ನ 11ನೇ ಅರ್ಧಶತಕವನ್ನು ಗಳಿಸಿದರು. ಬಾಲಂಗೋಚಿ ಬೆನ್ ಡ್ವರ್ಶುಯಿಸ್(19 ರನ್, 29 ಎಸೆತ) ಸ್ಪಿನ್ನರ್ಗಳ ಎದುರು ಆಕ್ರಮಣಕಾರಿ ಆಟ ಆಡಿದರು.
ಶ್ರೇಯಸ್ ಅಯ್ಯರ್ ಅವರ ನೇರ ಎಸೆತಕ್ಕೆ ಕ್ಯಾರಿ(61 ರನ್, 57 ಎಸೆತ, 8 ಬೌಂಡರಿ, 1 ಸಿಕ್ಸರ್)ರನೌಟಾದರು. ಆಗ ಆಸ್ಟ್ರೇಲಿಯ 47.1 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 249 ರನ್ ಗಳಿಸಿತು.
ನಾಥನ್ ಎಲ್ಲಿಸ್(10)ರನ್ನು ಪೆವಿಲಿಯನ್ಗೆ ಕಳುಹಿಸಿದ ಶಮಿ ತನ್ನ 3ನೇ ವಿಕೆಟನ್ನು ಪಡೆದರು. ಆಡಮ್ ಝಂಪಾ ವಿಕೆಟನ್ನು ಉರುಳಿಸಿದ ಹಾರ್ದಿಕ್ ಪಾಂಡ್ಯ ಆಸ್ಟ್ರೇಲಿಯ ತಂಡವನ್ನು 49.3 ಓವರ್ಗಳಲ್ಲಿ 264 ರನ್ಗೆ ಆಲೌಟ್ ಮಾಡಿದರು.
ಶಮಿ(10 ಓವರ್ಗಳಲ್ಲಿ 3/48)ಭಾರತದ ಪರ ಯಶಸ್ವಿ ಬೌಲರ್ ಎನಿಸಿಕೊಂಡರು. ವರುಣ್ ಚಕ್ರವರ್ತಿ ಹಾಗೂ ಜಡೇಜ ತಲಾ 2 ವಿಕೆಟ್ಗಳನ್ನು ಪಡೆದರೆ, ಹಾರ್ದಿಕ್ ಪಾಂಡ್ಯ ಹಾಗೂ ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಉರುಳಿಸಿದರು.