ಅಫ್ಘಾನಿಸ್ತಾನದ ವಿರುದ್ಧದ ಟಿ20 : ಭಾರತದ ʼಯಶಸ್ವಿʼ ಆಟ, ಸರಣಿ ಕೈವಶ
ಅಫ್ಘಾನ್ ವಿರುದ್ಧ ಭಾರತಕ್ಕೆ 6 ವಿಕೆಟ್ ಗಳ ಜಯ

Photo : x/@bcci
ಇಂಧೋರ್ : ಇಲ್ಲಿನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಅಫ್ಘಾನಿಸ್ತಾನದ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ತಂಡ 6 ವಿಕೆಟ್ ಗಳ ಜಯಗಳಿಸಿದೆ. ಸತತ ಎರಡನೇ ಅರ್ಧಶತಕ ಸಿಡಿಸಿದ ಆಲ್ರೌಂಡರ್ ಶಿವಂ ದುಬೆ ಹಾಗೂ ಆರಂಭಿಕ ಬ್ಯಾರ್ ಯಶಸ್ವಿಜೈಸ್ವಾಲ್ (68 ರನ್, 34 ಎಸೆತ)ಅಬ್ಬರದ ಬ್ಯಾಟಿಂಗ್ ನೆರವಿನಿಂದ ಭಾರತ ಕ್ರಿಕೆಟ್ ತಂಡ ಅಫ್ಘಾನಿಸ್ತಾನ ವಿರುದ್ದದ 2ನೇ ಟ್ವೆಂಟಿ-20 ಅಂತರ್ರಾಷ್ಟ್ರೀಯ ಪಂದ್ಯವನ್ನು ಗೆಲ್ಲುವುದರೊಂದಿಗೆ 3 ಪಂದ್ಯಗಳ ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ 2-0 ಅಂತರದಿಂದ ಗೆದ್ದುಕೊಂಡಿದೆ.
ರವಿವಾರ ನಡೆದ ಪಂದ್ಯದಲ್ಲಿ ಗೆಲ್ಲಲು 173 ರನ್ ಗುರಿ ಪಡೆದ ಭಾರತ 15.4 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.
ಭಾರತ ತಂಡ ನಾಯಕ ರೋಹಿತ್ ಶರ್ಮಾ(0)ವಿಕೆಟನ್ನು ಮೊದಲ ಓವರ್ನ 5ನೇ ಎಸೆತದಲ್ಲೇ ಕಳೆದುಕೊಂಡಿತು. ಆಗ ಜೈಸ್ವಾಲ್ ಹಾಗೂ ವಿರಾಟ್ ಕೊಹ್ಲಿ(29 ರನ್) ತಂಡವನ್ನು ಆಧರಿಸಿದರು. ಆಲ್ರೌಂಡರ್ ಶಿವಂ ದುಬೆ(ಔಟಾಗದೆ 63 ರನ್, 30 ಎಸೆತ, 5 ಬೌಂಡರಿ, 4 ಸಿಕ್ಸರ್) ಭಾರತವು 15.4 ಓವರ್ಗಳಲ್ಲಿ ಗೆಲುವಿನ ದಡ ಸೇರಲು ನೆರವಾದರು.
ಅಫ್ಘಾನಿಸ್ತಾನದ ಪರ ಕರೀಮ್ ಜೆನತ್ (2-13) ಎರಡು ವಿಕೆಟ್ ಪಡೆದರು.
ಅಫ್ಘಾನಿಸ್ತಾನ 172 ರನ್: ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಟಟ್ಟ ಅಫ್ಘಾನಿಸ್ತಾನ ತಂಡ ನಿಗದಿತ 20 ಓವರ್ಗಳಲ್ಲಿ 172 ರನ್ ಗಳಿಸಿ ಆಲೌಟಾಯಿತು.
ಬ್ಯಾಟಿಂಗ್ ಸ್ನೇಹಿ ಹೋಲ್ಕರ್ ಕ್ರೀಡಾಂಗಣದಲ್ಲಿ ಅಫ್ಘಾನ್ ಪರ ಗುಲ್ಬದಿನ್ ನೈಬ್(57 ರನ್, 35 ಎಸೆತ, 5 ಬೌಂಡರಿ, 4 ಸಿಕ್ಸರ್)ಸರ್ವಾಧಿಕ ಸ್ಕೋರ್ ಗಳಿಸಿದರು. ನಜೀಬುಲ್ಲಾ ಝದ್ರಾನ್ (23 ರನ್), ಮುಜೀಬ್ ಉರ್ ರೆಹಮಾನ್(21 ರನ್), ಕರೀಮ್ ಜೆನತ್(20 ರನ್)ಎರಡಂಕೆಯ ಸ್ಕೋರ್ ಗಳಿಸಿದರು.
ಭಾರತದ ಬೌಲಿಂಗ್ ವಿಭಾಗದಲ್ಲಿ ವೇಗಿ ಅರ್ಷದೀಪ್ ಸಿಂಗ್(3-32) ಯಶಸ್ವಿ ಪ್ರದರ್ಶನ ನೀಡಿದರು. ಅಕ್ಷರ್ ಪಟೇಲ್ (2-17) ಹಾಗೂ ರವಿ ಬಿಷ್ನೋಯ್ (2-39) ತಲಾ ಎರಡು ವಿಕೆಟ್ ಪಡೆದರು.







