ಸೆಂಟಿ ಮರಿಯ ಅಮಲು ಪುರಾಣ

ಭಾರೀ ಟೆನ್ಷನ್‌ನಲ್ಲಿದ್ದ ಸೆಂಟಿ ಮರಿ ಗ್ಯಾಲನ್‌ಗಟ್ಟಲೆ ಕುಡಿದುಬಿಟ್ಟಿದ್ದ. ತಾನೆಲ್ಲಿದ್ದೇನೆ ಎಂಬ ಪರಿಜ್ಞಾನವೂ ಅವನಿಗಿರಲಿಲ್ಲ. ವಿಪರೀತ ಅಮಲಿನಲ್ಲಿ ಸೆಂಟಿ ಮರಿ ಬಾರಿನಿಂದ ಹೊರಬಂದವನು ಓಲಾಡುತ್ತಾ ನಡೆದುಕೊಂಡೇ ತನಗೆ ಕಂಡ ದಾರಿಯಲ್ಲಿ ನಡೆಯತೊಡಗಿದ. ಅವರೆದೆಯಲ್ಲೇನಿದೆ? ಇವರೆದೆಯಲ್ಲೇನಿದೆ? ಎಂಬ ಯಾವುದೋ ಹಳೆಯ ಹಾಡನ್ನು ಬಡಬಡಿಸುತ್ತಾ ಅಲೆಯುತ್ತಿದ್ದ. ಹಠಾತ್ತನೆ ಅವನಿಗೆ ತೀವ್ರ ಎದೆನೋವು ಕಾಣಿಸಿಕೊಂಡಿತು. ಅಯ್ಯಯ್ಯೋ ನನ್ನ ಎದೆಯಲ್ಲೇನಿದೆ? ಎಂದು ಅವನು ಬೊಬ್ಬಿಡತೊಡಗಿದ. ಸ್ವಲ್ಪ ಹೊತ್ತಿನಲ್ಲೇ ಹೃದಯಾಘಾತಕ್ಕೊಳಗಾಗಿ ಕುಸಿದುಬಿದ್ದ. ಬಿದ್ದದ್ದು ರಸ್ತೆ ಬದಿಯ ಚರಂಡಿಯ ಆಳಕ್ಕೆ. ಪಕ್ಕದ ಮಸೀದಿಯಿಂದ ಹೊರಬರುತ್ತಿದ್ದ ಕೆಲವು ಮುಲ್ಲಾಗಳು ದೂರದಿಂದ ಈ ದೃಶ್ಯ ನೋಡಿ ಓಡೋಡಿ ಬಂದರು. ಚರಂಡಿಗಿಳಿದು ತಮ್ಮ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಸೆಂಟಿ ಮರಿಯ ಮುಖ ಕೆಸರಿನಲ್ಲಿ ಮುಳುಗಿದ್ದರಿಂದ ಯಾರಿಗೂ ಆತ ಯಾರೆಂದು ತಿಳಿದಿರಲಿಲ್ಲ. ಆದರೂ ಎದೆಯಲ್ಲಿ ಮಾನವೀಯತೆ ತುಂಬಿದ್ದ ಆ ಮುಲ್ಲಾಗಳು, ಯಾರಾದರೇನಂತೆ, ನಾವು ನಮ್ಮ ಕರ್ತವ್ಯ ನಿರ್ವಹಿಸೋಣ ಎನ್ನುತ್ತಾ ಬಹಳ ಕಷ್ಟಪಟ್ಟು ಆತನನ್ನು ಚರಂಡಿಯಿಂದ ಹೊರತೆಗೆದು, ಕೆಸರನ್ನು ಸಾಧ್ಯವಾದಷ್ಟು ಸರಿಸಿ, ಸಿಪಿಆರ್ ತುರ್ತು ಚಿಕಿತ್ಸೆ ಕೊಟ್ಟು ಆಸ್ಪತ್ರೆಗೆ ಸೇರಿಸಿದರು. ಆಸ್ಪತ್ರೆಯಲ್ಲಿ ಯಾರೂ ಗಬ್ಬುನಾತ ಬೀರುವ ಅವನ ಶರೀರವನ್ನು ಮುಟ್ಟಲು ತಯಾರಿರಲಿಲ್ಲ. ಕೊನೆಗೆ ಅವನನ್ನು ತಂದಿದ್ದ ಮುಲ್ಲಾಗಳೇ ತರಾತುರಿಯಲ್ಲಿ ಅವನ ಹೊರ ಶರೀರವನ್ನು ತೊಳೆದು ಶುಚೀಕರಿಸಿದರು. ಆ ಬಳಿಕ ಅವನ ಅರೋಗ್ಯ ಪರೀಕ್ಷೆ ಮಾಡಿದ ವೈದ್ಯರು, ಈತನಿಗೆ ತಕ್ಷಣ ಓಪನ್ ಹಾರ್ಟ್ ಸರ್ಜರಿ ಮಾಡಬೇಕಾಗಿದೆ ಎಂದರು. ಸರಿ, ಚಿಕಿತ್ಸೆ ಮಾಡಿ ಎಂದು ಮುಲ್ಲಾಗಳು ಅನುಮತಿಸಿದರು. ಆದರೆ ಇದು ದೊಡ್ಡ ಸರ್ಜರಿಯಾದ್ದರಿಂದ ಕನಿಷ್ಠ ಮೂರು ಲಕ್ಷ ರೂಪಾಯಿ ಮುಂಗಡ ಡೆಪಾಸಿಟ್ ಇಡಬೇಕು ಎಂದು ಆಸ್ಪತ್ರೆಯವರು ಹಠ ಹಿಡಿದರು. ದಯವಿಟ್ಟು ಹಾಗೆ ಹಠ ಹಿಡಿಯಬೇಡಿ. ಮೊದಲು ಸರ್ಜರಿ ಮಾಡಿ ಅವನ ಜೀವ ಉಳಿಸಿ. ಅವನ ಕೈಯಲ್ಲಿರುವ ದುಬಾರಿ ವಾಚು, ಕೊರಳಲ್ಲಿರುವ ಚಿನ್ನದ ದಪ್ಪದ ಚೈನು ಇತ್ಯಾದಿಗಳನ್ನು ನೋಡಿದರೆ ಅವನು ಸಾಕಷ್ಟು ಶ್ರೀಮಂತನಂತೆ ಕಾಣುತ್ತಾನೆ. ಅವನ ಬಂಧುಗಳು ಬಂದು ಬಿಲ್ಲು ಪಾವತಿಸಬಹುದು ಎಂದು ಮುಲ್ಲಾಗಳು ಪರಿಪರಿಯಾಗಿ ವಿನಂತಿಸಿಕೊಂಡರು. ಆದರೆ ಆಸ್ಪತ್ರೆಯವರು ಒಪ್ಪಲಿಲ್ಲ. ಚರಂಡಿಯಲ್ಲಿ ಸಿಕ್ಕಿದವರನ್ನು ನಂಬಲು ಸಾಧ್ಯವಿಲ್ಲ ಎಂಬುದು ಅವರ ತರ್ಕವಾಗಿತ್ತು. ಕೊನೆಗೆ ಬಡ ಮುಲ್ಲಾಗಳು ತಮ್ಮ ಮಿತ್ರರನ್ನೆಲ್ಲಾ ಸಂಪರ್ಕಿಸಿ ಹತ್ತೇ ನಿಮಿಷದೊಳಗೆ ಮೂರು ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿ ಆಸ್ಪತ್ರೆಯವರಿಗೆ ಒಪ್ಪಿಸಿದರು. ಸೆಂಟಿಯ ರಕ್ತಪರೀಕ್ಷೆ ಮಾಡಿದ ವೈದ್ಯರು ‘‘ಈತನ ಬ್ಲಡ್ ಗ್ರೂಪ್ ತುಂಬಾ ಅಪರೂಪದ್ದು. ಸದ್ಯ ನಮ್ಮ ಬ್ಲಡ್ ಬ್ಯಾಂಕ್‌ನಲ್ಲಿ ಆ ಗ್ರೂಪಿನ ರಕ್ತ ಇಲ್ಲ. ಎಲ್ಲಿಂದಾದರೂ ಆ ಗ್ರೂಪಿನ ಕನಿಷ್ಠ ಮೂರು ಬಾಟ್ಲಿ ರಕ್ತ ತರಲು ಸಾಧ್ಯವೇ?’’ ಎಂದು ಕೇಳಿದರು. ತಕ್ಷಣ ಅಲ್ಲಿದ್ದ ಮುಲ್ಲಾಗಳೆಲ್ಲಾ ತಮ್ಮ ರಕ್ತ ಪರೀಕ್ಷೆ ಮಾಡಿಸಿದರು. ಅವರಲ್ಲಿ ಒಬ್ಬನ ಬ್ಲಡ್ ಗ್ರೂಪ್ ಮಾತ್ರ ಮ್ಯಾಚ್ ಆಗುತ್ತಿತ್ತು. ಆ ಮುಲ್ಲಾಗಳು ತಮ್ಮ ಮಸೀದಿ ಜಮಾಅತಿಗೆ ಸೇರಿದ್ದ ಯುವಕರನ್ನೆಲ್ಲಾ ಸಂಪರ್ಕಿಸಿ ಪ್ರಸ್ತುತ ಗ್ರೂಪ್‌ನ ರಕ್ತವಿದ್ದ ಇಬ್ಬರಿಂದ ರಕ್ತದಾನ ಮಾಡಿಸಿದರು.
ಸರಿ. ವೈದ್ಯರು ಸೆಂಟಿಯ ಎದೆ ಸೀಳಿ ಸರ್ಜರಿ ನಡೆಸಿದರು. ನಾಲ್ಕು ಗಂಟೆಗಳ ಸುದೀರ್ಘ ಸರ್ಜರಿಯ ಬಳಿಕ ವೈದ್ಯರು ಹೊರಬಂದಾಗ ಮುಲ್ಲಾಗಳು ಇನ್ನೂ ಅಲ್ಲೇ ಕಾತರದಿಂದ ಕಾದಿದ್ದರು. ಅವರು ವೈದ್ಯರೊಡನೆ, ರೋಗಿಯ ಸ್ಥಿತಿ ಹೇಗಿದೆ ಎಂದು ವಿಚಾರಿಸತೊಡಗಿದರು. ಆದರೆ ಸ್ವತಃ ವೈದ್ಯರ ಸ್ಥಿತಿಯೇ ಚಿಂತಾಜನಕವಾಗಿತ್ತು. ಅವರೆಲ್ಲಾ ಪದೇ ಪದೇ ವಾಂತಿ ಮಾಡುತ್ತಿದ್ದರು ಮತ್ತು ತಮ್ಮ ವಾಂತಿ ನಿಲ್ಲಿಸಲು ಸ್ವತಃ ತಮಗೇ ಚಿಕಿತ್ಸೆ ನೀಡುವುದರಲ್ಲಿ ನಿರತರಾಗಿ ಬಿಟ್ಟಿದ್ದರು. ಅಯ್ಯಯ್ಯೋ ನಿಮಗೇನಾಯಿತು ಎಂದು ಮುಲ್ಲಾಗಳು ಪ್ರಶ್ನಿಸಿದಾಗ ವೈದ್ಯರು ಅದಕ್ಕೂ ಉತ್ತರಿಸುವ ಸ್ಥಿತಿಯಲ್ಲಿರಲಿಲ್ಲ. ಒಂದರ್ಧ ಗಂಟೆಯ ಬಳಿಕ ಸ್ವಲ್ಪ ಸಾವರಿಸಿಕೊಂಡ ವೈದ್ಯರು ಹೇಳಿದರು: ‘‘ಆತ ತುಂಬಾ ವಿಚಿತ್ರ ಮನುಷ್ಯ. ಅವನ ಎದೆ ಸೀಳಿದಾಗ ನಮಗೆ ಆಘಾತವಾಯಿತು. ಅಲ್ಲಿ ಒಂದಲ್ಲ, ಸಾವಿರ ಬಗೆಯ ವಿಷಗಳು ತುಂಬಿದ್ದವು. ನಾವು ಆತನ ಮಿದುಳಿನ ಪರೀಕ್ಷೆ ನಡೆಸಿದಾಗ ಅಲ್ಲೂ ವಿಷವೇ ತುಂಬಿತ್ತು. ನಾವು ಬಹಳ ಪ್ರಯಾಸಪಟ್ಟು ನಮಗೆ ಸಾಧ್ಯವಿರುವಷ್ಟು ಆ ವಿಷವನ್ನೆಲ್ಲಾ ತೆಗೆದು ಆತನನ್ನು ಹೇಗೂ ರಕ್ಷಿಸಿದೆವು. ಆದರೆ ಈ ಕಾರ್ಯಾಚರಣೆಯಲ್ಲಿ ನಮ್ಮ ಅವಸ್ಥೆ ಹೀಗಾಯಿತು ನೋಡಿ’’ ಎನ್ನುತ್ತಾ ವೈದ್ಯರು ತಮ್ಮ ಅನುಭವ ಹಂಚಿಕೊಂಡರು. ಆತನ ಎದೆಯಲ್ಲಿ ವಿಷ ಬಿಟ್ಟರೆ ಮತ್ತೇನೂ ಇರಲಿಲ್ವೆ ಡಾಕ್ಟ್ರೇ? ಎಂದು ಮುಲ್ಲಾಗಳು ಕುತೂಹಲದಿಂದ ಕೇಳಿದರು. ದ್ವೇಷ ಎಂಬ ಎರಡೂವರೆ ಅಕ್ಷರಗಳು ಮಾತ್ರ ಕಾಣಲು ಸಿಕ್ಕವು ಎನ್ನುತ್ತಾ ವೈದ್ಯರು ಮತ್ತೆ ವಾಕರಿಸುತ್ತಾ ಶೌಚಾಲಯದತ್ತ ಧಾವಿಸಿದರು.
ಮರುದಿನ ಸಂಜೆ ಸೆಂಟಿ ಸ್ವಲ್ಪ ಚೇತರಿಸಿಕೊಂಡಾಗ ಆಸ್ಪತ್ರೆಯವರು ಅವನನ್ನು ಮಾತನಾಡಿಸಿ, ಅವನಿಂದ ಮಾಹಿತಿ ಪಡೆದು ಅವನ ಮನೆಯವರನ್ನು ಸಂಪರ್ಕಿಸಿದರು. ಮನೆಯವರು ತಡ ರಾತ್ರಿ ಬಂದು ತಲುಪಿದರು. ನಾಲ್ಕೈದು ದಿನಗಳ ಬಳಿಕ ಸೆಂಟಿ ಐಸಿಯುನಿಂದ ಹೊರ ಬಂದ ಬಳಿಕ ಅವರೆಲ್ಲಾ ಸೆಂಟಿಯೊಡನೆ ಮಾತನಾಡಿ, ಅವನ ಈ ದುಸ್ಥಿತಿಗೆ ಕಾರಣವೇನು ಎಂಬುದನ್ನು ಕಂಡು ಹಿಡಿಯಲು ಪ್ರಯತ್ನಿಸಿದರು. ಮುಲ್ಲಾಗಳು ಪ್ರತಿದಿನ ಒಂದಿಷ್ಟು ಹಣ್ಣು ಹಂಪಲುಗಳೊಂದಿಗೆ ಬಂದು ಅವನ ಆರೋಗ್ಯದ ಕುರಿತು ವಿಚಾರಿಸುತ್ತಿದ್ದರು. ಕೊನೆಗೆ, ಸೆಂಟಿಯ ವಿದ್ಯಾವಂತ ಬಂಧುವೊಬ್ಬರು ಸೆಂಟಿಯ ಜೀವ ಉಳಿಸಿದ ಆ ಮುಲ್ಲಾಗಳಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತಾ, ಸೆಂಟಿಯ ಪ್ರಸ್ತುತ ಹೀನಾಯ ಸ್ಥಿತಿಯ ಹಿನ್ನೆಲೆಯನ್ನು ಹೀಗೆಂದು ವಿವರಿಸಿದರು:
ಸೆಂಟಿ ರಾಕ್ಷಸ ಸಂಘಕ್ಕೆ ಸೇರಿದವನು. ರಾಕ್ಷಸ ಸಂಘದ ಮೂಲಕ ತಾನು ಒಂದು ದಿನ ರಾಜ್ಯದ ದೊಡ್ಡ ನಾಯಕನಾಗಿ ಬಿಡುತ್ತೇನೆ ಎಂದು ಸದಾ ಕನಸು ಕಾಣುತ್ತಿದ್ದವನು. ರಾಕ್ಷಸ ಸಂಘ ಮತ್ತದರ ಹಲವು ಅಕ್ರಮ ಕೂಸುಗಳ ಪರವಾಗಿ ಬೆಂಕಿಯುಗುಳುವ ದ್ವೇಷ ಭಾಷಣಗಳನ್ನು ಮಾಡುತ್ತಿದ್ದವನು. ದ್ವೇಷ ಭಾಷಣ ಮಾಡಿ ಸಮಾಜವನ್ನು ಒಡೆದು ಜನರನ್ನು ಪರಸ್ಪರ ರಕ್ತಪಾತಕ್ಕೆ ಇಳಿಸುವುದೊಂದೇ ತನ್ನ ರಾಜಕೀಯ ಉದ್ಧಾರಕ್ಕಿರುವ ದಾರಿ ಎಂದು ನಂಬಿದವನು. ಅವನ ಈ ನಂಬಿಕೆ ತಕ್ಕ ಮಟ್ಟಿಗೆ ನಿಜವೂ ಆಗಿತ್ತು. ಅವನಿಗೆ ಸ್ವಲ್ಪ ಮಟ್ಟಿನ ಅಧಿಕಾರವೂ ಸಿಕ್ಕಿತ್ತು. ಪಕ್ಷದೊಳಗೂ ಪದೋನ್ನತಿ ಪ್ರಾಪ್ತವಾಗಿತ್ತು. ವರ್ಷಗಳೆದಂತೆ ತನ್ನ ರಾಕ್ಷಸ ಸಂಘ ಮತ್ತದರ ರಾಜಕೀಯ ವಿಷವೃಕ್ಷವು ಬಲಪಡೆಯುತ್ತಿರುವುದನ್ನು ಕಂಡು ಅವನ ಮಹತ್ವಾಕಾಂಕ್ಷೆ ಕೂಡಾ ವಿಪರೀತ ಬೆಳೆದಿತ್ತು. ಆದರೆ ಇತ್ತೀಚೆಗೆ ತನಗೆ ತನ್ನ ರಾಕ್ಷಸ ಪಡೆಗೆ ಮತ್ತು ಅದರ ರಾಜಕೀಯ ವೃಕ್ಷಕ್ಕೆ ಎದುರಾದ ಹಿನ್ನಡೆಗಳಿಂದಾಗಿ ಅವನು ತುಂಬಾ ನಿರಾಶನಾಗಿ ಬಿಟ್ಟಿದ್ದ. ಒಂದೆಡೆ ಪಕ್ಷದೊಳಗಿನ ಒಳಜಗಳಗಳು, ಪರಸ್ಪರ ಕಾಲೆಳೆಯುವ ಸಂಸ್ಕೃತಿ, ಬಹಿರಂಗವಾಗಿ ಬಿಟ್ಟ ಹಲವು ಹೊಲಸು ಹಗರಣಗಳು, ಹರಿದು ಚಿಂದಿಯಾದ ಧರ್ಮರಕ್ಷಕ ಮುಖವಾಡ ಇತ್ಯಾದಿಗಳಿಂದಾಗಿ ಅವನ ಮೂಡ್ ಹಾಳಾಗಿತ್ತು. ಟೆನ್ಷನ್ ತೀವ್ರವಾಗಿತ್ತು. ಬೀಪಿ ನಿಯಂತ್ರಣ ಮೀರಿತ್ತು. ಅಯೋಧ್ಯೆಯ ಚಂದಾ ದರೋಡೆಯ ಹಗರಣ ಬಯಲಾದಂತೆ ಜನರು ಇವನ ಮುಖವಾಡ ಬಿಟ್ಟು ಮುಖಕ್ಕೇ ಉಗುಳತೊಡಗಿದ್ದರು. ಎಪ್ಸ್ ಟೀನ್ ಫೈಲುಗಳು, ಎಥೆನಾಲ್ ಹಗರಣ, ಪೇಪರ್ ಲೀಕ್.... ಹೀಗೆ ಒಂದೊಂದು ಹಗರಣ ಹೊರಬರುತ್ತಿದ್ದಂತೆ ಜನರು ರಾಕ್ಷಸ ಸಂಘದವರು ಕಲಿಸಿಕೊಟ್ಟಿದ್ದ ಬೇರೆಲ್ಲಾ ಉನ್ಮಾದದ ಘೋಷಣೆಗಳನ್ನು ಮರೆತು ಬಿಟ್ಟಿದ್ದರು. ಎಲ್ಲೆಂದರಲ್ಲಿ ಕೇವಲ ಛೀ ಛೀ, ಥೂ ಥೂ ಎಂಬ ನಿಂದನೆ ಮಾತ್ರ ಮೊಳಗುತ್ತಿತ್ತು. ತನ್ನ ಬಗ್ಗೆ ಹಾಗೂ ರಾಕ್ಷಸ ಸಂಘ ಮತ್ತದರ ಅಕ್ರಮಕೂಸುಗಳ ಬಗ್ಗೆ ಜನರೆಲ್ಲಾ ಆಡುತ್ತಿರುವ ನಿರಾಶೆ, ಹತಾಶೆ, ಭ್ರಮನಿರಸನ, ತಾತ್ಸಾರ ಮತ್ತು ಆಕ್ರೋಶ ತುಂಬಿದ ಮಾತುಗಳನ್ನು ಕೇಳಿಕೇಳಿ ಅವನ ಕೊಳೆತ ಮಿದುಳು ಬಾತುಹೋಗಿತ್ತು. ಸಾಲದ್ದಕ್ಕೆ ಕಾಕ್ರೋಚ್ ಪಕ್ಷದ ಉದಯ ಮತ್ತು ತ್ವರಿತವಾಗಿ ಹೆಚ್ಚುತ್ತಿರುವ ಆ ಪಕ್ಷದ ಜನಪ್ರಿಯತೆ ಸೆಂಟಿಗೆ ಹುಚ್ಚು ಹಿಡಿಸಿತ್ತು. ರಾಕ್ಷಸ ಸಂಘದವರು ಬಲಿತೆಗೆದುಕೊಳ್ಳಬಯಸಿದ್ದ ಹೊಸ ಪೀಳಿಗೆಯವರು ನಾವು ಬಲಿಯಾಗಲು ತಯಾರಿಲ್ಲ ಎನ್ನುತ್ತಾ, ಪ್ರಶ್ನೆಗಳನ್ನು ಕೇಳಲು ಆರಂಭಿಸಿದ್ದು ಹೇಗೆ ಎಂಬುದು ಅವನಿಗೆ ಅರ್ಥವಾಗುತ್ತಿರಲಿಲ್ಲ. ಹೊಸಪೀಳಿಗೆಯವರು ಕೇಳುತ್ತಿರುವ ಒಂದೊಂದು ತೀಕ್ಷ್ಣ ಪ್ರಶ್ನೆ ಕೂಡಾ ಅವನ ಬಾಲಕ್ಕೆ ಬೆಂಕಿ ಹಚ್ಚುತ್ತಿತ್ತು.
ಸೆಂಟಿ ತನ್ನ ಜೀವಮಾನವನ್ನೆಲ್ಲಾ ಧರ್ಮ ರಕ್ಷಕನ ಮುಖವಾಡ ಧರಿಸಿಕೊಂಡು ಮಾನವ ವಿರೋಧಿ ಮನುವಾದದ ಪ್ರಚಾರ ಮತ್ತು ಸುಳ್ಳು, ವದಂತಿ, ದ್ವೇಷ, ಹಿಂಸೆ ಹಾಗೂ ಅಪರಾಧಕೃತ್ಯಗಳ ಪ್ರಸಾರದಲ್ಲೇ ಸವೆಸಿದವನು. ರಾಕ್ಷಸ ಸಂಘ ಮತ್ತದರ ಅಕ್ರಮ ಕೂಸುಗಳನ್ನು ಮತ್ತು ಅವುಗಳ ನಾಯಕರನ್ನು ವೈಭವೀಕರಿಸುವುದಕ್ಕಾಗಿಯೇ ವೇತನ ಪಡೆಯುತ್ತಾ ಬಂದವನು. ಹಾಗೆಯೇ, ದ್ವೇಷಸಂಘದ ಜಾಲಕ್ಕೆ ಬೀಳದ ಎಲ್ಲರನ್ನೂ ಸಾರಾಸಗಟಾಗಿ ದೇಶದ್ರೋಹಿಗಳು, ಧರ್ಮವಿರೋಧಿಗಳು ಎಂದೆಲ್ಲಾ ಕರೆದು ಅದಕ್ಕಾಗಿ ಧಾರಾಳ ಪ್ರತಿಫಲವನ್ನೂ ಪಡೆದವನು. ಅವನ ಮಟ್ಟಿಗೆ ದ್ವೇಷ ಪ್ರಸಾರ ಮತ್ತು ಕಕ್ಕಸಿಗೂ ಒಗ್ಗದ ಕೊಳಕು ಭಾಷೆಯೇ ಪ್ರಧಾನ ಜೀವನೋಪಾಯವಾಗಿತ್ತು. ಬೇರಾವುದೇ ವಿದ್ಯೆಯಾಗಲಿ, ಕಲೆಯಾಗಲಿ, ಪ್ರತಿಭೆಯಾಗಲಿ ಇಲ್ಲದ ಆತ, ಅಷ್ಟೆಲ್ಲಾ ಹುದ್ದೆ, ಪದವಿ, ಅಧಿಕಾರಗಳನ್ನೆಲ್ಲ ಪಡೆದದ್ದು, ಅಷ್ಟೆಲ್ಲಾ ಅಕ್ರಮ ಆಸ್ತಿ ಮಾಡಿಕೊಂಡದ್ದು, ತನ್ನ ಕಕ್ಕಸು ನಾಲಗೆ ಮತ್ತು ಮಲಮಯ ಭಾಷೆಯ ಮೂಲಕವೇ. ದ್ವೇಷ ಕಾರಿದರೆ ವೋಟು ಸಿಗುತ್ತದೆ, ಹಿಂದೂ-ಮುಸ್ಲಿಮ್ ಎಂದು ಜನರನ್ನು ವಿಂಗಡಿಸುವ ತಂತ್ರ ಹೂಡುತ್ತಲಿದ್ದರೆ ಜನರು ತಮ್ಮ ಬೇರೆಲ್ಲ ಅಗತ್ಯಗಳನ್ನು ಮತ್ತು ತಮ್ಮ ಎಲ್ಲ ನೈಜ ಸಮಸ್ಯೆಗಳನ್ನೆಲ್ಲಾ ಮರೆತು ದ್ವೇಷದ ಅಮಲಿನಲ್ಲಿರುತ್ತಾರೆ ಎಂಬೊಂದು ಮಾರಕ ನಂಬಿಕೆಯನ್ನು ರಾಕ್ಷಸ ಸಂಘದ ಶಾಖೆಗಳಲ್ಲಿ ಬಾಲ್ಯದಲ್ಲೇ ಅವನ ಮನದಾಳದಲ್ಲಿ ಬಿತ್ತಲಾಗಿತ್ತು. ಮೊನ್ನೆಮೊನ್ನೆಯಷ್ಟೇ ಅವನು ನಿದ್ದೆಯಲ್ಲಿ ‘ಹಿಂದೂ - ಮುಸ್ಲಿಮ್, ಹಿಂದೂ ಮುಸ್ಲಿಮ್’ ಎಂದು ಪದೇಪದೇ ಜೋರಾಗಿ ಚೀರಾಡುತ್ತಿದ್ದಾಗ ರೋಸಿಹೋಗಿದ್ದ ಮನೆಯವರು ಹಳೆಯ ಚಪ್ಪಲಿಯಲ್ಲಿ ಮುಖಕ್ಕೆ ನಾಲ್ಕೇಟು ಕೊಟ್ಟು ದರದರನೆ ಎಳೆದುಕೊಂಡು ಹೋಗಿ ಹಟ್ಟಿಯಲ್ಲಿ ಮಲಗಿಸಿ ಬಂದಿದ್ದರಂತೆ. ಅಲ್ಲೂ ಆತ ಕಣ್ಣು ಮುಚ್ಚಿದೊಡನೆ ಮತ್ತೆ ಅದೇ ಮಂತ್ರ ಕೂಗತೊಡಗಿದಾಗ ಎಮ್ಮೆಗಳು ಕೂಡಾ ಸಹನೆ ಕಳೆದುಕೊಂಡಿದ್ದವಂತೆ. ಕೊನೆಗೆ ಅವುಗಳೆಲ್ಲಾ ಒಂದಾಗಿ ತಮ್ಮ ಸೆಗಣಿಮಯ ಶ್ರೀಪಾದಗಳನ್ನು ಬಲವಾಗಿ ಪ್ರಯೋಗಿಸಿ ಸೆಂಟಿಯ ಬಾಯಿ ಮುಚ್ಚಿಸಿದ್ದವಂತೆ.
ಮರುದಿನ ಸೆಂಟಿ ತನ್ನ ಮೊಬೈಲ್ ತೆರೆದಾಗ ಅವನಿಗೆ ಮತ್ತಷ್ಟು ಆಘಾತವಾಗಿತ್ತು. ಜನರು ಧರ್ಮ ಮತ್ತು ದೇವರನ್ನು ಬಿಟ್ಟು ದೇವರುಗಳ ಹೆಸರಲ್ಲಿ ಧಾರ್ಮಿಕ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಚಂದಾ ದರೋಡೆಗಳ ಬಗ್ಗೆ ಚರ್ಚಿಸುತ್ತಿದ್ದರು. ದೇವರ ಹೆಸರಲ್ಲಿ ವೋಟು ಕೊಳ್ಳೆ ಹೊಡೆದವರು ಇದೀಗ ದೇವರಿಗೆಂದು ಜನರು ಶೃದ್ಧಾಪೂರ್ವಕ ಅರ್ಪಿಸಿದ ಹರಕೆ, ಕಾಣಿಕೆಗಳನ್ನೆಲ್ಲಾ ದೋಚುತ್ತಿರುವುದರ ವಿರುದ್ಧ ಸಮಾಜದಲ್ಲಿ ಎಲ್ಲಾ ಕಡೆ ಭಾರೀ ಆಕ್ರೋಶ ಮೆರೆದಿತ್ತು. ಪೇಪರ್ ಲೀಕ್ ವಿರುದ್ಧ ವಿದ್ಯಾರ್ಥಿ ಸಮುದಾಯದವರೆಲ್ಲಾ ಬೀದಿಗಿಳಿದಿದ್ದರು. ಯಾರೆಷ್ಟು ಪ್ರಯತ್ನಿಸಿದರೂ ಅವರು ಹಿಂದೂ-ಮುಸ್ಲಿಮ್ ವಿದ್ವೇಷದ ಮಂತ್ರವನ್ನು ತಮ್ಮ ಹತ್ತಿರವೂ ಸುಳಿಯಲು ಬಿಡದೆ ತಮ್ಮ ಸಮಸ್ಯೆಯ ಬಗ್ಗೆ ಮಾತ್ರ ಮಾತನಾಡುತ್ತಿದ್ದರು. ಪೆಟ್ರೋಲ್ ವಾಹನಗಳ ಚಾಲಕರು ಮತ್ತು ಮಾಲಕರು ಎಥೆನಾಲ್‌ನಿಂದಾಗಿ ತಮ್ಮ ವಾಹನಗಳಿಗೆ ಆಗುತ್ತಿರುವ ಹಾನಿಯ ಬಗ್ಗೆ ತೀವ್ರ ಕಳವಳ ಪ್ರಕಟಿಸುತ್ತಿದ್ದರು. ನಮ್ಮ ರಸ್ತೆಗಳನ್ನು ನಾಶಮಾಡಿದ ನೀವು ಇದೀಗ ನಮ್ಮ ವಾಹನಗಳನ್ನು ನಾಶ ಮಾಡಹೊರಟಿದ್ದೀರೆಂದು ರಾಕ್ಷಸ ಪಡೆಯವರನ್ನು ಮೂದಲಿಸತೊಡಗಿದ್ದರು. ಜಂತರ್ ಮಂತರ್ ಚಳವಳಿಯಿಂದ ಪ್ರೇರಣೆ ಪಡೆದು ದೇಶದ ಇತರೆಡೆಗಳಲ್ಲೂ ಜನರು ಹೋರಾಟಕ್ಕಿಳಿದಿದ್ದರು. ಜೆನ್ ಝಿಯವರು ಮಾತ್ರವಲ್ಲ ಅವರ ಹೆತ್ತವರು ಕೂಡಾ ರಾಕ್ಷಸ ಪಡೆಗೆ ಶಾಪಹಾಕತೊಡಗಿದ್ದರು. ಈ ಹೊಸ ಸನ್ನಿವೇಶದಿಂದಾಗಿ ಸೆಂಟಿಗೆ ತಾನು ಕೆಲವು ದಶಕಗಳಿಂದ ಸಾಕುತ್ತ ಬಂದ ತನ್ನ ಸ್ವಪ್ನಗಳು ಮತ್ತು ಮಹತ್ವಾಕಾಂಕ್ಷೆಗಳೆಲ್ಲಾ ಮಣ್ಣುಪಾಲಾಗುತ್ತಿವೆ ಎಂದು ಅನಿಸತೊಡಗಿತ್ತು. ಆದ್ದರಿಂದಲೇ ನಿತ್ಯ ಒಂದೆರಡು ಲೀಟರ್ ಮದ್ಯ ಸೇವಿಸುತ್ತಿದ್ದ ಸೆಂಟಿ ಆ ದಿನ ಗ್ಯಾಲನ್ ಗಟ್ಟಲೆ ಕುಡಿದು ಬಿಟ್ಟಿದ್ದ.
ಈ ಕಥೆ ಕೇಳಿದ ಮುಲ್ಲಾಗಳು ತುಂಬಾ ದುಃಖಿತರಾದರು. ಅವರಿಗೆ ಸೆಂಟಿಯ ಹಿನ್ನೆಲೆಗಿಂತ ಅವನ ಆರೋಗ್ಯ ಮುಖ್ಯವಾಗಿತ್ತು. ದೇವರು ಅವನಿಗೆ ಆಯುರಾರೋಗ್ಯ ದಯಪಾಲಿಸಲಿ, ಅವನಿಗೆ ಸದ್ಬುದ್ಧಿ ನೀಡಲಿ, ಅವನ ಎದೆ, ತಲೆ ಎಲ್ಲಾ ಸರ್ವಬಗೆಯ ವಿಷಮತ್ತು ಮಾಲಿನ್ಯಗಳಿಂದ ಮುಕ್ತವಾಗಿ ನಿರ್ಮಲವಾಗಿರಲಿ ಎಂದು ನಾವು ಪ್ರಾರ್ಥಿಸುತ್ತೇವೆ ಎಂದರು. ಅವರು ಸೆಂಟಿಯ ಬಳಿಗೆ ಹೋಗಿ ಅವನ ಚರಂಡಿ ಅನುಭವದ ಕುರಿತು ಏನನ್ನೂ ನೆನಪಿಸದೆ, ದೇವರು ನಿಮಗೆ ಒಳ್ಳೆಯದನ್ನು ಮಾಡಲಿ ಎನ್ನುತ್ತಾ ಹೊರಟುಹೋದರು. ಸೆಂಟಿ ಏನೂ ಅರ್ಥವಾಗದ ಸ್ಥಿತಿಯಲ್ಲಿದ್ದ. ತನ್ನ ಎದೆಮೇಲೆ ಕೈ ಇಟ್ಟುಕೊಂಡು ತಬ್ಬಿಬ್ಬಾಗಿ, ತನ್ನನ್ನು ಹರಸಿದ ಆ ಮುಲ್ಲಾಗಳು ಹೋದ ದಾರಿಯತ್ತಲೇ ನೋಡುತ್ತಾ ಕೂತಿದ್ದ. ಅಷ್ಟರಲ್ಲೇ ಅಲ್ಲಿಗೆ ಬಂದ ಅವನ ಬಂಧುಗಳು, ‘‘ನೋಡಪ್ಪಾ ಆ ಮುಲ್ಲಾಗಳು ಆಸ್ಪತ್ರೆಯವರಿಗೆ ಡೆಪಾಸಿಟ್ ಆಗಿ ಕೊಟ್ಟಿದ್ದ ಮೂರು ಲಕ್ಷ ರೂಪಾಯಿಗಳನ್ನು ಅವರಿಗೆ ಮರಳಿಸಲು ಪ್ರಯತ್ನಿಸಿದೆವು. ಆದರೆ ಅವರು ಅದನ್ನು ಸ್ವೀಕರಿಸಲು ಸುತಾರಾಂ ಒಪ್ಪಲಿಲ್ಲ’’ ಎಂದರು. ಸೆಂಟಿ ಮರಿ ಮತ್ತಷ್ಟು ತಬ್ಬಿಬ್ಬಾದ.
ಚೇಳಯ್ಯ






