ಬಾಂಗ್ಲಾದೇಶಕ್ಕೆ ಗಡೀಪಾರಾದ 6 ಮಂದಿಯನ್ನು ವಾಪಾಸು ಕರೆ ತನ್ನಿ: ಸುಪ್ರೀಂಕೋರ್ಟ್

PC: PTI
ಹೊಸದಿಲ್ಲಿ: ಅಕ್ರಮ ವಲಸೆ ಆರೋಪದಲ್ಲಿ ಬಾಂಗ್ಲಾದೇಶಕ್ಕೆ ಗಡೀಪಾರಾಗಿರುವ ತುಂಬುಗರ್ಭಿಣಿ ಸುನಾಲಿ ಖಾತೂನ್, ಪತಿ ದಾನಿಷ್ ಶೇಖ್ ಮತ್ತು ಅಪ್ರಾಪ್ತ ವಯಸ್ಸಿನ ಮಗ ಸಬೀರ್ ಸೇರಿದಂತೆ ಆರು ಮಂದಿಯನ್ನು ಭಾರತಕ್ಕೆ ವಾಪಾಸು ಕರೆಸಿಕೊಳ್ಳುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಮಧ್ಯಂತರ ಕ್ರಮವಾಗಿ ಅವರನ್ನು ಭಾರತಕ್ಕೆ ವಾಪಾಸು ಕರೆಸಿಕೊಂಡು ಬಳಿಕ ಅವರ ಪೌರತ್ವದ ಬಗ್ಗೆ ತನಿಖೆ ನಡೆಸಬೇಕು ಎಂದು ಸಲಹೆ ಮಾಡಿದೆ. ಆದಾಗ್ಯೂ ನುಸುಳುಕೋರರ ವಿರುದ್ಧ ಕಠಿಣ ಕ್ರಮಕ್ಕೆ ಕೋರ್ಟ್ ನಿರ್ದೇಶನ ನೀಡಿದೆ.
ಗಡೀಪಾರಾದವರ ಪರವಾಗಿ ಹಿರಿಯ ವಕೀಲರಾದ ಸಂಜಯ್ ಹೆಗಡೆ, ಕಪಿಲ್ ಸಿಬಲ್ ಮತ್ತು ಶಂಕರನಾರಾಯಣನ್ ಅವರು, ಸಿಜೆಐ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಾಲಾ ಬಗ್ಚಿ ಅವರಿದ್ದ ಪೀಠದ ಮುಂದೆ ವಾದ ಮಂಡಿಸಿ, ಸುನಾಲಿ, ಆಕೆಯ ಪತಿ ಹಾಗೂ ಪುತ್ರನ ಪೌರತ್ವ ಸಾಬೀತುಪಡಿಸುವ ದಾಖಲೆಗಳನ್ನು ಹೊಂದಿದ್ದಾರೆ ಹಾಗೂ ಅವರ ಗಡೀಪಾರಿನಿಂದ ಅವರ ಮೂಲಭೂತ ಹಕ್ಕುಗಳ ಉಲ್ಲಘನೆಯಾಗಿದೆ. ಕೊಲ್ಕತ್ತಾ ಹೈಕೋರ್ಟ್ ಆದೇಶದಂತೆ ಅವರನ್ನು ವಾಪಾಸು ಕರೆತರಬೇಕು ಎಂದು ಕೋರಿದರು.
ಹೈಕೋರ್ಟ್ ಆದೇಶದ ವಿರುದ್ಧ ಕೇಂದ್ರ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕೈಗೊಂಡ ನ್ಯಾಯಪೀಠ, "ಇದೀಗ ಭೂಮಿ ಹೊಂದಿರುವ ದಾಖಲೆ ಹಾಗೂ ಸಂಬಂಧಿಕರ ಹೇಳಿಕೆಗಳು ದಾಖಲಾಗಿವೆ. ನೀವೇಕೆ ಅವರನ್ನು ವಾಪಾಸು ಕರೆಸಿಕೊಂಡು ಅವರ ಪೌರತ್ವದ ಬಗ್ಗೆ ತನಿಖೆ ನಡೆಸಬಾರದು? ನೀವು ಗಡೀಪಾರಿಗಿಂತ ಮುನ್ನ ಯಾವುದೇ ತನಿಖೆ ನಡೆಸಿಲ್ಲ. ಗಡೀಪಾರುಗೊಂಡವರಿಗೆ ಅವರ ಪೌರತ್ವ ಸಾಬೀತುಪಡಿಸಲು ಅವಕಾಶ ನೀಡಿ" ಎಂದು ಕೇಂದ್ರಕ್ಕೆ ಸೂಚಿಸಿತು.
"ಮಧ್ಯಂತರ ಕ್ರಮವಾಗಿ ಅವರನ್ನು ವಾಪಾಸು ಕರೆಸಿಕೊಳ್ಳಿ ಹಾಗೂ ತನಿಖೆ ನಡೆಸಿ. ಅವರು ಪ್ರಸ್ತುತಪಡಿಸುವ ದಾಖಲೆಗಳನ್ನು ಪರಿಶೀಲಿಸಿ ಮತ್ತು ಅವರ ಪೌರತ್ವ ಸಾಬೀತುಪಡಿಸಲು ಅವರಿಗೆ ಅವಕಾಶ ನೀಡಿ" ಎಂದು ಸ್ಪಷ್ಟ ಸೂಚನೆ ನೀಡಲಾಯಿತು.







