ಜಯದೇವ ಆಸ್ಪತ್ರೆ, ನಿತಿನ್ ಕಾಮತ್, ಅದಿತಿ ಅಶೋಕ್ ಗೆ ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿ

ಬೆಂಗಳೂರು, ಜೂ.26: 'ನಾಳೆ (ಜೂ.27) ನಾಡಪ್ರಭು ಕೆಂಪೇಗೌಡರ 514ನೇ ಜಯಂತಿ ಆಚರಣೆ ಮಾಡುತ್ತಿದ್ದೇವೆ. ಈ ವೇಳೆ ಮೂವರು ಸಾಧಕರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿ ನೀಡಲಿದ್ದೇವೆ' ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಈ ಕುರಿತು ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೆಂಪೇಗೌಡ ಜಯಂತಿ ಹಿನ್ನೆಲೆಯಲ್ಲಿ ಮೂವರು ಸಾಧಕರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ನೀಡುತ್ತಿದ್ದೇವೆ. ಈ ಸಂಬಂಧ ಬಿ.ಎಲ್. ಶಂಕರ್ ನೇತೃತ್ವದ ಸಮಿತಿ ನೇಮಕ ಮಾಡಲಾಗಿತ್ತು. ಈ ಸಮಿತಿ ಮೂವರು ಸಾಧಕರನ್ನು ಆಯ್ಕೆ ಮಾಡಿದೆ ಎಂದು ಹೇಳಿದರು.
ಇಬ್ಬರು ಸಾಧಕರು, ಒಂದು ಸಂಸ್ಥೆಗೆ ಪ್ರಶಸ್ತಿ
'ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಮೂವರಿಗೆ ಕೊಡಲು ತೀರ್ಮಾನ ಮಾಡಲಾಗಿತ್ತು. ಅದರಲ್ಲಿ ಈ ವರ್ಷ ಒಂದು ಪ್ರಶಸ್ತಿಯನ್ನು ಸಮಾಜ ಸೇವೆ ಸಲ್ಲಿಸಿದ ಸಂಸ್ಥೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿ ಕೊಡಲಾಗುತ್ತಿದೆ. ಈ ಪ್ರಶಸ್ತಿಗೆ ಜಯದೇವ ಆಸ್ಪತ್ರೆ ಸಂಸ್ಥೆಯನ್ನು ಆಯ್ಕೆ ಮಾಡಲಾಗಿದೆ. ಇನ್ನು ಹೆಸರಾಂತ ಸ್ಟಾಕ್ ಟ್ರೇಡರ್ ಝೀರೋದ ಮುಖ್ಯಸ್ಥ ನಿತಿನ್ ಕಾಮತ್ ಹಾಗೂ ಟೊಕಿಯೋ ಒಲಿಂಪಿಕ್‌ನಲ್ಲಿ ಗಾಲ್ಫ್ ನಲ್ಲಿ ಸಾಧನೆ ಮಾಡಿದ ಮಹಿಳೆ ಅದಿತಿ ಅಶೋಕ್ ಅವರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ' ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯುವ 514ನೇ ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ. ಈ ಪ್ರಶಸ್ತಿಯೊಂದಿಗೆ 5 ಲಕ್ಷ ರೂ. ನಗದು ಪ್ರಶಸ್ತಿ ಫಲಕವನ್ನು ಒಳಗೊಂಡಿದ್ದು, ವಿವಿಧ ಕ್ಷೇತ್ರಗಳ ತಜ್ಞರನ್ನೊಳಗೊಂಡಂತೆ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್.ಶಂಕರ್ ಅವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯು ಮೂವರು ಸಾಧಕರನ್ನು ಹೆಸರಿಸಿದೆ.







