ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಮಹಾರಾಷ್ಟ್ರ ಸರ್ಕಾರದಿಂದ ದೇವಾಲಯ, ಸ್ಮಾರಕಗಳಿಗೆ 3000 ಕೋಟಿ!

PC: facebook.com/Ajitpawar
ಮುಂಬೈ: ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಮಹಾರಾಷ್ಟ್ರ ಸರ್ಕಾರ ಬುಧವಾರ ರಾಜ್ಯದ ದೇವಾಲಯ ಮತ್ತು ಸ್ಮಾರಕಗಳ ಪುನರುಜ್ಜೀವನಕ್ಕೆ ಸಂಬಂಧಿಸಿದ 2954 ಕೋಟಿ ರೂಪಾಯಿಗಳ ನೆರವು ನೀಡುವ ಯೋಜನೆಗೆ ಅನುಮೋದನೆ ನೀಡಿದೆ.
ಇದರಲ್ಲಿ 18ನೇ ಶತಮಾನದ ವೀರವನಿತೆ ರಾಣಿ ಅಹಲ್ಯಾಬಾಯಿ ಹೋಳ್ಕರ್ ಅವರ ಸ್ಮಾರಕವನ್ನು ಅವರ ಹುಟ್ಟೂರು ಅಹಲ್ಯಾನಗ್ರದ ಚೌಂಡಿ ಗ್ರಾಮದಲ್ಲಿ ಸಂರಕ್ಷಿಸುವ 681.3 ಕೋಟಿ ರೂಪಾಯಿಯ ಬೃಹತ್ ಯೋಜನೆ ಕೂಡಾ ಇದರಲ್ಲಿ ಸೇರಿದೆ. ರಾಣಿ ಅಹಲ್ಯಾಯಿಯವರ 300ನೇ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಅಹಲ್ಯಾನಗರದಲ್ಲಿ ಮೇ 6ರಂದು ನಡೆದ ಸಂಪುಟ ಸಭೆಯಲ್ಲಿ ಈ ಯೋಜನೆ ಘೋಷಿಸಲಾಗಿತ್ತು. ಮುಂದಿನ ಮೂರು ವರ್ಷಗಳಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಲಿದೆ.
ಇದೇ ಸಂಪುಟ ಸಭೆಯಲ್ಲಿ ರಾಜ್ಯದ ಏಳು ಯಾತ್ರಾಸ್ಥಳಗಳನ್ನು 5503 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಯೋಜನೆಗಳನ್ನು ಅನುಮೋದಿಸಲಾಗಿತ್ತು. 147.8 ಕೋಟಿ ವೆಚ್ಚದಲ್ಲಿ ಅಷ್ಟವಿನಾಯಕ ದೇವಾಲಯ ಅಭಿವೃದ್ಧಿ, 1865 ಕೋಟಿ ವೆಚ್ಚದಲ್ಲಿ ತುಳಜಾಭವಾನಿ ದೇವಾಲಯ ಅಭಿವೃದ್ಧಿ, 259.6 ಕೋಟಿ ವೆಚ್ಚದಲ್ಲಿ ಜ್ಯೋತಿಬಾ ದೇವಾಲಯ ಯೋಜನೆ, 275 ಕೋಟಿ ವೆಚ್ಚದಲ್ಲಿ ತ್ರಯಂಬಕೇಶ್ವರ ದೇವಾಲಯ ಯೋಜನೆ, 1445 ಕೋಟಿ ರೂಪಾಯಿ ವೆಚ್ಚದ ಮಹಾಲಕ್ಷ್ಮಿ ಮಂದಿರ ಯೋಜನೆ ಹಾಗೂ 829 ಕೋಟಿ ರೂಪಾಯಿ ವೆಚ್ಚದ ಮಹೂರ್ಗಢ ಅಭಿವೃದ್ಧಿ ಯೋಜನೆಗೆ ಅನುಮೋದನೆ ನೀಡಲಾಗಿತ್ತು.
ಒಟ್ಟು ಏಳು ಯೋಜನೆಗಳ ಪೈಕಿ ನಾಲ್ಕಕ್ಕೆ ಸರ್ಕಾರ ಬುಧವಾರ ಆಡಳಿತಾತ್ಮಕ ಅನುಮೋದನೆ ನೀಡಿದೆ. ಇದರಲ್ಲಿ 147.8 ಕೋಟಿ ರೂಪಾಯಿ ವೆಚ್ಚದ ಅಷ್ಟವಿನಾಯಕ ದೇವಾಲಯ ಅಭಿವೃದ್ಧಿ ಯೋಜನೆ ಸೇರಿದೆ. ಈ ಪೈಕಿ 100 ಕೋಟಿಯನ್ನು ಅಭಿವೃದ್ಧಿ ಕಾರ್ಯಗಳಿಗೆ ಹಾಗೂ 47.4 ಕೋಟಿ ರೂಪಾಯಿಗಳನ್ನು ವಿದ್ಯುದ್ದೀಕರಣ, ದೀಪಾಲಂಕಾರ, ಮತ್ತು ಪ್ರಾಚ್ಯವಸ್ತು ಸಲಹಾ ಸೇವೆಗೆ ನಿಗದಿಪಡಿಸಲಾಗಿದೆ. ದೇವಾಲಯ ಅಭಿವೃದ್ಧಿಯ ಜತೆಗೆ ಭಕ್ತರಿಗೆ ಲಭ್ಯವಾಗುವ ನಾಗರಿಕ ಸೌಲಭ್ಯಗಳನ್ನು ಕೂಡಾ ಹೆಚ್ಚಿಸಲು ಉದ್ದೇಶಿಸಲಾಗಿದೆ.







