ನೋವು ನಿವಾರಕಗಳು ಮತ್ತು ಆ್ಯಂಟಿಬಯಾಟಿಕ್ ಗಳು ಕಿಡ್ನಿಗೆ ಹಾನಿ ಮಾಡಬಲ್ಲವೇ? ಭಾರತದ ಔಷಧ ನಿಯಂತ್ರಕರು ಎಚ್ಚರಿಕೆ ನೀಡಿದ್ದೇಕೆ?

Photo: magnific
ನೋವು ನಿವಾರಕಗಳು, ಅದರಲ್ಲೂ ವಿಶೇಷವಾಗಿ ಸ್ಟೀರಾಯ್ಡ್ ರಹಿತ ಊತ ಮತ್ತು ನೋವನ್ನು ಕಡಿಮೆ ಮಾಡುವ ಔಷಧಗಳನ್ನು (NSAIDs) ಮತ್ತು ಆ್ಯಂಟಿಬಯಾಟಿಕ್ ಗಳನ್ನು ಎಲ್ಲೆಂದರಲ್ಲಿ ಮನಬಂದಂತೆ ಬಳಸುವುದರಿಂದ ಉಂಟಾಗುವ ಅಪಾಯಗಳ ಬಗ್ಗೆ ಕೇಂದ್ರ ಔಷಧ ಮಾನದಂಡ ನಿಯಂತ್ರಣ ಸಂಸ್ಥೆ (CDSCO) ಎಚ್ಚರಿಕೆ ನೀಡಿದೆ. ಇವುಗಳ ಅನುಚಿತ ಬಳಕೆಯಿಂದ ಆಗುವ ತೊಂದರೆಗಳನ್ನು ಸಂಸ್ಥೆ ಎತ್ತಿ ತೋರಿಸಿದೆ.
ಸೆಪ್ಟೆಂಬರ್ 22ರಂದು ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿರುವ ಸುತ್ತೋಲೆಯಲ್ಲಿ, ವೈದ್ಯರು, ಫಾರ್ಮಸಿಗಳು, ಚಿಲ್ಲರೆ ವ್ಯಾಪಾರಿಗಳು, ವಿತರಕರು ಮತ್ತು ಆಸ್ಪತ್ರೆಗಳು ಈ ಔಷಧಗಳನ್ನು ಸರಿಯಾದ ರೀತಿಯಲ್ಲಿ ಬಳಸುವುದನ್ನು ಹಾಗೂ ವೈದ್ಯರ ಚೀಟಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದನ್ನು ಖಚಿತಪಡಿಸಿಕೊಳ್ಳುವಂತೆ ಔಷಧ ನಿಯಂತ್ರಕರು ಸೂಚಿಸಿದ್ದಾರೆ. ಈ ಸುತ್ತೋಲೆಗೆ “ನೋವು ನಿವಾರಕಗಳು, ಆ್ಯಂಟಿಬಯಾಟಿಕ್ ಗಳ ಅವೈಜ್ಞಾನಿಕ ಬಳಕೆ ಮತ್ತು ಅದರಿಂದ ದೀರ್ಘಕಾಲದ ಕಿಡ್ನಿ ಕಾಯಿಲೆ (CKD) ಬರುವ ಅಪಾಯ” ಎಂದು ಹೆಸರಿಸಲಾಗಿದೆ.
►CDSCO ಯಾವ ಔಷಧಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ?
ಈ ಎಚ್ಚರಿಕೆಯು ಮುಖ್ಯವಾಗಿ ಸಾಮಾನ್ಯವಾಗಿ ಬಳಸುವ ನೋವು ನಿವಾರಕಗಳ ವರ್ಗಕ್ಕೆ ಸೇರಿದ ಸ್ಟೀರಾಯ್ಡ್ರಹಿತ ಊತ ಮತ್ತು ನೋವನ್ನು ಕಡಿಮೆ ಮಾಡುವ ಔಷಧಗಳನ್ನು (NSAIDs) ಕುರಿತದ್ದಾಗಿದೆ.
NSAIDಗಳು ನೋವು, ಉರಿಯೂತ ಮತ್ತು ಜ್ವರವನ್ನು ಕಡಿಮೆ ಮಾಡುತ್ತವೆ. ಇವು ವ್ಯಾಪಕವಾಗಿ ಬಳಕೆಯಾಗುವ ನೋವು ನಿವಾರಕಗಳ ಗುಂಪಿಗೆ ಸೇರಿದ್ದರೂ, ವಿಶೇಷವಾಗಿ ಇವುಗಳನ್ನು ತಪ್ಪಾಗಿ ಅಥವಾ ದೀರ್ಘಕಾಲದವರೆಗೆ ಬಳಸಿದಾಗ ಅಪಾಯಮುಕ್ತವಾಗಿರುವುದಿಲ್ಲ.
ಈ ಸುತ್ತೋಲೆಯು ಬ್ಯಾಕ್ಟೀರಿಯಾದ ಸೋಂಕುಗಳನ್ನು ಗುಣಪಡಿಸಲು ಬಳಸುವ ಆ್ಯಂಟಿಬಯಾಟಿಕ್ ಗಳನ್ನು ಸಹ ಒಳಗೊಂಡಿದೆ.
ಆದರೆ, ಈ ಸಲಹೆಯು ಒಂದು ಪ್ರಮುಖ ವ್ಯತ್ಯಾಸವನ್ನು ಸ್ಪಷ್ಟಪಡಿಸಿದೆ. ಈ ಎರಡೂ ವರ್ಗದ ಔಷಧಗಳನ್ನು ತಪ್ಪಾಗಿ ಬಳಸಿದಾಗ ಅಡ್ಡಪರಿಣಾಮಗಳು ಉಂಟಾಗಬಹುದಾದರೂ, ಮೂತ್ರಪಿಂಡ ಕಾಯಿಲೆಯೊಂದಿಗೆ ಇವುಗಳ ಸಂಬಂಧವು ಒಂದೇ ರೀತಿಯಾಗಿರುವುದಿಲ್ಲ.
►ಸಿಡಿಎಸ್ಸಿಒ ನೋವು ನಿವಾರಕಗಳ ಬಗ್ಗೆ ಏಕೆ ಎಚ್ಚರಿಕೆ ನೀಡುತ್ತಿದೆ?
ಮೂತ್ರಪಿಂಡದ ಸಮಸ್ಯೆಗಳಿಗೆ ತುತ್ತಾಗುವ ಹೆಚ್ಚಿನ ಅಪಾಯವಿರುವ ರೋಗಿಗಳಲ್ಲಿ, ನೋವು ನಿವಾರಕಗಳನ್ನು ಕಡಿಮೆ ಪ್ರಮಾಣದಲ್ಲಿ ಹಾಗೂ ಅತ್ಯಂತ ಕಡಿಮೆ ಅವಧಿಗೆ ಮಾತ್ರ ಬಳಸುವಂತೆ ನಿಯಂತ್ರಕರು ಸಲಹೆ ನೀಡಿದ್ದಾರೆ.
ಮೂತ್ರಪಿಂಡಗಳು ಹೆಚ್ಚಿನ ಪ್ರಮಾಣದ ರಕ್ತವನ್ನು ಸ್ವೀಕರಿಸಿ, ದೇಹದ ದ್ರವ ಹಾಗೂ ಎಲೆಕ್ಟ್ರೋಲೈಟ್ ಸಮತೋಲನವನ್ನು ಕಾಪಾಡಿಕೊಳ್ಳುವ ಮೂಲಕ ತ್ಯಾಜ್ಯವನ್ನು ಸೋಸಿ ಹೊರಹಾಕುತ್ತವೆ. ಕೆಲವು ನೋವು ನಿವಾರಕ ಔಷಧಗಳು ಮೂತ್ರಪಿಂಡಗಳಿಗೆ ರಕ್ತದ ಹರಿವನ್ನು ಕಾಪಾಡಲು ಸಹಾಯ ಮಾಡುವ ಕಾರ್ಯವಿಧಾನಗಳಿಗೆ ಅಡ್ಡಿಪಡಿಸಬಹುದು. ಮೂತ್ರಪಿಂಡಗಳ ಕಾರ್ಯನಿರ್ವಹಣೆಯಲ್ಲಿ ಈಗಾಗಲೇ ತೊಂದರೆ ಇರುವವರಲ್ಲಿ ಅಥವಾ ಇತರ ಅಪಾಯಕಾರಿ ಅಂಶಗಳನ್ನು ಹೊಂದಿರುವವರಲ್ಲಿ ಇದು ಅತ್ಯಂತ ಗಂಭೀರವಾಗಬಹುದು.
ಮೂತ್ರಪಿಂಡದ ಕಾಯಿಲೆ ಹೊಂದಿರುವವರು ಅಥವಾ ಮೂತ್ರಪಿಂಡ ವೈಫಲ್ಯದ ಇತರ ಅಪಾಯಕಾರಿ ಅಂಶಗಳನ್ನು ಹೊಂದಿರುವವರು ಆ್ಯಂಟಿ-ಇನ್ಫ್ಲಮೇಟರಿ ಔಷಧಗಳನ್ನು ಬಳಸುವ ಮೊದಲು ತಮ್ಮ ವೈದ್ಯರಿಗೆ ಕಡ್ಡಾಯವಾಗಿ ತಿಳಿಸುವಂತೆ ಸಿಡಿಎಸ್ಸಿಒ ನಿರ್ದಿಷ್ಟವಾಗಿ ಸಲಹೆ ಮಾಡಿದೆ. ಅಲ್ಲದೆ, ಮೂತ್ರಪಿಂಡದ ತೊಂದರೆ, ನಿರ್ಜಲೀಕರಣ (ದೇಹದಲ್ಲಿ ನೀರಿನಂಶ ಕಡಿಮೆಯಾಗುವುದು), ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಇವುಗಳ ಬಳಕೆಯಿಂದ ಅಪಾಯವನ್ನು ಹೆಚ್ಚಿಸುವ ಇತರ ಪರಿಸ್ಥಿತಿಗಳನ್ನು ಹೊಂದಿರುವ ರೋಗಿಗಳಿಗೆ ಈ ಔಷಧಗಳನ್ನು ಶಿಫಾರಸು ಮಾಡುವಾಗ ವೈದ್ಯರು ವಿಶೇಷ ಮುನ್ನೆಚ್ಚರಿಕೆಗಳನ್ನು ವಹಿಸುವಂತೆ ಕೋರಿದೆ.
“ಮೂತ್ರಪಿಂಡಗಳಿಗೆ ರಕ್ತದ ಹರಿವನ್ನು ಕಾಪಾಡಲು ಸಹಾಯ ಮಾಡುವ ಪ್ರೊಸ್ಟಗ್ಲಾಂಡಿನ್ ಉತ್ಪಾದನೆಯನ್ನು ಈ ಔಷಧಗಳು ತಡೆಯುವುದರಿಂದ, ಅವು ಮೂತ್ರಪಿಂಡದ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತವೆ. ಆರೋಗ್ಯ ಸಮಸ್ಯೆಗಳಿಗೆ ಸುಲಭವಾಗಿ ತುತ್ತಾಗುವವರಲ್ಲಿ ಇದು ತೀವ್ರವಾದ ಮೂತ್ರಪಿಂಡ ಹಾನಿಗೆ (AKI), ದೇಹದಲ್ಲಿ ನೀರು ಮತ್ತು ಸೋಡಿಯಂ ಉಳಿಯಲು, ರಕ್ತದೊತ್ತಡ ಹೆಚ್ಚಾಗಲು ಮತ್ತು ಅಸ್ತಿತ್ವದಲ್ಲಿರುವ ಮೂತ್ರಪಿಂಡ ಕಾಯಿಲೆ ಉಲ್ಬಣಗೊಳ್ಳಲು ಕಾರಣವಾಗಬಹುದು” ಎಂದು ಪುಣೆಯ ಡಾ. ಡಿ.ವೈ. ಪಾಟೀಲ್ ವೈದ್ಯಕೀಯ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಅಮಿತಾಬ್ ಬ್ಯಾನರ್ಜಿ ಎಚ್ಚರಿಸಿದ್ದಾರೆ.
ಡಾ. ಬ್ಯಾನರ್ಜಿ ಅವರ ಪ್ರಕಾರ, ನೋವು ನಿವಾರಕಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಮತ್ತು ದೀರ್ಘಕಾಲದವರೆಗೆ ಬಳಸುವುದರಿಂದ ಗ್ಲೋಮೆರುಲರ್ ಶೋಧನೆ ದರವು (GFR) ತಾತ್ಕಾಲಿಕವಾಗಿ ಕುಸಿಯಲು ಕಾರಣವಾಗಬಹುದು. (ಇದು ಮೂತ್ರಪಿಂಡದ ಅತಿ ಸೂಕ್ಷ್ಮ ರಕ್ತ ಸೋಸುವ ಘಟಕಗಳಾದ ಗ್ಲೋಮೆರುಲಿಗಳಿಂದ ಪ್ರತಿ ನಿಮಿಷಕ್ಕೆ ಸೋರಿಕೆಯಾಗುವ ದ್ರವದ ಪ್ರಮಾಣವಾಗಿದೆ).
►ಆ್ಯಂಟಿಬಯಾಟಿಕ್ ಬಳಕೆಯ ಕುರಿತಾದ ಸಲಹೆ ಏನು?
ಆ್ಯಂಟಿಬಯಾಟಿಕ್ ಗಳ ವಿಷಯವೇ ಬೇರೆ. ಇಲ್ಲಿ ಸಿಡಿಎಸ್ಸಿಒ (CDSCO) ಸುತ್ತೋಲೆಗೆ ಸ್ವಲ್ಪ ಹಿನ್ನೆಲೆಯ ಅಗತ್ಯವಿದೆ. ಆ್ಯಂಟಿ-ಇನ್ಫ್ಲಮೇಟರಿ ಔಷಧಗಳ ಬಳಕೆಯು ಮೂತ್ರಪಿಂಡಕ್ಕೆ ಹಾನಿ ಮಾಡಬಹುದಾದರೆ, ಆ್ಯಂಟಿಬಯಾಟಿಕ್ ಗಳ ಅನುಚಿತ ಬಳಕೆಯು ಮೂತ್ರಪಿಂಡಗಳಿಗೆ ಹಾನಿಕಾರಕವಾಗಿದೆ. ಆ್ಯಂಟಿಬಯಾಟಿಕ್ ಗಳ ಕುರಿತು ನಿಯಂತ್ರಕರ ಸಂದೇಶವು ಇನ್ನಷ್ಟು ಸ್ಪಷ್ಟವಾಗಿದೆ. ಅದೇನೆಂದರೆ, ಸ್ವಯಂ ಚಿಕಿತ್ಸೆಗಾಗಿ ಔಷಧಿಗಳನ್ನು ತೆಗೆದುಕೊಳ್ಳಬೇಡಿ.
ಆ್ಯಂಟಿಬಯಾಟಿಕ್ ಗಳು ಬ್ಯಾಕ್ಟೀರಿಯಾದ ಸೋಂಕುಗಳ ವಿರುದ್ಧ ಕೆಲಸ ಮಾಡುತ್ತವೆ ಮತ್ತು ಹೆಚ್ಚಿನ ವೈರಲ್ ಸೋಂಕುಗಳನ್ನು ಗುಣಪಡಿಸುವುದಿಲ್ಲ. ಆದರೂ, ಕೇವಲ ಜ್ವರ, ಕೆಮ್ಮು ಅಥವಾ ಇತರ ಲಕ್ಷಣಗಳಿರುವ ಕಾರಣಕ್ಕಾಗಿ ಕೆಲವರು ನೆಗಡಿಯಂತಹ ಸಾಮಾನ್ಯ ವೈರಲ್ ಕಾಯಿಲೆಗಳಿಗೂ ಆ್ಯಂಟಿಬಯಾಟಿಕ್ ಗಳನ್ನು ತೆಗೆದುಕೊಳ್ಳುತ್ತಾರೆ.
ವೈದ್ಯಕೀಯವಾಗಿ ಅಗತ್ಯವಿಲ್ಲದಿದ್ದಾಗ ಆ್ಯಂಟಿಬಯಾಟಿಕ್ ಗಳನ್ನು ಬಳಸಬೇಡಿ ಎಂದು ಸಿಡಿಎಸ್ಸಿಒ ಸಲಹೆ ಮಾಡಿದೆ. ಅಲ್ಲದೆ, ಇತರರೊಂದಿಗೆ ಆ್ಯಂಟಿಬಯಾಟಿಕ್ ಗಳನ್ನು ಹಂಚಿಕೊಳ್ಳಬೇಡಿ ಅಥವಾ ಹಿಂದಿನ ಚೀಟಿಯಲ್ಲಿ ಉಳಿದುಕೊಂಡಿರುವ ಔಷಧಿಗಳನ್ನು ಬಳಸಬೇಡಿ ಎಂದು ಜನರಿಗೆ ಸೂಚಿಸಲಾಗಿದೆ.
ಬ್ಯಾಕ್ಟೀರಿಯಾಗಳು ತಾವೇ ಆ ಔಷಧಿಗಳನ್ನು ಎದುರಿಸುವ ಶಕ್ತಿಯನ್ನು ಪಡೆದುಕೊಳ್ಳುವ ಆಂಟಿಮೈಕ್ರೋಬಿಯಲ್ ಪ್ರತಿರೋಧ ಮತ್ತೊಂದು ಕಳವಳಕಾರಿ ಸಂಗತಿಯಾಗಿದೆ. ಸೂಕ್ತವಲ್ಲದ ರೀತಿಯಲ್ಲಿ ಆ್ಯಂಟಿಮೈಕ್ರೋಬಿಯಲ್ ಔಷಧಿಗಳನ್ನು ಬಳಸುವುದರಿಂದ ಈ ಪ್ರತಿರೋಧಕ ಶಕ್ತಿಯು ವೇಗವಾಗಿ ಬೆಳೆಯುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಶೀತ ಮತ್ತು ಇನ್ಫ್ಲುಯೆಂಜಾದಂತಹ ವೈರಲ್ ಸೋಂಕುಗಳಿಗೆ ಆ್ಯಂಟಿಬಯಾಟಿಕ್ ಗಳನ್ನು ಬಳಸಬಾರದು.
ಡಾ. ಬ್ಯಾನರ್ಜಿ ಅವರ ಪ್ರಕಾರ, ಈ ಸುತ್ತೋಲೆಯ ಪ್ರಮುಖ ಸಂದೇಶವು ಸಮಂಜಸವಾಗಿದೆ. ಜನರು ಆ್ಯಂಟಿಬಯಾಟಿಕ್ ಗಳನ್ನು ಎಲ್ಲೆಂದರಲ್ಲಿ, ಪುನಃ ಪುನಃ ಅಥವಾ ದೀರ್ಘಕಾಲದವರೆಗೆ ಬಳಸುವುದನ್ನು ತಪ್ಪಿಸಬೇಕು. ಯಾರೂ ಸ್ವಯಂ ಚಿಕಿತ್ಸೆ ಮಾಡಿಕೊಳ್ಳಬಾರದು. ಉತ್ತಮ ಚಿಕಿತ್ಸಾ ಫಲಿತಾಂಶಗಳನ್ನು ಪಡೆಯಲು ಹಾಗೂ ಅಡ್ಡಪರಿಣಾಮಗಳು ಮತ್ತು ಔಷಧ ಪ್ರತಿರೋಧವನ್ನು ಕಡಿಮೆ ಮಾಡಲು, ಆ್ಯಂಟಿಬಯಾಟಿಕ್ ಗಳನ್ನು ವೈದ್ಯರ ಸರಿಯಾದ ಮಾರ್ಗದರ್ಶನದಲ್ಲಿ, ಸೂಕ್ತ ಪ್ರಮಾಣದಲ್ಲಿ ಮತ್ತು ಅವಧಿಗೆ ಮಾತ್ರ ಸೂಚಿಸಬೇಕು.
“ಆ್ಯಂಟಿಬಯಾಟಿಕ್ ಗಳ ಎಲ್ಲೆಮೀರಿದ ಬಳಕೆಯಿಂದ ಸಮಾಜದ ಮಟ್ಟದಲ್ಲಿ ಎದುರಾಗುವ ಮುಖ್ಯ ಕಳವಳವೆಂದರೆ ಆಂಟಿಮೈಕ್ರೋಬಿಯಲ್ ಪ್ರತಿರೋಧ, ತಪ್ಪಾದ ಚಿಕಿತ್ಸೆ, ಔಷಧದ ಅಡ್ಡಪರಿಣಾಮಗಳು ಮತ್ತು ಅನಗತ್ಯವಾಗಿ ಆ್ಯಂಟಿಬಯಾಟಿಕ್ ಗಳಿಗೆ ಒಡ್ಡಿಕೊಳ್ಳುವುದೇ ಹೊರತು, ದಿನನಿತ್ಯದ ಆ್ಯಂಟಿಬಯಾಟಿಕ್ ಬಳಕೆಯು ತಾನಾಗಿಯೇ ದೀರ್ಘಕಾಲದ ಮೂತ್ರಪಿಂಡ ಕಾಯಿಲೆಗೆ (CKD) ಮುಖ್ಯ ಕಾರಣವಲ್ಲ” ಎಂದು ಅವರು ತಿಳಿಸಿದ್ದಾರೆ.
ಆದರೆ, ದಿನನಿತ್ಯದ ಆ್ಯಂಟಿಬಯಾಟಿಕ್ ಬಳಕೆಯು ತಾನಾಗಿಯೇ ದೀರ್ಘಕಾಲದ ಮೂತ್ರಪಿಂಡ ಕಾಯಿಲೆಗೆ ಪ್ರಮುಖ ಕಾರಣ ಎಂದು ಇದರರ್ಥವಲ್ಲ.
►ಹಾಗಾದರೆ ಮೂತ್ರಪಿಂಡಕ್ಕೆ ಇರುವ ನೈಜ ಅಪಾಯವೇನು?
ಆ್ಯಂಟಿಬಯಾಟಿಕ್ ಗಳು, ಆ್ಯಂಟಿ-ಇನ್ಫ್ಲಮೇಟರಿ ಔಷಧಗಳು (NSAIDs) ಮತ್ತು ದೀರ್ಘಕಾಲದ ಮೂತ್ರಪಿಂಡ ಕಾಯಿಲೆ (CKD) ಇವುಗಳ ನಡುವಿನ ಸಂಬಂಧವು ಒಂದೇ ರೀತಿಯಾಗಿಲ್ಲ ಎಂದು ಡಾ. ಬ್ಯಾನರ್ಜಿ ಹೇಳುತ್ತಾರೆ. “ಆ್ಯಂಟಿ-ಇನ್ಫ್ಲಮೇಟರಿ ಔಷಧಗಳು ಮತ್ತು ಆ್ಯಂಟಿಬಯಾಟಿಕ್ ಗಳೆರಡನ್ನೂ ಮೂತ್ರಪಿಂಡ ಕಾಯಿಲೆಯ ಅಪಾಯದೊಂದಿಗೆ ಒಟ್ಟಿಗೆ ಸೇರಿಸಿ ನೋಡುವುದು ಇದರ ಅತ್ಯಂತ ದೊಡ್ಡ ತಾತ್ವಿಕ ದೋಷವಾಗಿದೆ. ಇವೆರಡರ ನಡುವಿನ ಸಂಬಂಧವು ಒಂದೇ ಸಮನಾಗಿಲ್ಲ.”
ಆ್ಯಂಟಿ-ಇನ್ಫ್ಲಮೇಟರಿ ಔಷಧಗಳಿಂದ ಮೂತ್ರಪಿಂಡಕ್ಕೆ ಉಂಟಾಗುವ ಅಪಾಯವು ವೈದ್ಯಕೀಯವಾಗಿ ಸ್ಪಷ್ಟವಾಗಿ ಸಾಬೀತಾಗಿದೆ ಎಂದು ಬ್ಯಾನರ್ಜಿ ಎತ್ತಿ ತೋರಿಸುತ್ತಾರೆ. ವಿಶೇಷವಾಗಿ ಆರೋಗ್ಯ ಸಮಸ್ಯೆಗಳಿಗೆ ಸುಲಭವಾಗಿ ತುತ್ತಾಗುವವರಲ್ಲಿ ಅಥವಾ ಈಗಾಗಲೇ ಮೂತ್ರಪಿಂಡ ಕಾಯಿಲೆ ಇರುವವರಲ್ಲಿ ಇವುಗಳನ್ನು ದೀರ್ಘಕಾಲದವರೆಗೆ ಬಳಸುವುದರಿಂದ ಮೂತ್ರಪಿಂಡದ ಕಾಯಿಲೆಯು ಮತ್ತಷ್ಟು ಉಲ್ಬಣಗೊಳ್ಳಬಹುದು.
ಆ್ಯಂಟಿಬಯಾಟಿಕ್ ಗಳ ವಿಷಯಕ್ಕೆ ಬಂದರೆ, ಇವುಗಳ ಅನುಚಿತ ಬಳಕೆಯು ಆಂಟಿಮೈಕ್ರೋಬಿಯಲ್ ಪ್ರತಿರೋಧ, ಅಡ್ಡಪರಿಣಾಮಗಳು ಮತ್ತು ಅನಗತ್ಯ ಔಷಧ ಸೇವನೆಗೆ ಕಾರಣವಾಗಬಹುದು. ಇದರೊಂದಿಗೆ, ಕೆಲವು ನಿರ್ದಿಷ್ಟ ಆ್ಯಂಟಿಬಯಾಟಿಕ್ ಗಳು ಔಷಧ-ಸಂಬಂಧಿತ ಮೂತ್ರಪಿಂಡ ಹಾನಿಯನ್ನುಂಟುಮಾಡುವ ಸಾಮರ್ಥ್ಯವನ್ನೂ ಹೊಂದಿವೆ.
►ನೀವು ನೋವು ನಿವಾರಕಗಳು ಅಥವಾ ಆ್ಯಂಟಿಬಯಾಟಿಕ್ ಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕೇ?
ಇಲ್ಲ. ಈ ಔಷಧಿಗಳನ್ನು ಸಂಪೂರ್ಣವಾಗಿ ನಿಲ್ಲಿಸುವಂತೆ ಸಿಡಿಎಸ್ಸಿಒ ಸುತ್ತೋಲೆ ಯಾವುದೇ ಎಚ್ಚರಿಕೆ ನೀಡಿಲ್ಲ.
ಆ್ಯಂಟಿ-ಇನ್ಫ್ಲಮೇಟರಿ ಔಷಧಗಳು ಮತ್ತು ಆ್ಯಂಟಿಬಯಾಟಿಕ್ ಗಳೆರಡೂ ಅಧಿಕೃತ ಹಾಗೂ ಅತ್ಯಂತ ಮುಖ್ಯವಾದ ವೈದ್ಯಕೀಯ ಬಳಕೆಯನ್ನು ಹೊಂದಿವೆ. ಇವುಗಳನ್ನು ಯಾವಾಗ, ಯಾಕೆ, ಎಷ್ಟು ಪ್ರಮಾಣದಲ್ಲಿ ಮತ್ತು ಎಷ್ಟು ಅವಧಿಯವರೆಗೆ ಬಳಸಲಾಗುತ್ತದೆ ಎಂಬುದು ಇಲ್ಲಿ ಮುಖ್ಯವಾದ ವಿಷಯವಾಗಿದೆ.
ಯಾವುದೇ ವೈದ್ಯರ ಸಲಹೆಯಿಲ್ಲದೆ ಸಾರ್ವಜನಿಕರು ಆ್ಯಂಟಿ-ಇನ್ಫ್ಲಮೇಟರಿ ಔಷಧಗಳನ್ನು ಅಥವಾ ಆ್ಯಂಟಿಬಯಾಟಿಕ್ ಗಳನ್ನು ಎಲ್ಲೆಂದರಲ್ಲಿ ಅಥವಾ ದೀರ್ಘಕಾಲದವರೆಗೆ ತೆಗೆದುಕೊಳ್ಳಬಾರದು ಎಂದು ಸುತ್ತೋಲೆ ಕೋರಿದೆ. ಅಲ್ಲದೆ, ಅನೇಕ ಆ್ಯಂಟಿ-ಇನ್ಫ್ಲಮೇಟರಿ ಔಷಧಗಳು ‘ಶೆಡ್ಯೂಲ್ ಎಚ್’ ಅಡಿಯಲ್ಲಿ ಬರುತ್ತವೆ ಎಂಬುದನ್ನು ಇದು ನೆನಪಿಸುತ್ತದೆ. ಇದಕ್ಕೆ ವಿರುದ್ಧವಾಗಿ, ಹೆಚ್ಚಿನ ಆ್ಯಂಟಿಬಯಾಟಿಕ್ ಗಳು 1945ರ ಔಷಧ ನಿಯಮಗಳ ‘ಶೆಡ್ಯೂಲ್ ಎಚ್1’ ಅಡಿಯಲ್ಲಿ ಬರುತ್ತವೆ. ಅಂದರೆ, ವೈದ್ಯರ ಚೀಟಿ ಇದ್ದರೆ ಮಾತ್ರ ಇವುಗಳನ್ನು ಮಾರಾಟ ಮಾಡಲು ಸಾಧ್ಯ.
ನೋವು ನಿವಾರಕಗಳ ವಿಷಯದಲ್ಲಿ, ಪದೇ ಪದೇ ಅಥವಾ ದೀರ್ಘಕಾಲದವರೆಗೆ ಆ್ಯಂಟಿ-ಇನ್ಫ್ಲಮೇಟರಿ ಔಷಧಗಳನ್ನು ಬಳಸುವುದರಿಂದ ಎಚ್ಚರಿಕೆ ವಹಿಸಬೇಕು. ವಿಶೇಷವಾಗಿ ಮೂತ್ರಪಿಂಡ ಕಾಯಿಲೆ ಇರುವವರು, ನಿರ್ಜಲೀಕರಣಗೊಂಡವರು ಅಥವಾ ಇತರ ಅಪಾಯಕಾರಿ ಅಂಶಗಳನ್ನು ಹೊಂದಿರುವವರು ಎಚ್ಚರದಿಂದಿರಬೇಕು. ಆ್ಯಂಟಿಬಯಾಟಿಕ್ ಗಳಿಗೆ ಸಂಬಂಧಿಸಿದಂತೆ ಮುಖ್ಯ ಸಂದೇಶವೆಂದರೆ, ಸ್ವಯಂ ಚಿಕಿತ್ಸೆ ಮಾಡಿಕೊಳ್ಳಬೇಡಿ. ಬ್ಯಾಕ್ಟೀರಿಯಾದ ಸೋಂಕು ಇದ್ದಾಗ ಮಾತ್ರ ವೈದ್ಯರ ಸಲಹೆಯಂತೆ ಆ್ಯಂಟಿಬಯಾಟಿಕ್ ಗಳನ್ನು ಬಳಸಿ.
ಒಂದು ವೇಳೆ ರೋಗಲಕ್ಷಣಗಳು ಹಾಗೇ ಉಳಿದುಕೊಂಡರೆ ಅಥವಾ ಪದೇ ಪದೇ ಮರುಕಳಿಸಿದರೆ, ಮೂಲ ಕಾರಣವನ್ನು ಹುಡುಕದೆ ಮತ್ತೊಂದು ನೋವು ನಿವಾರಕ ಅಥವಾ ಆ್ಯಂಟಿಬಯಾಟಿಕ್ ತೆಗೆದುಕೊಳ್ಳುವುದು ಸರಿಯಾದ ಪರಿಹಾರವಾಗಲಿಕ್ಕಿಲ್ಲ.
ಸೌಜನ್ಯ: firstpost.com






