ವಿಶಾಖಪಟ್ಟಣಂನಲ್ಲಿ ಭಾರತಕ್ಕೆ ʼಸೂರ್ಯೋದಯʼ
ಆಸೀಸ್ ವಿರುದ್ಧದ ಟಿ 20 ಸರಣಿಯ ಮೊದಲ ಪಂದ್ಯದಲ್ಲಿ ಭಾರತಕ್ಕೆ 1-0 ಮುನ್ನಡೆ

Photo : x/bcci
ವಿಶಾಖಪಟ್ಟಣಂ : ಇಲ್ಲಿನ ಡಾ ವೈ ಎಸ್ ರಾಜಶೇಖರ ರೆಡ್ಡಿ ಎಸಿಎ – ವಿಡಿಸಿಎ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ 5 ಪಂದ್ಯಗಳ ಟಿ 20 ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಭರ್ಜರಿ ಜಯ ಗಳಿಸಿ, 1-0 ಯ ಮುನ್ನಡೆ ಸಾಧಿಸಿದೆ.
ವಿಶಾಖಪಟ್ಟಣಂನ ಹೊರವಲದಲ್ಲಿರುವ ಸ್ಟೇಡಿಯಂ ತಣ್ಣನೆಯ ಆಹ್ಲಾದಕರ ವಾತಾವರಣಕ್ಕೆ ಹೆಸರವಾಸಿ. ಅತ್ಯುತ್ತಮ ಬ್ಯಾಟಿಂಗ್ ಪಿಚ್ ಗೆ ಹೆಸರಾಗಿರುವ ಈ ಕ್ರೀಡಾಂಗಣದಲ್ಲಿ 2005ರಲ್ಲಿ ಪಾಕಿಸ್ತಾನ ವಿರುದ್ಧ ಭಾರತದ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ 148 ರನ್ ಬಾರಿಸಿ ರನ್ ಹೊಳೆ ಹರಿಸಿದ್ದರು. ಆ ವೈಭವವನ್ನು ಸೂರ್ಯ ಕುಮಾರ್ ಯಾದವ್ ಆಸ್ಟ್ರೇಲಿಯ ಎದುರಿನ ಪಂದ್ಯದಲ್ಲಿ ನೆನಪಿಸಿದರು. ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ 42 ಎಸೆತಗಳಲ್ಲಿ 9 ಬೌಂಡರಿ, 4 ಸಿಕ್ಸರ್ ಗಳ ಮೂಲಕ 80 ರನ್ ಗಳಿಸಿದ ಸೂರ್ಯ ಕುಮಾರ್ ಯಾದವ್ ವಿಶಾಖಪಟ್ಟಣಂನ ಕ್ರಿಕೆಟ್ ಪ್ರೇಮಿಗಳಿಗೆ ರಾತ್ರಿ ಹೊತ್ತಲ್ಲೇ ಸೂರ್ಯೋದವಾದ ಅನುಭವ ನೀಡಿದರು.
ಆಸೀಸ್ ನೀಡಿದ ಕಠಿಣ ಗುರಿ ಬೆನ್ನತ್ತಿದ ಭಾರತದ ಪರ ಯಶಸ್ವಿ ಜೈಸ್ವಾಲ್, ಋತ್ರಾಜ್ ಗಾಯಕ್ವಾಡ್ ಇನ್ನಿಂಗ್ಸ್ ಆರಂಭಿಸಿದರು. ಜೈಸ್ವಾಲ್ ಬ್ಯಾಟ್ ಬೀಸಲು ತೊಡಗಿದಾಗ ರನ್ ಗಳಿಸಲು ಓಡಿದ ಋತ್ ರಾಜ್ ಗಾಯಕ್ವಾಡ್ ರನ್ ಔಟ್ ಆದರು. ಮೊದಲ ಓವರ್ ನಲ್ಲಿಯೇ ಗಾಯಕ್ವಾಡ್ ವಿಕೆಟ್ ಕಳೆದುಕೊಂಡ ಭಾರತ ಆಘಾತ ಅನುಭವಿಸಿತು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದ ಇಶಾನ್ ಕಿಶನ್ ಜೈಸ್ವಾಲ್ ಗೆ ಸಾಥ್ ನೀಡಿದರು. 8 ಎಸೆತಗಳಲ್ಲಿ 2 ಬೌಂಡರಿ 2 ಸಿಕ್ಸರ್ ಮೂಲಕ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದ ಜೈಸ್ವಾಲ್ ಮ್ಯಾಟ್ ಶಾರ್ಟ್ ಎಸೆತದಲ್ಲಿ ಬ್ಯಾಟ್ ಎತ್ತಲು ಹೋಗಿ ಸ್ಟೀವ್ ಸ್ಮಿತ್ ಗೆ ಕ್ಯಾಚಿತ್ತು ಔಟ್ ಆದರು.
ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್ ಗೆ ಬಂದ ನಾಯಕ ಸೂರ್ಯ ಕುಮಾರ್ ಯಾದವ್ ಇಶಾನ್ ಕಿಶನ್ ಜೊತೆ ಕ್ರೀಸ್ ಗೆ ಅಂಟಿ ನಿಂತರು. ಇಶಾನ್ ಕಿಶನ್ ಸ್ಪೋಟಕ ಆಟಕ್ಕೆ ಸಾಥ್ ನೀಡಿದ ಸೂರ್ಯ ಭಾರತ ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿದರು. 39 ಎಸೆತಗಳಲ್ಲಿ 2 ಬೌಂಡರಿ 5 ಸಿಕ್ಸರ್ ಸಹಿತ 58 ರನ್ ಗಳಿಸಿದ ಇಶಾನ್ ಕಿಶನ್ ತನ್ವೀರ್ ಸಂಗಾ ಸ್ಪಿನ್ ಎಸೆತಕ್ಕೆ ಮ್ಯಾಟ್ ಶಾರ್ಟ್ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು.
ಬಳಿಕ ಕ್ರೀಸ್ ಗೆ ಬಂದ ಐಪಿಎಲ್ ತಾರೆ ರಿಂಕು ಸಿಂಗ್ ಗೆಲ್ಲುವ ಒತ್ತಡದಲ್ಲಿದ್ದ ಭಾರತ ತಂಡಕ್ಕೆ ಆಪದ್ಭಾಂದವನಾದರು. ಕೊನೆಯ ಕ್ಷಣಕ್ಕೆ ರೋಚಕತೆ ಪಡೆದ ಪಂದ್ಯದಲ್ಲಿ 14 ಎಸೆತಗಳಲ್ಲಿ 4 ಬೌಂಡರಿ ಸಹಿತ ಮ್ಯಾಚ್ ವಿನ್ನಿಂಗ್ ಸಿಕ್ಸರ್ ಬಾರಿಸಿ 22 ರನ್ ಗಳಿಸಿದ ರಿಂಕು ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದರು.
ಆಸ್ಟ್ರೇಲಿಯ ಪರ ತನ್ವೀರ್ ಸಂಘಾ 2 ವಿಕೆಟ್ ಪಡೆದರು. ಸೀನ್ ಅಬಾಟ್, ಜೇಸನ್ ಬೆಹ್ರೆಂಡೋಫ್, ಮ್ಯಾಟ್ ಶಾರ್ಟ್ ತಲಾ 1 ವಿಕೆಟ್ ಪಡೆದರು.







