ಸರ್ವೇ ಜನ...ಸುಖಿನೋ ಭವಂತು!

‘ಈಗ ಬೀಳುತ್ತದೆ...ಈಗ ಬೀಳುತ್ತದೆ’ ಎಂದು ಪತ್ರಕರ್ತ ಎಂಜಲು ಕಾಸಿ ತನಗೆ ತಾನೇ ಗೊಣಗುತ್ತಿರುವಾಗ ಸಂಪಾದಕರು ಗರ್ಜಿಸಿದರು ‘‘ಅದೇನ್ರೀ ಬೀಳೋದು...ಭರ್ಜರಿ ಬಹುಮತದಿಂದ ಆಯ್ಕೆಯಾದ ಸರಕಾರ ಅಷ್ಟು ಸುಲಭದಲ್ಲಿ ಬೀಳುವುದಿಲ್ಲ...’’
ಕಾಸಿ ಗರ್ಜನೆಗೆ ಬೆಚ್ಚಿ ಉತ್ತರಿಸಿದ ‘‘ಸರಕಾರ ಬೀಳೋ ವಿಷಯ ಅಲ್ಲ ಸಾರ್. ಜಾತಿಗಣತಿ ವರದಿ ಹೊರಬೀಳುವ ವಿಷಯ ಆಲೋಚಿಸುತ್ತಾ ಇದ್ದೆ ಸರ್..ಗಣತಿ ವರದಿ ಹೊರ ಬಿದ್ದರೆ ಸರಕಾರ ಬೀಳುತ್ತೆ ಅಂತ ಪಕ್ಕದ ಬೀದಿಯ ಗಿಣಿಜ್ಯೋತಿಷಿಯೊಬ್ಬರು ಈಗಷ್ಟೇ ಭವಿಷ್ಯ ಹೇಳಿದರು ಸಾರ್...’’
‘‘ಹಾಗಾದ್ರೆ ಆ ಗಿಣಿ ಜ್ಯೋತಿಷಿಯನ್ನು ಕರೆತಂದು ನಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವಿಶ್ಲೇಷಣೆ ನಡೆಸ್ರೀ...ಹೋಗ್ರಿ ಎಳಕೊಂಡು ಬನ್ರೀ ಅವನನ್ನ...’’ ಎಂದು ಸಂಪಾದಕರು ಅವಸರ ಪಡಿಸಿದಂತೆ ಕಾಸಿ ಕಚೇರಿಯಿಂದ ಹೊರಗೆ ಹಾರಿ ಪಕ್ಕದ ಓಣಿ ತಲುಪಿದ. ಅಲ್ಲಿ ನೋಡಿದರೆ ಗಿಣಿ ಜ್ಯೋತಿಷಿ ನಾಪತ್ತೆಯಾಗಿದ್ದ. ಅಷ್ಟರಲ್ಲಿ ಕಿಸೆಯೊಳಗಿದ್ದ ಪುರಾತನ ನೋಕಿಯಾ ಸೆಟ್ ರಿಂಗಣಿಸತೊಡಗಿತು.ಕಿವಿಗಿಟ್ಟಾಕ್ಷಣ ಆ ಕಡೆಯಿಂದ ಜಾತಿ ಸಂಘಟನೆಯ ನಾಯಕರೊಬ್ಬರು ಮಾತನಾಡುತ್ತಿದ್ದರು ‘‘ಕಾಸಿಯವ್ರೇ..ಜಾತಿ ಗಣತಿಗೆ ಒಂದು ಗತಿ ಕಾಣಿಸಿಯಾಯಿತು. ಮುಖ್ಯಮಂತ್ರಿ ಬಿದ್ದರಾಮಯ್ಯ ಅವರು ಮರು ಸರ್ವೇ ಮಾಡುತ್ತಿದ್ದಾರಂತೆ...’’
ಕೇಳಿ ಕಾಸಿ ಅವಕ್ಕಾದ. ಕೊನೆಗೂ ಗಣತಿಗೆ ಗತಿ ಕಾಣಿಸಿಯೇ ಬಿಟ್ಟರಲ್ಲ ಎನ್ನುತ್ತಾ ನೇರವಾಗಿ ಮುಖ್ಯಮಂತ್ರಿ ಬಿದ್ದರಾಮಯ್ಯ ಅವರಲ್ಲಿಗೆ ಓಡಿದ. ಅವರು ತಮ್ಮ ನಿವಾಸದ ಜಗಲಿಯಲ್ಲಿ ಕುಳಿತು ಜಾತಿ ಗಣತಿ ವರದಿಯನ್ನು ಮುಂದಿಟ್ಟುಕೊಂಡು ಕಾಲ್ಕ್ಯುಲೇಟರ್‌ನಲ್ಲಿ ಅದೇನೋ ಕೂಡಿಸು ಕಳೆ ಮಾಡುತ್ತಿದ್ದರು.
‘‘ಏನ್ ಸಾರ್...ಅದೇನೋ ಲೆಕ್ಕ ಮಾಡುತ್ತಿರುವ ಹಾಗೆ ಇದೆ....’’ ಕಾಸಿ ಮೆಲ್ಲಗೆ ಮಾತಿಗೆ ತೊಡಗಿದ.
ತಲೆ ಎತ್ತಿದರೆ ಕಾಸಿ. ಬಿದ್ದರಾಮಯ್ಯರಿಗೆ ಸಿಟ್ಟು ಒತ್ತರಿಸಿ ಬಂತು. ಆದರೂ ಸಮಾಧಾನ ನಟಿಸುತ್ತಾ ‘‘ಜಾತಿ ಗಣತಿ ವರದಿಯ ಲೆಕ್ಕ ತಾಳೆ ನೋಡುತ್ತಿದ್ದೆ. ಅದೇನೋ ಲೆಕ್ಕ ತಪ್ಪಿದ ಹಾಗೆ ಇದೆ. ಮರು ಸರ್ವೇ ಮಾಡಿದರೆ ಹೇಗೆ ಎಂದು ಯೋಚಿಸುತ್ತಿದ್ದೇನೆ...’’
‘‘ಜಾತಿಗಣತಿ ಜಾರಿಗೊಳಿಸಿಯೇ ಸಿದ್ಧ ಎಂದಿದ್ರಲ್ಲ ಸಾರ್..?’’
ಕಾಸಿಯನ್ನು ಒಂದು ಕ್ಷಣ ದುರುಗುಟ್ಟಿ ನೋಡಿದ ಬಿದ್ದರಾಮಯ್ಯರು ಸಮಾಧಾನದಿಂದ ಉತ್ತರಿಸತೊಡಗಿದರು ‘‘ನೋಡ್ರೀ...ನಮ್ಮ ಉಪನಿಷತ್‌ನಲ್ಲಿ ಸರ್ವೇ ಜನ ಸು ಖಿನೋ ಭವಂತು...’ ಅನ್ನೋ ಮಾತಿದೆ. ಆದುದರಿಂದ ಜಾತಿಗಣತಿಯನ್ನು ಸರ್ವೇ ಮಾಡಿಸುತ್ತಿದ್ದೇವೆ. ಸರ್ವರೂ ಸುಖಿಯಾಗಬೇಕಾದರೆ ಮರು ಸರ್ವೇ ಆಗುವುದು ಅಗತ್ಯ ಅಂತ ಪುರಾಣ ಕಾಲದಲ್ಲೇ ಹೇಳಿರುವುದರಿಂದ ಮುಂದಿನ ದಿನಗಳಲ್ಲಿ ಸರ್ವೇ ಇಲಾಖೆಯವರ ನೇತೃತ್ವದಲ್ಲೇ ನಾವು ಮರು ಸರ್ವೇ ಮಾಡಿಸುತ್ತಿದ್ದೇವೆ...ಆಗ ಲೆಕ್ಕ ತಪ್ಪುವ ಸಾಧ್ಯತೆಯೇ ಇಲ್ಲ’’
‘‘ಹಾಗಾದರೆ ಹಿಂದುಳಿದ ವರ್ಗದ ಆಯೋಗ ನೀಡಿದ ವರದಿಯ ಗತಿ?’’ ಕಾಸಿ ಕಳವಳದಿಂದ ಕೇಳಿದ
‘‘ನೋಡ್ರೀ...ಹಿಂದುಳಿದ ವರ್ಗ ನೀಡಿದ ವರದಿ ತುಂಬಾ ಹಿಂದೆ ಉಳಿದಿದೆ ಎನ್ನುವುದು ನಮಗೆ ಮೊನ್ನೆ ತಾನೇ ಗೊತ್ತಾಗಿ ಬಿಟ್ಟಿತು. ಮುಂದುವರಿದ ವರ್ಗದ ಆಯೋಗದಿಂದ ಹೊಸ ವರದಿಯನ್ನು ನಾವು ತರಿಸಬೇಕು ಎನ್ನುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಮುಂದುವರಿದ ವರ್ಗಗಳ ಆಯೋಗವನ್ನು ರಚನೆ ಮಾಡಿ ಅದರ ನೇತೃತ್ವದಲ್ಲಿ ಹೊಸ ಗಣತಿಯನ್ನು ಮಾಡಲಿದ್ದೇವೆ...’’ ಎಂದು ಕಾಸಿಯನ್ನು ಅಪಾದಮಸ್ತಕರಾಗಿ ನೋಡಿ ಮುಗುಳ್ನಕ್ಕರು.
‘‘ಮುಂದುವರಿದ ವರ್ಗಗಳ ಆಯೋಗ ರಚನೆ ಹೇಗೆ ಸಾರ್?’’ ಕಾಸಿಗೆ ಅರ್ಥವಾಗಲಿಲ್ಲ.
‘‘ಎಲ್ಲ ಜಾತಿಗೂ ಸಮಾನ ಅವಕಾಶ ಸಿಗಬೇಕು ಎನ್ನುವ ಕಾರಣದಿಂದ ಜಾತಿಗಣತಿ ಮಾಡುತ್ತಿದ್ದೇವೆ. ಆದುದರಿಂದ ಹಿಂದುಳಿದ ವರ್ಗಗಳಿಂದ ಅನ್ಯಾಯಕ್ಕೊಳಗಾಗಿರುವ ಮುಂದುವರಿದ ವರ್ಗಗಳನ್ನು ಗುರುತಿಸಿ ಅದರ ನೇತೃತ್ವದಲ್ಲಿ ಒಂದು ಆಯೋಗವನ್ನು ರಚಿಸಲಾಗುವುದು. ಜಾತಿ ಗಣತಿಯ ಸರ್ವೇ ನಡೆಸುವ ಅಧಿಕಾರವನ್ನು ಅವರಿಗೇ ನೀಡಲಾಗುವುದು. ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಜಾತಿಗಣತಿ ಸರಿಯಿಲ್ಲ ಎಂದು ಹೇಳಿರುವ ಬಲಾಢ್ಯ ಜಾತಿಯ ತುಳಿತಕ್ಕೊಳಗಾಗಿರುವ ವಿವಿಧ ನಾಯಕರನ್ನು ಗುರುತಿಸಿ ಅವರ ನೇತೃತ್ವದಲ್ಲಿ ತಂಡ ಮಾಡಲಾಗುವುದು. ಮೇಲ್‌ಜಾತಿಯ ಎಲ್ಲ ಗಣತಿಯನ್ನು ಆಯಾ ಜಾತಿಯ ಮುಖಂಡರೇ ಮಾಡತಕ್ಕದ್ದು. ಲಿಂಗಾಯತರ ಗಣತಿಯನ್ನು ಲಿಂಗಾಯತ ಸ್ವಾಮೀಜಿಗಳ ನೇತೃತ್ವದಲ್ಲಿ, ಒಕ್ಕಲಿಗರ ಗಣತಿಯನ್ನು ಒಕ್ಕಲಿಗ ಸ್ವಾಮೀಜಿಯ ನೇತೃತ್ವದಲ್ಲಿ ನಡೆಸಲಾಗುವುದು’’ ಬಿದ್ದರಾಮಯ್ಯರು ಹೊಸ ಯೋಜನೆಯನ್ನು ವಿವರಿಸಿದರು.
‘‘ಮರು ಸರ್ವೇಯಲ್ಲೂ ಸಮಸ್ಯೆ ಕಾಣಿಸಿದರೆ...’’ ಕಾಸಿ ಅನುಮಾನ ಮುಂದಿಟ್ಟ.
‘‘ಮರು ಸರ್ವೇಯಲ್ಲಿ ಸಮಸ್ಯೆ ಕಾಣಿಸುವ ಪ್ರಶ್ನೆಯೇ ಇಲ್ಲ. ಯಾಕೆಂದರೆ ಈ ಸರ್ವೇಯಲ್ಲಿ ಅಂಕಿಅಂಶಗಳು ತಪ್ಪಾಗಿವೆ ಎಂದು ಯಾವುದೇ ಜಾತಿಯ ಮುಖಂಡರು ಆಕ್ಷೇಪಿಸುವಂತಿಲ್ಲ. ಎಲ್ಲ ಜಾತಿಗಳು ತಮ್ಮ ತಮ್ಮ ಜಾತಿಗಳ ಸಂಖ್ಯೆಯನ್ನು ಅವರ ಅಗತ್ಯಕ್ಕೆ ತಕ್ಕಂತೆ ದಾಖಲಿಸಲು ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಲಾಗುವುದು. ಬಲಾಢ್ಯ ಜಾತಿಗಳ ಜನರ ಸಂಖ್ಯೆಗಿಂತ ಕಡಿಮೆ ಸಂಖ್ಯೆಯನ್ನು ದಾಖಲಿಸಿ ದುರ್ಬಲ ಜಾತಿಗಳು ಜಾತಿಗಣತಿಯನ್ನು ಯಶಸ್ವಿಗೊಳಿಸಲು ಸಹಕರಿಸಬೇಕು. ಈ ಗಣತಿಯನ್ನು ನಾವು ದುರ್ಬಲ ಜಾತಿಗಳಿಗಾಗಿ ಮಾಡುತ್ತಿರುವುದರಿಂದ ಜಾತಿಗಣತಿ ಜಾರಿಯಾಗಬೇಕಾದರೆ ಅದಕ್ಕೆ ಬಲಾಢ್ಯ ಜಾತಿಗಳ ಅನುಮತಿ ಬೇಕಾಗುತ್ತದೆ. ಅವರು ದೊಡ್ಡ ಮನಸ್ಸು ಮಾಡಿ ಅನುಮತಿಕೊಟ್ಟು ಸೌಹಾರ್ದವನ್ನು ಕಾಪಾಡಲು ಸಿದ್ಧರಿದ್ದಾರೆ. ಆದುದರಿಂದ, ದುರ್ಬಲ ಜಾತಿಗಳು ಸ್ವಲ್ಪ ಹೊಂದಾಣಿಕೆಯನ್ನು ಪ್ರದರ್ಶಿಸಿ ಎಲ್ಲೂ ತಮ್ಮ ಜಾತಿಯ ಸಂಖ್ಯೆಯು ಮೇಲ್‌ಜಾತಿಯ ಸಂಖ್ಯೆಯನ್ನು ಮೀರದಂತೆ ನೋಡಿಕೊಳ್ಳಬೇಕು. ಆಗ ನಮಗೆ ಜಾತಿ ಗಣತಿಯನ್ನು ಜಾರಿಗೊಳಿಸಲು ಸುಲಭವಾಗುತ್ತದೆ’’ ಬಿದ್ದರಾಮಯ್ಯ ಜಾತಿಗಣತಿ ಜಾರಿಯ ತಯಾರಿಯನ್ನು ವಿವರಿಸಿದರು.
‘‘ಸಾರ್...ಈ ಮರು ಸರ್ವೇ ಬಳಿಕವೂ ಆಕ್ಷೇಪಗಳು ಕೇಳಿ ಬಂದರೆ...’’ ಕಾಸಿ ಮತ್ತೆ ಅನುಮಾನ ವ್ಯಕ್ತಪಡಿಸಿದ.
‘‘ಅದಕ್ಕೆ ಚಿಂತೆ ಯಾಕೆ. ಮತ್ತೆ ಹೊಸದಾಗಿ ಸರ್ವೇ ಮಾಡಿಸಿದರೆ ಆಯಿತು. ಅಷ್ಟರಲ್ಲಿ ನನ್ನ ಮುಖ್ಯಮಂತ್ರಿ ಅವಧಿ ಪೂರ್ಣವಾಗಿರುತ್ತದೆ. ಒಟ್ಟಿನಲ್ಲಿ ಜಾತಿ ಗಣತಿ ಸಮೀಕ್ಷೆ ಜಾರಿಗೊಳ್ಳುವುದಕ್ಕಿಂತ ಸರ್ವೇ ನಡೆಸುವುದು ಮುಖ್ಯ. ಸರ್ವೇ ಜನ ಸುಖಿನೋ ಭವಂತು... ’’ ಎಂದವರೇ ಬಿದ್ದರಾಮಯ್ಯ ಒಳ ನಡೆದರು.
ಕಾಸಿ ಎಲ್ಲವೂ ಅರ್ಥವಾದವನಂತೆ ಅಲ್ಲಿಂದ ಸರ್ವೇ ಇಲಾಖೆಯ ಕಡೆಗೆ ಓಡತೊಡಗಿದ.
ಚೇಳಯ್ಯ