ಇರಾನ್ ಮತ್ತು ಇಸ್ರೇಲ್ ನಡುವೆ ತಕ್ಷಣವೇ ಕದನ ವಿರಾಮ ಘೋಷಿಸಿ: ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ಕರೆ
ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ | Photo: aa.com.tr
ವಿಶ್ವಸಂಸ್ಥೆ: "ಇಸ್ರೇಲ್ ಮತ್ತು ಇರಾನ್ ನಡುವೆ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಮಿಲಿಟರಿ ಉದ್ವಿಗ್ನತೆಯಿಂದ ನಾನು ತೀವ್ರ ಆತಂಕಗೊಂಡಿದ್ದೇನೆ. ಎರಡು ದೇಶಗಳ ನಡುವೆ ತಕ್ಷಣವೇ ಕದನ ವಿರಾಮವನ್ನು ಘೋಷಿಸಿ", ಎಂದು ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ಕರೆ ನೀಡಿದ್ದಾರೆ ಎಂದು Aljazeera ವರದಿ ಮಾಡಿದೆ.
ಈ ಕುರಿತು ಹೇಳಿಕೆ ನೀಡಿರುವ ಅವರು," ಉದ್ವಿಗ್ನತೆಯ ಉಲ್ಬಣವನ್ನು ಕಡಿಮೆ ಮಾಡಲು ತಕ್ಷಣವೇ ಕದನ ವಿರಾಮ ಘೋಷಣೆಯಾಗಬೇಕು ಎಂಬ ಕರೆಯನ್ನು ನಾನು ಪುನರುಚ್ಚರಿಸುತ್ತೇನೆ. ಸಂಘರ್ಷದ ಅಂತರರಾಷ್ಟ್ರೀಕರಣವನ್ನು ತಪ್ಪಿಸಲು ನಾನು ಎಲ್ಲರಿಗೂ ಬಲವಾಗಿ ಮನವಿ ಮಾಡುತ್ತೇನೆ", ಎಂದು ಹೇಳಿದ್ದಾರೆ.
ಯಾವುದೇ ಹೆಚ್ಚುವರಿ ಮಿಲಿಟರಿ ಹಸ್ತಕ್ಷೇಪಗಳು ಇದರಲ್ಲಿ ಭಾಗಿಯಾಗಿರುವವರಿಗೆ ಮಾತ್ರವಲ್ಲದೆ, ಇಡೀ ಪ್ರದೇಶಕ್ಕೆ ಮತ್ತು ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಅಗಾಧ ಪರಿಣಾಮಗಳನ್ನು ಬೀರಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
"ಇರಾನ್ನ ಪರಮಾಣು ಕಾರ್ಯಕ್ರಮ ಮತ್ತು ಪ್ರಾದೇಶಿಕ ಭದ್ರತಾ ಸಮಸ್ಯೆಗಳಿಗೆ ಸಂಬಂಧಿಸಿದ ಕಳವಳಗಳನ್ನು ಪರಿಹರಿಸಲು ರಾಜತಾಂತ್ರಿಕತೆಯು ಅತ್ಯುತ್ತಮ ಮತ್ತು ಏಕೈಕ ಮಾರ್ಗವಾಗಿದೆ", ಎಂದು ಆಂಟೋನಿಯೊ ಗುಟೆರೆಸ್ ಅಭಿಪ್ರಾಯಪಟ್ಟಿದ್ದಾರೆ.





